ADVERTISEMENT

ಆಲಮಟ್ಟಿ | ರಾಜ್ಯ ಮಟ್ಟದ ಕೊಕ್ಕೊದಲ್ಲಿ ಪ್ರಥಮ: ಸಾರೋಟಿನಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:28 IST
Last Updated 27 ಅಕ್ಟೋಬರ್ 2025, 4:28 IST
ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ವಿಜೇತರಾದ ಬಾಲಕಿಯರನ್ನು ಭಾನುವಾರ ಆಲಮಟ್ಟಿಯಿಂದ-ಬೇನಾಳದವರೆಗೆ ಸಾರೋಟಿನಲ್ಲಿ ಮೆರವಣಿಗೆ ಮಾಡುವ ಕಾರ್ಯಕ್ರಮಕ್ಕೆ ಸಿಪಿಐ ಶರಣಗೌಡ ಗೌಡರ ಹಾಗೂ ಎಸ್.ಬಿ. ದಳವಾಯಿ ಚಾಲನೆ ನೀಡಿದರು
ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ವಿಜೇತರಾದ ಬಾಲಕಿಯರನ್ನು ಭಾನುವಾರ ಆಲಮಟ್ಟಿಯಿಂದ-ಬೇನಾಳದವರೆಗೆ ಸಾರೋಟಿನಲ್ಲಿ ಮೆರವಣಿಗೆ ಮಾಡುವ ಕಾರ್ಯಕ್ರಮಕ್ಕೆ ಸಿಪಿಐ ಶರಣಗೌಡ ಗೌಡರ ಹಾಗೂ ಎಸ್.ಬಿ. ದಳವಾಯಿ ಚಾಲನೆ ನೀಡಿದರು   

ಆಲಮಟ್ಟಿ: ಸಾರೋಟಿನಲ್ಲಿ ಮೆರವಣಿಗೆ, ಮೆರವಣಿಗೆಯುದ್ದಕ್ಕೂ ಡಿಜೆಯ ಅಬ್ಬರ, ಸನ್ಮಾನದ ಮಹಾಪೂರ. ಹಲವೆಡೆ ಆರತಿ ಮಾಡಿ ಸಿಂಧೂರದ ತಿಲಕ ಹಚ್ಚಿ ಸ್ವಾಗತ. ರಂಗೋಲಿಯ ಚಿತ್ತಾರ, ಪಟಾಕಿಗಳ ಅಬ್ಬರ, ಪರಸ್ಪರ ಗುಲಾಲು ಎರಚುವಿಕೆ...

ಇದು ಬೆಳಗಾವಿ ಜಿಲ್ಲೆಯ ನಾಗನೂರಿನಲ್ಲಿ ಶನಿವಾರ ಜರುಗಿದ 14 ವಯೋಮಾನದೊಳಗಿನ ಬಾಲಕಿಯರ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ವಿಜೇತರಾದ ಸಮೀಪದ ಬೇನಾಳ ಆರ್.ಎಸ್. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡವನ್ನು ಭಾನುವಾರ ಆಲಮಟ್ಟಿಯಿಂದ ಬೇನಾಳವರೆಗೆ ಸಾರೋಟಿನಲ್ಲಿ ಸ್ವಾಗತಿಸಿದ ಮೆರವಣಿಗೆಯ ದೃಶ್ಯ.

ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿ ಮೆರವಣಿಗೆಗೆ ಚಾಲನೆ ನೀಡಿದ ನಿಡಗುಂದಿ ಸಿಪಿಐ ಶರಣಗೌಡ ಗೌಡರ ಮಾತನಾಡಿ, ‘ಹಳ್ಳಿಯ ಬಾಲಕಿಯರು ಎರಡನೇ ಬಾರಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಸಾಧನೆಯೇ ಸರಿ. ಈ ಚಿಕ್ಕ ಹಳ್ಳಿ ಬಾಲಕಿಯರ ಕ್ರೀಡಾ ಸಾಧನೆ, ಅದಕ್ಕೆ ಗ್ರಾಮಸ್ಥರು, ಶಿಕ್ಷಕರು ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ’ ಎಂದರು. ‘ಈ ಬಾಲಕಿಯರ ಕ್ರೀಡಾ ಸಾಧನೆ ಹೀಗೆಯೇ ಮುಂದುವರಿಯಲಿ, ಅದಕ್ಕೆ ಸೂಕ್ತ ಪ್ರೋತ್ಸಾಹ, ಸಹಕಾರ ನೀಡಲಾಗುವುದು’ ಎಂದರು.

ADVERTISEMENT

ಸರ್ಕಾರಿ ನೌಕರರ ಸಂಘದ ಯೋಜನಾ ಶಾಖೆಯ ಅಧ್ಯಕ್ಷ ಎಸ್.ಬಿ. ದಳವಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಬಡಿಗೇರ, ಕ್ರೀಡಾಪಟುಗಳನ್ನು ಸನ್ಮಾನಿಸಿ ಸಿಹಿ ವಿತರಿಸಿದರು. ಜಿ.ಸಿ. ಮುತ್ತಲದಿನ್ನಿ, ಮಹೇಶ ಗಾಳಪ್ಪಗೋಳ ಮಾತನಾಡಿ ಕ್ರೀಡಾ ಸಾಧಕರ ಪರಿಚಯ ಮಾಡಿದರು.

