ADVERTISEMENT

ಎಸ್ಸೆಸ್ಸೆಲ್ಸಿಯಲ್ಲಿ ‘ಟಾಪ್ 10’ ಫಲಿತಾಂಶದ ಗುರಿ ಹೊತ್ತ ವಿಜಯಪುರ

ಎಸ್ಸೆಸ್ಸೆಲ್ಸಿ; 2018–19ನೇ ಸಾಲಿನಲ್ಲಿ ರಾಜ್ಯಕ್ಕೆ 25ನೇ ಸ್ಥಾನ ಪಡೆದ ಜಿಲ್ಲೆ

ಬಾಬುಗೌಡ ರೋಡಗಿ
Published 23 ನವೆಂಬರ್ 2019, 19:30 IST
Last Updated 23 ನವೆಂಬರ್ 2019, 19:30 IST

ವಿಜಯಪುರ: 2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶವನ್ನು ಹೆಚ್ಚಿಸಲು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವಿನೂತನ ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ.

2017–18ನೇ ಸಾಲಿನಲ್ಲಿ 9ನೇ ಸ್ಥಾನ ಪಡೆದಿದ್ದ ಜಿಲ್ಲೆ, 2018–19ನೇ ಸಾಲಿನಲ್ಲಿ 25ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. 2019–20ನೇ ಸಾಲಿನಲ್ಲಿ ಮೊದಲ 10 ಸ್ಥಾನಗಳಲ್ಲಿ ಬರುವ ಗುರಿ ಯೊಂದಿಗೆ ಶಾಲೆ ದತ್ತು, ಮನೆ ಮನೆಗೆ ಭೇಟಿ, ಪಾಲಕರೊಂದಿಗೆ ಸಂವಾದ, ಮಕ್ಕಳಿಗೆ ಮತ್ತು ಶಿಕ್ಷಕರಿಗೆ ವಿಶೇಷ ತರಬೇತಿ, ಗುಂಪು ರಚನೆ, ಹೆಚ್ಚುವರಿ ತರಗತಿ ನಡೆಸುವುದು ಸೇರಿದಂತೆ ಇತರ ಹಲವು ವಿಶಿಷ್ಟ ಯೋಜನೆಗಳ ಮೂಲಕ ಪ್ರಯೋಗಕ್ಕೆ ಮುಂದಾಗಿದೆ.

‘ಫಲಿತಾಂಶ ಕಡಿಮೆ ಇರುವ ಶಾಲೆಗಳು ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷವಾಗಿ ತರಬೇತಿ ನೀಡಲಾಗುತ್ತಿದೆ. ಶಾಲೆಯಲ್ಲಿ ಅಷ್ಟೇ ಅಲ್ಲದೆ ಮನೆಯಲ್ಲೂ ಓದಿನ ವಾತಾವರಣ ನಿರ್ಮಿಸಲು ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ, ಪಾಲಕರೊಂದಿಗೆ ಸಂವಾದ ನಡೆಸಿ ಅರಿವು ಮೂಡಿಸುತ್ತಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪ್ರಸನ್ನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕಿರು ಪರೀಕ್ಷೆ, ಘಟಕ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆಯುವ ಮಕ್ಕಳ ಸಮಸ್ಯೆ ಆಲಿಸಿ, ವಿಶೇಷ ಒತ್ತು ನೀಡಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಅಕ್ಟೋಬರ್‌ ರಜೆಯಲ್ಲೂ ತರಬೇತಿ ನೀಡಲಾಗಿದೆ. ಡಿಸೆಂಬರ್‌ ಅಂತ್ಯದೊಳಗಾಗಿ ಪಠ್ಯಕ್ರಮವನ್ನು ಪೂರ್ಣಗೊಳಿಸಿ, ಪನರಾವರ್ತನೆಗೆ ಸೂಚಿಸಲಾಗಿದೆ. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿಕೊಡುವಂತೆ ಪಾಲಕರಿಗೆ ತಿಳಿಹೇಳಲಾಗಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.