ADVERTISEMENT

ಬಿಸಿಲು @ 40; ಬಸವಳಿದ ವಿಜಯಪುರ

ಸೂರ್ಯನ ಪ್ರಕೋಪಕ್ಕೆ ಜನ, ಜಾನುವಾರು, ಪ್ರಾಣಿ, ಪಕ್ಷಿಗಳು ಹೈರಾಣ

ಬಸವರಾಜ ಸಂಪಳ್ಳಿ
Published 29 ಏಪ್ರಿಲ್ 2022, 19:30 IST
Last Updated 29 ಏಪ್ರಿಲ್ 2022, 19:30 IST
ವಿಜಯಪುರ ನಗರದಲ್ಲಿ ಬಿಸಿಲಿನ ಪ್ರಕೋಪದಿಂದ ತತ್ತರಿಸಿದ ಜನರು ಗಗನ್‌ ಮಹಲ್‌ ಹುಲ್ಲುಹಾಸಿನ ಮೇಲೆ ಶುಕ್ರವಾರ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಕಂಡುಬಂದಿತು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದಲ್ಲಿ ಬಿಸಿಲಿನ ಪ್ರಕೋಪದಿಂದ ತತ್ತರಿಸಿದ ಜನರು ಗಗನ್‌ ಮಹಲ್‌ ಹುಲ್ಲುಹಾಸಿನ ಮೇಲೆ ಶುಕ್ರವಾರ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಕಂಡುಬಂದಿತು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಜೊತೆಗೆ ಬಿಸಿಗಾಳಿಯೂ(ಹೀಟ್‌ ವೇವ್‌) ಬೀಸುತ್ತಿದೆ. ಸೂರ್ಯನ ಪ್ರಕೋಪಕ್ಕೆ ಜನ, ಜಾನುವಾರು, ಪ್ರಾಣಿ, ಪಕ್ಷಿಗಳು ಬಸವಳಿದಿವೆ.

ಒಂದು ವಾರದ ಈಚೆಗೆ ದಿನದಿಂದ ದಿನಕ್ಕೆ ಬಿಸಿಲ ಪ್ರಕರತೆ ಏರುಗತಿಯಲ್ಲಿದೆ. ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ಬಿಸಿಲಿನ ತಾಪ ಮಧ್ಯಾಹ್ನದ ವೇಳೆಗೆ ಸಹಿಸಲು ಅಸಾಧ್ಯ ಎನಿಸುತ್ತದೆ. ಇನ್ನು ಮಧ್ಯಾಹ್ನ 12ರ ಬಳಿಕರಸ್ತೆಗಳಲ್ಲಿ ಅಡ್ಡಾಡಲು ಜನ ಹಿಂದೇಟು ಹಾಕುವಷ್ಟು ಬಿಸಿ ಗಾಳಿ ಮುಖಕ್ಕೆ ರಾಚುತ್ತದೆ. ಬೈಕ್‌, ಬಸ್‌ಗಳಲ್ಲಿ ಸಂಚರ ಅಹಿತಕರ ಎನಿಸುತ್ತದೆ.

ಬಿಸಿಲಿನಿಂದ ಪಾರಾಗಲು ಅನೇಕರು ಗಿಡ–ಮರಗಳು ನೆರಳನ್ನು ಆಶ್ರಯಿಸಿದರೆ. ಮತ್ತೆ ಕೆಲವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ತಲೆಗೆ ಟೊಪ್ಪಿ ಧರಿಸಿ, ಛತ್ರಿ ಹಿಡಿದು ಸಾಗುವುದು ಕಂಡುಬರುತ್ತದೆ. ಜಾನುವಾರುಗಳು ಗಿಡ–ಮರಗಳ ಅಡಿಯಲ್ಲಿ ಆಶ್ರಯ ಪಡೆಯುತ್ತವೆ.

ADVERTISEMENT

ಹಣ್ಣು–ಹಂಪಲು, ತಂಪಾದ ನೀರು, ಮಜ್ಜಿಗೆ, ಲಸ್ಸಿ, ಬಗೆಬಗೆಯ ಹಣ್ಣಿನ ಜ್ಯೂಸ್‌ ಕುಡಿದರೂ ದಾಹ ಇಂಗದಂತಾಗಿದೆ.ಬಿಸಿಲಾಘಾತಕ್ಕೆ ತಲೆ ಸುತ್ತುವುದು, ನಿಶಕ್ತಿ, ಸುಸ್ತಾಗುವುದು, ಆರೋಗ್ಯದಲ್ಲಿ ಏರುಪೇರಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರು ಬಿಸಿಯಾಗುವುದರಿಂದ ಬಾಯಿಗೆ ರುಚಿಸದಂತಾಗಿದೆ. ಮಧ್ಯಾಹ್ನದ ಊಟ ಸೇರದಂತಾಗಿದೆ.

ಮಧ್ಯಾಹ್ನದ ಹೊತ್ತು ಬಿಸಿಲಿನ ಪರಿಣಾಮ ನಗರದ ರಸ್ತೆಗಳು, ಮಾರುಕಟ್ಟೆಗಳಲ್ಲಿ ಜನ ಸಂಚಾರ ವಿರಳವಾಗಿರುವುದು ಕಂಡುಬರುತ್ತಿದೆ.

ಜಿಲ್ಲೆಯ ವಿವಿಧೆಡೆ ಗುರುವಾರ ಮಳೆಯಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಗುಡುಗು, ಸಿಡಿಲಿನ ಅಬ್ಬರ, ಬಿರುಗಾಳಿಯಿಂದ ಹಾನಿ ಹೆಚ್ಚಾಗಿದೆ. ಬಿರುಸಿನ ಮಳೆಯಾಗಿದ್ದರೆ ಬಿಸಿಲ ಧಗೆ ತಗ್ಗಲಿತ್ತು.

