ADVERTISEMENT

ಹೆಸ್ಕಾಂ ಅಧಿಕಾರಿ ಅನುಮಾನಾಸ್ಪದ ಸಾವು: ನಾಲ್ವರ ವಿರುದ್ಧ ದೂರು

ದೂರು ಸ್ವೀಕರಿಸಲು ಪೊಲೀಸರಿಂದ ವಿಳಂಬ ಆರೋಪ

​ಪ್ರಜಾವಾಣಿ ವಾರ್ತೆ
Published 1 ಮೇ 2025, 16:18 IST
Last Updated 1 ಮೇ 2025, 16:18 IST
ಶಿವಪ್ಪ ಆರೇಶಂಕರ
ಶಿವಪ್ಪ ಆರೇಶಂಕರ   

ಮುದ್ದೇಬಿಹಾಳ: ‘ಸರ್ಕಾರಿ ಜಾಗೆಯನ್ನು ಕಬಳಿಸಲು ಮುಂದಾಗಿದ್ದ ವ್ಯಕ್ತಿಗಳೇ ಹೆಸ್ಕಾಂ ಅಧಿಕಾರಿ ಶಿವಪ್ಪ ಆರೇಶಂಕರ ಅವರನ್ನು ದ್ವೇಷದಿಂದ ಕೊಲೆ ಮಾಡಿ ನೇಣು ಹಾಕಿದ್ದಾರೆ’ ಎಂದು ಆರೋಪಿಸಿ ಮೃತ ಶಿವಪ್ಪ ಆರೇಶಂಕರ ಅವರ ಪತ್ನಿ ಗೌರಮ್ಮ ಆರೇಶಂಕರ ನಾಲ್ವರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ: ‘ಕುಂಟೋಜಿ ಗ್ರಾಮದ ಒಂದು ಸರ್ಕಾರಿ ಜಾಗೆಯನ್ನು ಪ್ರಬಲ ವ್ಯಕ್ತಿಗಳು ತಮ್ಮ ವಶಕ್ಕೆ ಪಡೆದುಕೊಳ್ಳು ಹೊಂಚು ಹಾಕಿದ್ದಾಗ ನನ್ನ ಪತಿ ಶಿವಪ್ಪ ಆರೇಶಂಕರ (45) ಅವರು ಇತರೆ ಗ್ರಾಮಸ್ಥರೊಂದಿಗೆ ಸೇರಿ ಆ ಜಾಗೆಯಲ್ಲಿ ಏ.26 ರಂದು ರಾಮಮಂದಿರದ ಕಟ್ಟೆಯನ್ನು ನಿರ್ಮಿಸಿದ್ದರಿಂದ ಅವರ ಮೇಲೆ ಆರೋಪಿಗಳು ಸಿಟ್ಟಾಗಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನನ್ನ ಪತಿಯ ಮೊಬೈಲ್ ಸಂಖ್ಯೆಗೆ, ಸಂಬಂಧಿ ಹಾಗೂ ಸ್ನೇಹಿತರ ಮೊಬೈಲ್ ಸಂಖ್ಯೆಗೆ ಟೆಕ್ಸ್ಟ್‌ ಮೆಸೆಜ್ ಹಾಗೂ ವಾಯ್ಸ್‌  ಮೆಸೆಜ್‌ಗಳನ್ನು ಹಾಕಿದ್ದನ್ನು ಗಮನಿಸಿದಾಗ ಊರಲ್ಲಿ ರಾಮಂದಿರದ ಕಟ್ಟೆಯನ್ನು ಕಟ್ಟಿಸಿದ್ದರ ವಿಷಯವಾಗಿ ಕುಂಟೋಜಿಯ ಸಂಗಮೇಶ ಗುರಪ್ಪ ಅಂಗಡಿ, ಶರಣಪ್ಪ ನಾಗಪ್ಪ ಬಳೂತಿ, ಮುದ್ದೇಬಿಹಾಳದ ಶಿವಪ್ಪ ಮುಳವಾಡ, ರಾಜು ಕುಂಬಾರ ಇವರೆಲ್ಲರೂ ಸೇರಿ ನನ್ನ ಗಂಡನಿಗೆ ಚಿತ್ರಹಿಂಸೆ ನೀಡಿ ಕೊಲೆಗೈದು ಕವಡಿಮಟ್ಟಿ ಸೀಮೆಯ ಬಳಿ ಬರುವ ಹೊಲದಲ್ಲಿ ಬೇವಿನ ಮರಕ್ಕೆ ನೇಣು ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ವಿಧಿವಿಜ್ಞಾನ ತಂಡ ಭೇಟಿ: ಮೃತ ಹೆಸ್ಕಾಂ ನೌಕರ ಶಿವಪ್ಪ ಆರೇಶಂಕರ ಅವರ ಶವದ ಮರಣೋತ್ತರ ಪರೀಕ್ಷೆ ಗುರುವಾರ ಮಧ್ಯಾಹ್ನ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನಡೆಯಿತು. ಬೆಳಿಗ್ಗೆ ವಿಜಯಪುರದಿಂದ ಆಗಮಿಸಿದ್ದ ವಿಧಿ ವಿಜ್ಞಾನ ತಂಡದ ಅಧಿಕಾರಿಗಳು ಶವದ ಮೇಲಿರುವ ಕಲೆಗಳು, ಘಟನಾ ಸ್ಥಳದ ಬಗ್ಗೆ ಕುರಿತು ಪೊಲೀಸರಿಂದ ಮಾಹಿತಿ ಕಲೆ ಹಾಕಿದರು. ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪಿಎಸ್‌ಐ ಸಂಜಯ ತಿಪರೆಡ್ಡಿ ತಿಳಿಸಿದ್ದಾರೆ.

