
ವಿಜಯಪುರ: ‘ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ, ಪಿಂಚಣಿ, ಉಚಿತ ಬಸ್ ಪಾಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಸದಸನದಲ್ಲಿ 15ಕ್ಕೂ ಹೆಚ್ಚು ಸಲ ಧ್ವನಿ ಎತ್ತಿರುವೆ’ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಕುಮಠೆಯಲ್ಲಿ ಸೋಮವಾರ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿದ ಗ್ರಾಮೀಣ ಗೋದಾಮು ಮತ್ತು ಎನ್.ಆರ್.ಎಲ್.ಎಂ ಶೆಡ್ ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಹಿತ ಕಾಪಾಡಲು ಬದ್ಧನಾಗಿದ್ದೇನೆ. ಮುಂದೆಯೂ ಗ್ರಾ. ಪಂ. ಸದಸ್ಯರ ಪರ ಧ್ವನಿ ಎತ್ತುತ್ತೇನೆ. ಕೇರಳ ಮಾದರಿಯಲ್ಲಿ ಸದಸ್ಯರಿಗೆ ಸೌಲಭ್ಯ ಒದಗಿಸಲು ಮುಂದೆಯೂ ಧ್ವನಿ ಎತ್ತುತ್ತೇನೆ’ ಎಂದು ಹೇಳಿದರು.
‘ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಕಾಂಗ್ರೆಸ್ ಅಪಾರ ಕೊಡುಗೆ ನೀಡಿದೆ. ಗ್ರಾ.ಪಂ. ಸದಸ್ಯರು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಗ್ರಾಮ ಸ್ವರಾಜ್ಯ ಕನಸು ನನಸಾಗಲು ಮಾದರಿ ಕೆಲಸ ಮಾಡಬೇಕು’ ಎಂದರು.
ಗ್ರಾ. ಪಂ. ಅಧ್ಯಕ್ಷ ಸಂಗಪ್ಪ ಮಮದಾಪುರ, ಉಪಾಧ್ಯಕ್ಷೆ ಸಾಂಯವ್ವ ಹಿರೇಕುರಬರ, ಮುಖಂಡ ಮಹೇಶಗೌಡ ಪಾಟೀಲ, ಬಬಲೇಶ್ವರ ತಾ. ಪಂ. ಇಒ ಜುಬೇರ ಅಹ್ಮದ್ ಪಠಾಣ, ಪಿಡಿಒ ಅಶೋಕ ಸಿ. ಕೋಟ್ಯಾಳ, ಗ್ರಾ. ಪಂ. ಸದಸ್ಯರು, ಮುಖಂಡರು, ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.