ಬಿಸಿಲು, ಬಿಸಿಗಾಳಿಯಿಂದ ರಕ್ಷಣೆಗೆ ಸಲಹೆ
* ಬಾಯಾರಿಕೆಯಿಲ್ಲದಿದ್ದರೂ ಸಾಕಷ್ಟು ಮತ್ತು ಸಾಧ್ಯವಾದಷ್ಟು ಹೆಚ್ಚಾಗಿ ನೀರನ್ನು ಕುಡಿಯಬೇಕು.
* ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಟೋಪಿ, ಬೂಟ್‌ ಅಥವಾ ಚಪ್ಪಲ್‌ ಬಳಸಬೇಕು
* ಹಗುರವಾದ, ತಿಳಿ-ಬಣ್ಣದ, ಸಡಿಲವಾದ ಮತ್ತು ರಂಧ್ರವುಳ್ಳ ಹತ್ತಿ ಬಟ್ಟೆಗಳನ್ನು ಧರಿಸಬೇಕು
* ಹೊರಗೆ ಕೆಲಸ ಮಾಡುವ ವೇಳೆ ಟೋಪಿ, ಛತ್ರಿಯನ್ನು ಬಳಸಬೇಕು, ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆ ಹಾಕಿಕೊಳ್ಳಬೇಕು
* ಬಸ್ಸಿನಲ್ಲಿ ದೂರದ ಪ್ರಯಾಣವನ್ನು ರಾತ್ರಿ ವೇಳೆ ಮಾಡುವುದು ಉತ್ತಮ,ಹಗಲು ವೇಳೆ ಪ್ರಯಾಣ ಮಾಡುವಾಗ ನೀರನ್ನು ಒಯ್ಯಬೇಕು
* ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ಶರಬತ್, ನಿಂಬೆ ನೀರು, ಮಜ್ಜಿಗೆ ಇತ್ಯಾದಿ ಹೆಚ್ಚು ಕುಡಿಯಬೇಕು
* ಪ್ರಾಣಿ, ಪಕ್ಷಿಗಳಿಗೆ ನೆರಳು ಒದಗಿಸಬೇಕು, ಕುಡಿಯಲು ಸಾಕಷ್ಟು ನೀರು ನೀಡಬೇಕು.
* ಒದ್ದೆಯಾದ ಬಟ್ಟೆ ಬಳಸಬೇಕು, ಆಗಾಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಬೇಕು
* ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಬಿಸಿಲಿನ ಸಮಯದಲ್ಲಿ ಹೊರಗಡೆ ಬಿಡಬಾರದು
* ಕಪ್ಪು ಬಟ್ಟೆ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಬೇಡ
* ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ಹೊರಗೆ ಕೆಲಸ ಮಾಡುವುದು ಬೇಡ
* ಬಿಸಿಲಿನ ಸಮಯದಲ್ಲಿ ಅಡುಗೆ ಮಾಡುವುದು ಬೇಡ, ಅಡುಗೆ ಮನೆಯಲ್ಲಿ ಸಮರ್ಪಕವಾಗಿ ಗಾಳಿಯಾಡಲು ಬಾಗಿಲು ಮತ್ತು ಕಿಟಕಿ ತೆರೆದಿಡಬೇಕು.
* ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಹಾನಿಕಾರಕ ತಂಪು ಪಾನೀಯ ಸೇವಿಸುವುದು ಬೇಡ.
* ಹಾನಿಕಾರಕವಾದ ಆಹಾರ ಮತ್ತು ಹಳಸಿದ ಆಹಾರವನ್ನು ಸೇವಿಸಬಾರದು‌

**
ಬಿಸಿಲಿನಿಂದ ಯಾವುದೇ ಅನಾಹುತವಾದರೆ ಸಹಾಯಕ್ಕೆ ಜಿಲ್ಲಾ ವಿಪತ್ತು ನಿರ್ವಾಹಣಾ ಘಟಕದ 1077ಗೆ ಕರೆ ಮಾಡಬಹುದು. ಜಿಲ್ಲಾಡಳಿತ ಅಗತ್ಯ ನೆರವು ಕಲ್ಪಿಸಲಿದೆ.
–ಡಾ.ವಿಜಯಮಹಾಂತೇಶ್‌,ಜಿಲ್ಲಾಧಿಕಾರಿ, ವಿಜಯಪುರ

**

ಬಿಸಿಲ ಸಂದರ್ಭದಲ್ಲಿ ಹೀಟ್‌ ಸ್ಟ್ರೋಕ್‌ ಆಗುವ ಸಾಧ್ಯತೆ ಇರುತ್ತದೆ.ಕಾರಣ ಬಿಸಿಲಲ್ಲಿ ಅಡ್ಡಾಡಬಾರದು, ಹೊರಗಡೆ ಆಹಾರ ಸೇವನೆ ಕಡಿಮೆ ಮಾಡಬೇಕು, ಹಸಿವಾಗುವುದು ಕಡಿಮೆ, ಹೆಚ್ಚಾಗಿ ನೀರು, ಎಳನೀರು, ಮಜ್ಜಿಗೆ ಕುಡಿಯಬೇಕು, ಹಣ್ಣು ಹೆಚ್ಚು ಸೇವಿಸಬೇಕು.
–ಡಾ.ಹರೀಶ್‌ ಪೂಜಾರ, ವೈದ್ಯರು, ಜಿಲ್ಲಾಸ್ಪತ್ರೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.