ADVERTISEMENT

ಬಸವಣ್ಣ, ನಾರಾಯಣಗುರು ಸುಧಾರಕರು

ರಾಜ್ಯಮಟ್ಟದ ವಿಚಾರ ಸಂಕಿರಣ; ಅರವಿಂದ ಚೊಕ್ಕಾಡಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 12:07 IST
Last Updated 7 ಸೆಪ್ಟೆಂಬರ್ 2019, 12:07 IST
ವಿಜಯಪುರದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿ ಬಾಬು ಶಿವ ಪೂಜಾರಿ ಉದ್ಘಾಟಿಸಿದರು
ವಿಜಯಪುರದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿ ಬಾಬು ಶಿವ ಪೂಜಾರಿ ಉದ್ಘಾಟಿಸಿದರು   

ವಿಜಯಪುರ: ‘ಉತ್ತರ ಕರ್ನಾಟಕದಲ್ಲಿ ಬಸವಣ್ಣನವರು ಹಾಗೂ ದಕ್ಷಿಣ ಕರ್ನಾಟಕದಲ್ಲಿ ನಾರಾಯಣಗುರು ಸಮಾಜ ಸುಧಾರಣೆ ಕೆಲಸ ಮಾಡಿದ್ದಾರೆ’ ಎಂದು ಚಿಂತಕ ಅರವಿಂದ ಚೊಕ್ಕಾಡಿ ಹೇಳಿದರು.

ನಗರದ ಕಲಾಭವನದಲ್ಲಿ ಮಂಗಳೂರು ವಿಶ್ವವಿದ್ಯಾಲಯ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಹಾಗೂ ನಗರದ ಚಾಣಕ್ಯ ಪ್ರಕಾಶನದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಗುರು ನಾರಾಯಣ ಮತ್ತು ಬಸವಣ್ಣ ಮಾನವ ಸೋದರತೆಯ ಪ್ರಗತಿಪಥ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕಕ್ಕೆ ನಾರಾಯಣಗುರು ಹಾಗೂ ದಕ್ಷಿಣ ಕರ್ನಾಟಕಕ್ಕೆ ಬಸವಣ್ಣನವರ ಸಮಾಜ ಸುಧಾರಣಾ ಕಾರ್ಯಗಳನ್ನು ಮುಟ್ಟಿಸುವ ಕಾರ್ಯ ನಡೆಯಬೇಕಾಗಿದೆ’ ಎಂದು ಆಶಿಸಿದರು.

ADVERTISEMENT

ಉಡುಪಿಯ ಡಾ.ಜ್ಯೋತಿ ಚೇಳ್ಯಾರು ಮಾತನಾಡಿ, ‘ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಬಸವಣ್ಣ, ನಾರಾಯಣಗುರು ಪಾತ್ರ ಮಹತ್ವದ್ದಾಗಿದೆ. ಕೇರಳ ಹಾಗೂ ಮಂಗಳೂರು, ಉಡುಪಿ, ಚಿಕ್ಕಮಂಗಳೂರು ಭಾಗದಲ್ಲಿ ನಾರಾಯಣ ಗುರು ಅನೇಕ ಸಮಾಜ ಸುಧಾರಕ ಕಾರ್ಯಗಳನ್ನು ಮಾಡಿದ್ದಾರೆ. ಮೂಢನಂಬಿಕೆ, ಅಸ್ಪೃಶ್ಯತೆ ಹೋಗಲಾಡಿಸಲು ಶ್ರಮಿಸಿದ್ದಾರೆ. ಜಾತಿ ವ್ಯವಸ್ಥೆ, ಬಹುಪತ್ನಿತ್ವ ಮತ್ತು ಬಹುಪತಿತ್ವವನ್ನು ವಿರೋಧಿಸಿದ್ದರು’ ಎಂದು ತಿಳಿಸಿದರು.

ಸಾಹಿತಿ ಶಿವಶರಣಪ್ಪ ಬಳಿಗಾರ ಮಾತನಾಡಿ, ‘12ನೇ ಶತಮಾನ ಸಂಕ್ರಮಣ ಕಾಲ. ಈ ಸಂದರ್ಭದಲ್ಲಿ ಹಲವು ಸಮಾಜ ಸುಧಾರಕರು ಆಗಿಹೋದರು. ಅವರಲ್ಲಿ ಬಸವಣ್ಣ ಹಾಗೂ ನಾರಾಯಣಗುರು ಪ್ರಮುಖರು. ಬಸವಣ್ಣನವರು ಜಾತಿರಹಿತ ಸಮಾಜ, ಅಂತರ್ಜಾತಿ ವಿವಾಹದಂತಹ ಹಲವಾರು ಸಮಾಜ ಸುಧಾರಣೆಗಳನ್ನು ಮಾಡಿದ್ದಾರೆ. ಬಸವಣ್ಣನವರು ವಚನ ಸಾಹಿತ್ಯವನ್ನು ಹೊರತಂದರು. ಇವರಂತೆ ನಾರಾಯಣ ಗುರು ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮಹಾನ್ ದಾರ್ಶನಿಕರಾಗಿದ್ದಾರೆ’ ಎಂದರು.

ಹಿರಿಯ ಸಾಹಿತಿ ಬಾಬು ಶಿವ ಪೂಜಾರಿ ಮಾತನಾಡಿ, ‘ಬ್ರಿಟಿಷ್ ಕಾಲದಲ್ಲಿ ಭಾರತದಲ್ಲಿ ಹಲವು ತೆರಿಗೆ ಪದ್ಧತಿಗಳು ಜಾರಿಯಲ್ಲಿದ್ದವು. ಈ ತೆರಿಗೆ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ ಮೊದಲ ಸಮಾಜ ಸುಧಾರಕ ನಾರಾಯಣಗುರು. 1854ರಲ್ಲಿ ಜನಿಸಿದ ನಾರಾಯಣ ಗುರು ಸಮಾಜ ಸುಧಾರಕರಾಗಿ ಖ್ಯಾತರಾಗಿದ್ದಾರೆ’ ಎಂದು ಹೇಳಿದರು.

ಬಾಬು ಶಿವ ಪೂಜಾರಿ ಉದ್ಘಾಟಿಸಿದರು. ಬಿ.ಎಂ.ರೋಹಿಣಿ, ಖಾದರ್ ಮೊಹಿನುದ್ದೀನ್ ಇದ್ದರು. ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ ಎನ್.ಎಂ.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.