ಆಲಮಟ್ಟಿಯಿಂದ ಆರಂಭಗೊಂಡ ಸಾರೋಟು ಮೆರವಣಿಗೆ ಆರು ಕಿ.ಮೀ ದೂರದ ಬೇನಾಳ ಗ್ರಾಮದವರೆಗೂ ಸಾಗಿತು. ದಾರಿಯುದ್ದಕ್ಕೂ ಜನ ಹೂ ತೂರುತ್ತ, ಹಲವು ಕಡೆ ಸಾರೋಟ ನಿಲ್ಲಿಸಿ ಪ್ರತಿ ಕ್ರೀಡಾಪಟುವನ್ನೂ ಸ್ವಾಗತಿಸುತ್ತಿರುವ ದೃಶ್ಯ ಕಂಡು ಬಂತು.

ಬೇನಾಳ ಆರ್.ಎಸ್. ಗ್ರಾಮಕ್ಕೆ ಸಾರೋಟು ಮೆರವಣಿಗೆ ಕಾಲಿಡುತ್ತಿದ್ದಂತೆ ಪಟಾಕಿಗಳ ಅಬ್ಬರವೂ ಹೆಚ್ಚಾಗಿ, ಇಡೀ ಗ್ರಾಮವೇ ಸ್ವಾಗತಕ್ಕಾಗಿ ಕಾದಿತ್ತು. ಗ್ರಾಮದ ಪ್ರತಿ ದೇವಸ್ಥಾನಕ್ಕೂ ತೆರಳಿ ದೇವರ ಆಶೀರ್ವಾದ ಪಡೆದ ಕ್ರೀಡಾಪಟುಗಳನ್ನು ಮನೆ ಮನೆಗಳ ಬಳಿ ನಿಂತು ಅಲ್ಲಿನ ಜನ ಆರತಿ ಬೆಳಗಿ ವಿಜಯದ ತಿಲಕ ಇಡುತ್ತಿರುವ ದೃಶ್ಯ ಕಂಡು ಬಂತು. ನಂತರ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಾಲಕಿಯರು ಗೆದ್ದ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿಯ ಟ್ರೋಫಿಯನ್ನು ಮುಖ್ಯ ಶಿಕ್ಷಕ ಹನುಮಂತಪ್ಪ ಇಲಾಳ ಅವರಿಗೆ ಹಸ್ತಾಂತರಿಸಿದರು.

ಗ್ರಾಮದ ಜಿ.ಸಿ. ಮುತ್ತಲದಿನ್ನಿ, ಟಿ.ಎಸ್. ಬಿರಾದಾರ, ಬುಡ್ಡೇಸಾಬ್ ಬಾಗವಾನ, ಬೈಲಪ್ಪ ಬಾಗೇವಾಡಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ, ಗ್ಯಾನಪ್ಪ ಚಲವಾದಿ, ಬಿ.ಜಿ. ಬನ್ನೂರ, ರಮೇಶ ಆಲಮಟ್ಟಿ, ಮುರಳಿ ಬಡಿಗೇರ, ಶಿವು ಗದಿಗೆಪ್ಪಗೌಡರ, ಶಾಲಾ ಶಿಕ್ಷಕ ಸಿಬ್ಬಂದಿ ಆನಂದ ರೇವಡಿ, ಸೀತಾರಾಮ ರಾಠೋಡ, ಎಸ್‌ಡಿಎಂಸಿ ಅಧ್ಯಕ್ಷ ಮುನ್ನಾ ಬೆಣ್ಣಿ ಇದ್ದರು.

ಬಾಲಕಿಯರ ಕೊಕ್ಕೊ ತಂಡದ ನಾಯಕಿ ಬೇನಾಳ ಆರ್.ಎಸ್. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ ವಡಗೇರಿ, ಅಪೇಕ್ಷಾ ತೋಟದ, ರೂಪಾ ಅಕ್ಕೋಜಿ, ಸಿಂಚನಾ ಚಿನಿವಾಲರ, ದಾನೇಶ್ವರಿ ಬಾಗೇವಾಡಿ, ಅಯ್ಯಮ್ಮ ಹಾವರಗಿ, ಪ್ರೀಯಾ ಇಂಗಳೇಶ್ವರ, ಯಲಗೂರು ಶಾಲೆಯ ವಿದ್ಯಾರ್ಥಿನಿಯರಾದ ಯಮುನಾ ಪಾತ್ರದ, ರಂಜಿತಾ ಪಾದನಕಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಎನ್.ಬಿ. ದಾಸರ, ಟೀಂ ವ್ಯವಸ್ಥಾಪಕಿ ನೀಲಮ್ಮ ತಳವಾರ ಸಾರೋಟಿನಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.