ಚೆನ್ನವೀರಸ್ವಾಮೀಜಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಸದ್ವಿಚಾರಗೋಷ್ಠಿ-344 ಸಮಾರಂಭದಲ್ಲಿ ಊರನಹಿರಿಯಮಠದ ಪೀಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಷಷ್ಠಿಪೂರ್ತಿ ಅಂಗವಾಗಿ ಅವರಿಗೆ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ನಾಣ್ಯದ ತುಲಾಭಾರ ಮಾಡಲಾಯಿತು.
ಸಿಂದಗಿ: ‘ಗುರುವಿನಿಂದ(ಪ್ರಭು ಸಾರಂಗದೇವ ಶ್ರೀಗಳು) ಗುರುವಿಗೆ(ಶಿವಾನಂದ ಶ್ರೀಗಳು) ಮಾಡುವ ತುಲಾಭಾರ ಕಾರ್ಯ ಅತ್ಯಂತ ವಿಶೇಷ. ಇಬ್ಬರೂ ಶ್ರೀಗಳು ಮಾತೃಹೃದಯಿಗಳು. ತುಲಾಭಾರ ಭಾರತೀಯ ಪರಂಪರೆಯಲ್ಲಿ ಪ್ರಾಚೀನ ಕಾಲದಿಂದಲೂ ಮುಂದುವರೆದು ಬಂದಿದೆ’ ಎಂದು ಜಾನಪದ ವಿದ್ವಾಂಸ ಎಂ.ಎಂ.ಪಡಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಸಾರಂಗಮಠದ ಆವರಣದಲ್ಲಿ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಗುರುವಾರ ರಾತ್ರಿ ಸದ್ವಿಚಾರಗೋಷ್ಠಿ-344 ಸಮಾರಂಭದಲ್ಲಿ ಶಿವಾನಂದ ಶಿವಾಚಾರ್ಯರ ಷಷ್ಠ್ಯಿಪೂರ್ತಿ ಅಂಗವಾಗಿ ಹಮ್ಮಿಕೊಂಡಿದ್ದ ತುಲಾಭಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾರಂಗಮಠ ಮತ್ತು ಊರನಹಿರಿಯಮಠ ಇವೆರಡೂ ತ್ರಿವೇಣಿ ಸಂಗಮ ಇದ್ದಂತೆ. ಸಾರಂಗಮಠದಲ್ಲಿ ಚೆನ್ನವೀರ ಶ್ರೀಗಳು, ಪ್ರಭು ಸಾರಂಗದೇವ ಶ್ರೀಗಳು, ವಿಶ್ವಪ್ರಭುದೇವ ಶ್ರೀಗಳು. ಅದೇ ರೀತಿ ಊರನಹಿರಿಯಮಠದಲ್ಲಿ ಶಾಂತವೀರ ಪಟ್ಟಾಧ್ಯಕ್ಷರು, ತೋಂಟದ ಡಾ.ಸಿದ್ಧಲಿಂಗ ಶ್ರೀಗಳು ಹಾಗೂ ಶಿವಾನಂದ ಶ್ರೀಗಳು ಎಂದು ಸಾಮ್ಯತೆ ತಿಳಿಸಿದರು.
ಸಾರಂಗಮಠದ ಚೆನ್ನವೀರ ಶ್ರೀಗಳು ಸಿಂದಗಿ ಪಟ್ಟಣದಲ್ಲಿ 1944 ರಲ್ಲಿ ಶೈಕ್ಷಣಿಕ ಬೀಜ ಬಿತ್ತಿದ್ದಾರೆ. ಅಂತೆಯೇ ಇಂದು ಸಾರಂಗಮಠ ನಾಡಿನಲ್ಲಿ ಶೈಕ್ಷಣಿಕ, ಸಾಂಸ್ಕೃತಿಕವಾಗಿ ಪ್ರಮುಖ ಕೇಂದ್ರವಾಗಿದೆ ಎಂದು ಹೇಳಿದರು.
ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಇದು ನನ್ನ ಜೀವನದ ಸಾರ್ಥಕ ಗಳಿಗೆ’ ಎಂದು ಕೃತಜ್ಞತೆ ಸಲ್ಲಿಸಿದರು.
ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮಾನವೀಯ ಮೌಲ್ಯಗಳ ಪರಿಚಯ ಮಾಡಿಕೊಡಬೇಕು. ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ವ್ಯಕ್ತಿಯ ಹಿರಿಮೆ-ಗರಿಮೆಗೆ ಸಂಸ್ಕಾರವೇ ಮುಖ್ಯ. ಪ್ರತಿಯೊಬ್ಬರು ಗುರುಭಕ್ತಿ ಹೊಂದಿ ಗುರುಸೇವೆಗೆ ಮುಂದಾಗಬೇಕು ಎಂದು ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಸಾರಂಗಮಠದ ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿ ಪುರಸ್ಕೃತರಾದ ಜಾನಪದ ವಿದ್ವಾಂಸ ಎಂ.ಎಂ.ಪಡಶೆಟ್ಟಿ, ಸಾರಂಗಮಠದ ಹಳೆಯ ವಿದ್ಯಾರ್ಥಿಗಳಾದ ಅಬಕಾರಿ ಇಲಾಖೆಯ ಅಧಿಕಾರಿ ಶ್ರೀಶೈಲ ಹಿರೇಮಠ, ಪೊಲೀಸ್ ಇಲಾಖೆಯ ಸಂಗಯ್ಯ ಹಿರೇಮಠ ಹಾಗೂ ಬಿ.ಜಿ.ಮರ್ತೂರ ಅವರನ್ನು ಗೌರವಿಸಲಾಯಿತು.
ಊರನಹಿರಿಯಮಠದ ಸದ್ಭಕ್ತರಿಂದ ಪ್ರಭು ಸಾರಂಗದೇವ ಶಿವಾಚಾರ್ಯರಿಗೆ ಗುರುಪೂರ್ಣಿಮೆಯ ಗುರುನಮನ ಗೌರವ ಸನ್ಮಾನ ಸಲ್ಲಿಸಿದರು.
ಪೂಜಾ ಹಿರೇಮಠ, ಶರಣಬಸು ಜೋಗೂರ ಮಾತನಾಡಿದರು.
ಸಂಶಿ ವಿರಕ್ತಮಠದ ಶ್ರೀಗಳು, ಊರನಹಿರಿಯಮಠ ಲಿಂಗದೇವರು, ಗದಗ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯ ಶಿವಪ್ರಸಾದದೇವರು,ವೀರಶೈವ ಮಹಾಸಭೆ ತಾಲ್ಲೂಕು ಸಮಿತಿ ಅಧ್ಯಕ್ಷ ಅಶೋಕ ವಾರದ, ದಯಾನಂದಗೌಡ ಬಿರಾದಾರ, ವಿಶ್ವನಾಥ ಜೋಗೂರ, ಶಿವಜಾತಸ್ವಾಮಿ ಹಿರೇಮಠ, ಶ್ರೀಶೈಲ ನಂದಿಕೋಲ, ಶರಣಯ್ಯ ಮಠ, ಬಸವರಾಜ ವಸ್ತ್ರದ, ಮಹಾನಂದ ಬಮ್ಮಣ್ಣಿ ಹಾಗೂ ಬಂದಾಳ, ರಾಂಪೂರ ಪಿ.ಎ, ಬ್ಯಾಕೋಡ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡಿದ್ದರು.
ತುಲಾಭಾರ ಹಣ ಮಠಕ್ಕೆ ಮರಳಿಸಿದ ಶ್ರೀಗಳುಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅವರು ತುಲಾಭಾರದ ಹಣವನ್ನು ಶ್ರೀಮಠದಲ್ಲಿನ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನದ ಪೂಜಾ ಕಾರ್ಯಕ್ಕಾಗಿ ಉಪಯೋಗಿಸಿಕೊಳ್ಳಬೇಕು ಎಂದು ಮರಳಿಸಿದರು. ತುಲಾಭಾರ ಮಾಡುವ ಸಂದರ್ಭದಲ್ಲಿ ಶಕುಂತಲಾ ಹಿರೇಮಠರು ಹಾಡಿದ 'ಮಗನ ತೂಗಿರೋ ಭಕ್ತರು ಮಗನ ತೂಗಿರೋ' ಹಾಡು ಹೃದಯಸ್ಪರ್ಶಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.