ದೂರು ಸ್ವೀಕರಿಸಲು ವಿಳಂಬ: ಘಟನೆ ನಡೆದ 24 ತಾಸುಗಳವರೆಗೂ ದೂರು ಸ್ವೀಕರಿಸಿ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರಿಂದ ವಿಳಂಬ ಮಾಡಲಾಗಿದೆ ಎಂಬ ಆರೋಪಗಳನ್ನು ಕುಟುಂಬಸ್ಥರು ಹಾಗೂ ಆರೇಶಂಕರ ಸ್ನೇಹಿತರಿಂದ ಕೇಳಿ ಬಂದಿವೆ.

ಏತನ್ಮಧ್ಯೆ ಹೆಸ್ಕಾಂ ಅಧಿಕಾರಿ ಸಾವು ಕೊಲೆಯೋ? ಅಥವಾ ಆತ್ಮಹತ್ಯೆಯೋ? ಎಂಬುದು ಗೊತ್ತಾಗಬೇಕಿದ್ದು, ಸರ್ಕಾರಿ ಜಾಗೆ ಉಳಿಸಲು ಮುಂದಾಗಿದ್ದಕ್ಕೆ ಅವರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲಾಯಿತೇ? ರಾಮ ಮಂದಿರದ ಕಟ್ಟೆ ಕಟ್ಟಿದ್ದರಿಂದಲೇ ನನಗೆ ಚಿತ್ರಹಿಂಸೆ ಕೊಟ್ಟಿದ್ದು ನರಳಿ ಸತ್ತಿದ್ದೇನೆ ಎಂದು ಸ್ನೇಹಿತರಿಗೆ, ಸಂಬಂಧಿಕರಿಗೆ ವಾಟ್ಸಾಪ್ ಮೆಸೇಜ್ ಮಾಡಿರುವುದು ಹಲವು ಚರ್ಚೆಗಳಿಗೆ ಇಂಬು ನೀಡಿದೆ. ಪೊಲೀಸರು ತನಿಖೆಯನ್ನು ನಡೆಸಿ ಸತ್ಯಾಂಶ ಬಿಚ್ಚಿಡುವ ಕೆಲಸ ಮಾಡಬೇಕಾಗಿದೆ. 

