ಸಿಂದಗಿ: ತಾಲ್ಲೂಕಿನ ಬನ್ನೆಟ್ಟಿ ಪಿ.ಎ. ಗ್ರಾಮದಲ್ಲಿ ಸೋಮವಾರ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಅಪಘಾತದಲ್ಲಿ ಪ್ರೌಢಶಾಲಾ ವಿದ್ಯಾರ್ಥಿ ಸಂದೀಪ ಗಿಡ್ಡಯಲ್ಲವ್ವಗೋಳ ಮೃತಪಟ್ಟಿರುವ ಕಾರಣ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಶಾಖೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿಯ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಪ್ರೌಢಶಾಲೆಯ ವಿದ್ಯಾರ್ಥಿಗಳು ವರ್ಗ ಬಹಿಷ್ಕರಿಸಿ ಮೆರವಣಿಗೆ ಮೂಲಕ ಪ್ರಮುಖ ರಸ್ತೆಗಳಲ್ಲಿ ಹಾದು ಬಸವೇಶ್ವರ ವೃತ್ತ ತಲುಪಿದರು.
ಎಬಿವಿಪಿ ತಾಲ್ಲೂಕು ಸಂಚಾಲಕ ವಿಶಾಲ ನಾಯ್ಕೋಡಿ ಮಾತನಾಡಿ, ‘ಬನ್ನೆಟ್ಟಿ ಪಿ.ಎ ಗ್ರಾಮದಿಂದ ಸಿಂದಗಿ ಎಚ್.ಜಿ. ಪ್ರೌಢಶಾಲೆಗೆ ಬರಲು ಸಾರಿಗೆ ಬಸ್ ಹತ್ತಿ ಹೊರಡುವ ಸಂದರ್ಭದಲ್ಲಿ ವಿದ್ಯಾರ್ಥಿ ಕೆಳಗೆ ಬಿದ್ದು ಮೃತಪಟ್ಟಿದ್ದು, ಈ ಅಪಘಾತಕ್ಕೆ ಬಸ್ ಚಾಲಕ ಮತ್ತು ನಿರ್ವಾಹಕರ ನಿರ್ಲಕ್ಷ್ಯವೇ ಕಾರಣ. ತಕ್ಷಣ ಇವರಿಬ್ಬರನ್ನೂ ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿದರು.
‘ಮೃತ ವಿದ್ಯಾರ್ಥಿ ಕುಟುಂಬಕ್ಕೆ ಸರ್ಕಾರದಿಂದ ₹ 25 ಲಕ್ಷ ಪರಿಹಾರ ನೀಡಬೇಕು. ರಾಜ್ಯ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ರದ್ದುಗೊಳಿಸಬೇಕು. ಅಥವಾ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳದಲ್ಲಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹಾಗೂ ಸಾರಿಗೆ ಘಟಕದ ಸಾರಿಗೆ ಸಹಾಯಕ ಸಂಚಾರ ನಿರೀಕ್ಷಕ ಎಸ್.ಬಿ. ನಾಗಾವಿ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಮುತ್ತು ತಳವಾರ, ಆಕಾಶ ಬಿರಾದಾರ, ರವಿ ರೆಬಿನಾಳ, ನಿಂಗರಾಜ ಪೂಜಾರಿ, ಸಾಗರ ರೆಬಿನಾಳ, ರಾಕೇಶಕುಮಾರ ಯಲಗೋಡ, ಮೌನೇಶ ಪೂಜಾರಿ, ಸೋಮಲಿಂಗ ಮಮದಾಪುರ, ಶ್ರೀಶೈಲ ಬಿರಾದಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
‘ಮೃತ ವಿದ್ಯಾರ್ಥಿ ಕುಟುಂಬದ ಸದಸ್ಯರಿಗೆ ಅಂತ್ಯಕ್ರಿಯೆಗಾಗಿ ₹ 50 ಸಾವಿರ ನೀಡಲಾಗಿದೆ. ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಇನ್ನೂ 15 ದಿನಗಳೊಳಗೆ ₹ 9.50 ಲಕ್ಷವನ್ನು ಸಾರಿಗೆ ಸಂಸ್ಥೆಯಿಂದ ಪರಿಹಾರ ನೀಡಲಾಗುವುದು’ ಎಂದು ಸಾರಿಗೆ ಘಟಕದ ವ್ಯವಸ್ಥಾಪಕ ರೇವಣಸಿದ್ದ ಖೈನೂರ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.