ಎಂ.ಬಿ.ಪಾಟೀಲ
ವಿಜಯಪುರ: ಇಬ್ಬರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ವಿದ್ಯಾರ್ಥಿಗಳು ವೈದ್ಯರಾಗುವ ಕನಸು ನನಸಾಗಲು ಸಹಾಯ ಹಸ್ತ ಚಾಚಿದ್ದಾರೆ.
ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದಾಗಿ ಇಬ್ಬರು ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದರು. ಈ ಮಾಹಿತಿ ತಿಳಿದ ಸಚಿವರು ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ಇಬ್ಬರೂ ವಿದ್ಯಾರ್ಥಿಗಳಿಗೆ ಕೋರ್ಸಿಗೆ ಅಗತ್ಯವಾಗಿರುವ ಕಾಲೇಜು ಪ್ರವೇಶ ಶುಲ್ಕ, ಊಟ ಹಾಗೂ ವಸತಿ ಬೇಕಾಗುವ ಒಟ್ಟು ಮೊತ್ತವನ್ನು ನೀಡಿದ್ದಾರೆ.
ತಿಕೋಟಾ ತಾಲ್ಲೂಕಿನ ಅರಕೇರಿ ಎಲ್. ಟಿ-1ರ ವಿದ್ಯಾರ್ಥಿನಿ ದಿವ್ಯಾ ಹನಮಂತ ರಾಠೋಡ ನೀಟ್ ನಲ್ಲಿ 2,23,424 ರ‍್ಯಾಂಕ್ ಪಡೆದಿದ್ದು, ಬೆಂಗಳೂರಿನ ದಯಾನಂದ ಸಾಗರ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾರೆ.
ಸಿಂದಗಿ ತಾಲ್ಲೂಕಿನ ಹಿಕ್ಕನಗುತ್ತಿಯ, ಸದ್ಯ ವಿಜಯಪುರ ನಗರದಲ್ಲಿ ವಾಸಿಸುವ ಮಂಜುನಾಥ ಲಕ್ಷ್ಮಣ ಗೊಟಗುಣಕಿ ನೀಟ್ ನಲ್ಲಿ 76,372 ರ‍್ಯಾಂಕ್ ಪಡೆದು, ಚಿತ್ರದುರ್ಗದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾರೆ.
ದಿವ್ಯಾ ರಾಠೋಡಗೆ ಕೋರ್ಸ್ ಪೂರ್ಣಗೊಳಿಸಲು ಒಟ್ಟು ₹ 9,98,484 ಅಗತ್ಯವಿದ್ದು, ಕೋರ್ಸಿನ ಮೊದಲ ವರ್ಷಕ್ಕೆ ಅಗತ್ಯವಾದ ₹2,49,621 ಹಣದ ಚೆಕ್ ಅನ್ನು ಸಚಿವರು ವಿತರಿಸಿದರು.
ವಿಜಯಪುರ ನಗರದ ನಿವಾಸಿ ಮಂಜುನಾಥ ಗೊಟಗುಣಕಿಗೆ ಕೋರ್ಸ್ ಪೂರ್ಣಗೊಳಿಸಲು ₹ 6.32 ಲಕ್ಷ ಅಗತ್ಯವಿದ್ದು, ಕೊರ್ಸಿನ ಪ್ರಥಮ ವರ್ಷಕ್ಕೆ ಅಗತ್ಯವಾದ ₹1.58 ಲಕ್ಷದ ಮೊತ್ತದ ಮೊಲದ ಕಂತಿನ ಚೆಕ್ ಅನ್ನು ವಿತರಿಸಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಡಾ. ಆರ್. ವಿ ಕುಲಕರ್ಣಿ, ಸಂಸ್ಥೆ ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್. ಎಸ್. ಪಾಟೀಲ, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.
ಈ ವರ್ಷ ಸಚಿವ ಎಂ. ಬಿ. ಪಾಟೀಲ ಅವರು ಬಿ. ಎಲ್. ಡಿ. ಇ ಸಂಸ್ಥೆಯಿಂದ ಈವರೆಗೆ ಒಟ್ಟು ಎಂಟು ಜನ ವಿದ್ಯಾರ್ಥಿಗಳು ಎಂ. ಬಿ. ಬಿ. ಎಸ್ ಓದಲು ಸಹಾಯ ಹಸ್ತ ಚಾಚಿದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.