ಪಿಎಸ್‌ಐ ವಿರುದ್ಧ ಅಕ್ರಮ ಚಟುವಟಿಕೆ ಆರೋಪ

ಮುದ್ದೇಬಿಹಾಳ: ಇಲ್ಲಿನ ಪಿಎಸ್‌ಐ ಕಾನೂನು ರಕ್ಷಣೆಯನ್ನು ಮಾಡುವುದನ್ನು ಬಿಟ್ಟು ಉಳಿದ ಎಲ್ಲ ಅಕ್ರಮ ಕೆಲಸಗಳನ್ನು ಮಾಡುತ್ತಿದ್ದಾರೆ’ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಂಟೋಜಿಯಲ್ಲಿ ಹೆಸ್ಕಾಂ ಅಧಿಕಾರಿ ಆರೇಶಂಕರ ಅವರ ಸಾವಿನ ಕುರಿತು ಕುಟುಂಬದವರು ಘಟನೆ ನಡೆದ ಕೂಡಲೇ ಪೊಲೀಸ್ ಠಾಣೆಗೆ ಬಂದರೂ ಅವರಿಂದ ದೂರು ಪಡೆದುಕೊಳ್ಳದೇ ಮೇ 1 ಬೆಳಗಿನ ಜಾವ 4.50 ಕ್ಕೆ ದೂರು ಪಡೆದುಕೊಂಡಿದ್ದಾರೆ ಎಂದರೆ ಇವರು ಪ್ರಕರಣದಲ್ಲಿ ಯಾವ ಸಾಕ್ಷಿಗಳನ್ನು ಮುಚ್ಚಿ ಹಾಕಲು ಮುಂದಾಗಿದ್ದರು ಎಂದು ನಡಹಳ್ಳಿ ಪ್ರಶ್ನಿಸಿದರು. ಇಲ್ಲಿನ ಪಿಎಸ್‌ಐ ಪೊಲೀಸರು ಯಾವುದು ಆತ್ಮಹತ್ಯೆ ಯಾವುದು ಕೊಲೆ ಎಂಬುದು ಗೊತ್ತಾಗದಂತೆ ಇದ್ದಾರೆ. ಮುದ್ನಾಳದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಘಟನೆ ನಾಲತವಾಡದಲ್ಲಿ ಪರಿಶಿಷ್ಟ ಜಾತಿ ಬಾಲಕಿ ಮೇಲೆ ದೌರ್ಜನ್ಯ ಕುಂಟೋಜಿಯಲ್ಲಿ ಹೆಸ್ಕಾಂ ಅಧಿಕಾರಿ ಸಾವಿನ ಘಟನೆ ನಡೆದಿದೆ. ಅವರನ್ನು ಎಷ್ಟು ದಿನ ಇಲ್ಲಿರಿಸಿಕೊಳ್ಳುತ್ತಾರೆ ಎಂದು ನಾನು ನೋಡುತ್ತೇನೆ ಎಂದ ನಡಹಳ್ಳಿ ಹೇಳಿದರು.

ಯಾವುದೇ ಘಟನೆ ನಡೆದರೂ ಪೊಲೀಸರು ತುರ್ತಾಗಿ ತಗೆದುಕೊಳ್ಳುತ್ತಿಲ್ಲ. ತಾಲ್ಲೂಕಿನಲ್ಲಿ ಕಾನೂನು ಬಾಹಿರವಾಗಿ ನಡೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪಿಎಸ್‌ಐ ಇಸ್ಪೀಟ್ ಕ್ಲಬ್ ಮಟ್ಕಾ ಆಡಿಸುತ್ತಿದ್ದಾನೆ. ಪ್ರತಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಕುಟುಂಬದವರೆ ಸಾವಿನಲ್ಲಿ ಸಂಶಯ ವ್ಯಕ್ತಪಡಿಸುತ್ತಿದ್ದರೂ ಅದಕ್ಕೆ ಪಿಎಸ್‌ಐ ಎಫ್.ಐ.ಆರ್ ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡಿದ್ದಾರೆ. ಕೊಲೆಗಡುಕರಿಗೆ ಕಳ್ಳತನ ಮಾಡುವರಿಗೆ ಮಟ್ಕಾ ಆಡುವವರಿಗೆ ಮರಳು ದಂಧೆ ಮಾಡುವವರಿಗೆ ಪಿಎಸ್‌ಐ ಬೆಂಬಲವಾಗಿದ್ದಾರೆ ಎಂದು ಆರೋಪಿಸಿದರು.

ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಪಿಎಸ್‌ಐ ಅವರನ್ನು ವಾಪಸ್ ಕರೆಯಿಸಿಕೊಂಡು ಬೇರೆ ಅಧಿಕಾರಿಯನ್ನು ನಿಯೋಜಿಸಬೇಕು.ಇವರ ಇತಿಹಾಸವನ್ನು ತನಿಖೆ ಮಾಡಬೇಕು.ಸ್ಥಳೀಯ ಶಾಸಕರು ಇಂತಹ ಅಧಿಕಾರಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.