
ಸಿಂದಗಿ: ಪ್ರಶಸ್ತಿಗಳು ಬಯಸದೇ, ಕೇಳದೆ ತಾನಾಗಿಯೇ ಬರಬೇಕು. ಆದರೆ ಪ್ರಶಸ್ತಿಗಾಗಿ ಅರ್ಜಿ ಹಾಕಿ ವಶೀಲಿಬಾಜಿ, ರಾಜಕೀಯ ಪ್ರಭಾವಬೀರಿ ಪ್ರಶಸ್ತಿ ಪಡೆದುಕೊಂಡರೆ ಅದಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ. ಈ ಹಿಂದೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸುತ್ತಿತ್ತು. ಆದರೆ ಈ ಬಾರಿ ಅರ್ಜಿಗೆ ಅವಕಾಶ ನೀಡದೇ ಸರ್ಕಾರವೇ ಗುರುತಿಸಿ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ’ ಎಂದು ನಿವೃತ್ತ ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.
ಪಟ್ಟಣದ ಎಲೈಟ್ ಪಿಯು ಕಾಲೇಜು ಆವರಣದಲ್ಲಿ ಬೋರಗಿ ಗ್ರಾಮದ ನಬಿರೋಷನ್ ಪ್ರಕಾಶನ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹ.ಮ.ಪೂಜಾರ ಬದುಕು-ಬರಹ ಕುರಿತು ಬರಹಗಾರ ಅಶೋಕ ಬಿರಾದಾರ ಉಪನ್ಯಾಸ ನೀಡಿ, ‘ಹ.ಮ.ಪೂಜಾರ ಅವರು ಸಾಹಿತ್ಯ ರಚನೆಯ ಜೊತೆಗೆ ಮಕ್ಕಳ ಬಳಗ ಸ್ಥಾಪಿಸಿ ಮಕ್ಕಳ ವಿಕಸನಕ್ಕಾಗಿ ಸಂಘಟನಾತ್ಮಕ, ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಲೇ ಬಂದಿದ್ದಾರೆ’ ಎಂದು ಹೇಳಿದರು.
ಪ್ರಕಾಶನ ಸಂಚಾಲಕ ಮೌಲಾಲಿ ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಣದೀರ ಪಡೆ ಉತ್ತರಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಮಣಿಗಿರಿ, ಎಲೈಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಿಬೂಬ ಅಸಂತಾಪೂರ, ಪ್ರಾಚಾರ್ಯ ಐ.ಎ.ಜುಮನಾಳ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಾಧಕರಾದ ಇಮಾಂಬಿ ದೊಡಮನಿ, ಸೀತಮ್ಮ ಕಟ್ಟಿಮನಿ, ಸಂಗಮೇಶ ಛಾಯಾಗೋಳ, ಮಲಕಮ್ಮ ಮದಬಾವಿ, ಭಾಗೇಶ ಗೋಲಗೇರಿ, ಎಂ.ಎನ್.ಪೂಜಾರಿ, ಪ್ರಹ್ಲಾದ ಜಿ.ಕೆ ಅವರಿಗೆ ಸಂಸ್ಥೆಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಕ್ಕಳ ಸಾಹಿತ್ಯ ಸೇವೆ ಸಾರ್ಥಕ ಭಾವ ಮೂಡಿಸಿದೆ. ಸಿಂದಗಿ ಪಟ್ಟಣದ ಜನತೆ ಸಂಭ್ರಮಿಸುತ್ತಿದ್ದಾರೆ. ನಬಿರೋಷನ್ ಪ್ರಕಾಶನ ನೀಡಿದ ಹೃದಯಸ್ಪರ್ಶಿ ಗೌರವ ಧನ್ಯತಾಭಾವ ಹೆಚ್ಚಿಸಿದೆಹ.ಮ.ಪೂಜಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಹ.ಮ.ಪೂಜಾರ ಅವರು ಮಕ್ಕಳ ಸಾಹಿತ್ಯದ ಗಟ್ಟಿಧ್ವನಿ. ಇವರ ಸಾಹಿತ್ಯ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಪಠ್ಯಪುಸ್ತಕದ ವಿಷಯಗಳಾಗಿವೆಎನ್.ಎಂ.ಬಿರಾದಾರ ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.