ADVERTISEMENT

ರೈತರ ಭೂಮಿ ನುಂಗಿದರು: ಎಚ್.ಡಿ.ಕೆ ಆರೋಪ

ಬಬಲೇಶ್ವರ ಕ್ಷೇತ್ರದ ನಿಡೋಣಿಯಲ್ಲಿ ಪಂಚರತ್ನ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 15:35 IST
Last Updated 23 ಜನವರಿ 2023, 15:35 IST
ಬಬಲೇಶ್ವರ ಕ್ಷೇತ್ರದ ನಿಡೋಣಿ ಗ್ರಾಮದಲ್ಲಿ ಭಾನುವಾರ ನಡೆದ ಪಂಚರತ್ನ ರಥಯಾತ್ರೆಯ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೇಗಿಲು ಕೊಟ್ಟು ಸನ್ಮಾನ ಮಾಡಲಾಯಿತು 
ಬಬಲೇಶ್ವರ ಕ್ಷೇತ್ರದ ನಿಡೋಣಿ ಗ್ರಾಮದಲ್ಲಿ ಭಾನುವಾರ ನಡೆದ ಪಂಚರತ್ನ ರಥಯಾತ್ರೆಯ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೇಗಿಲು ಕೊಟ್ಟು ಸನ್ಮಾನ ಮಾಡಲಾಯಿತು    

ಬಬಲೇಶ್ವರ: ಇಲ್ಲಿನ ಶಾಸಕರಂತೆ ನಾನು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಲ್ಲ. ಕೈಗಾರಿಕೆಗಳನ್ನು ನಡೆಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಬಬಲೇಶ್ವರ ಕ್ಷೇತ್ರದ ನಿಡೋಣಿ ಗ್ರಾಮದಲ್ಲಿ ಭಾನುವಾರ ಪಂಚರತ್ನ ರಥಯಾತ್ರೆಯ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಾನು ಬರುವ ದಾರಿಯಲ್ಲಿ ಕೈಗಾರಿಕಾ ವಲಯಕ್ಕೆ ಸ್ವಾಧೀನ ಮಾಡಿಕೊಂಡಿರುವ ಭೂಮಿಯನ್ನು ಗಮನಿಸಿದೆ. ಮಾಜಿ ಸಚಿವರೊಬ್ಬರು, ಇನ್ನೊಬ್ಬರು ಹಾಲಿ ಸಚಿವರು. ಇವರಿಬ್ಬರೂ ಹೆಚ್ಚು ಕಡಿಮೆ ತಲಾ ಮೂರು ಸಾವಿರ ಎಕರೆ ಭೂಮಿ ಒಡೆಯರು ಎನ್ನುವ ಮಾಹಿತಿ ಇದೆ. ಆವರಿಬ್ಬರ ಹಿಂಬಾಲಕರು ಎಕರೆಗೆ ₹ 3 ಲಕ್ಷ ಅಥವಾ ಅದಕ್ಕಿಂತ ಕಡಿಮೆ ದರಕ್ಕೆ ಬೇನಾಮಿಗಳ ಹೆಸರಿನಲ್ಲಿ ಖರೀದಿಸಿ ಆ ಮೇಲೆ ಕೆಐಡಿಬಿಗೆ ಪ್ರತಿ ಎಕರೆ ಭೂಮಿಯನ್ನು ತಲಾ ₹ 20 ಲಕ್ಷಕ್ಕೆ ಕೊಟ್ಟಿದ್ದಾರೆ. ಬಬಲೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಇದು’ ಎಂದು ಹೇಳಿದರು.

ADVERTISEMENT

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ರಾಜ್ಯದಲ್ಲಿ ಹುಟ್ಟದೇ ಇದ್ದಿದ್ದರೆ ಇಡೀ ಉತ್ತರ ಕರ್ನಾಟಕವನ್ನು ಇಲ್ಲಿನ ರಾಜಕಾರಣಿಗಳು ಶಿಲಾಯುಗದತ್ತ ಕೊಂಡೊಯ್ಯುತ್ತಿದ್ದರು ಎಂದು ಹೇಳಿದರು.

ದೇವೇಗೌಡರು ಕೃಷ್ಣ ಮೇಲ್ದಂಡೆ ಯೋಜನೆಗೆ ₹ 18 ಸಾವಿರ ಕೋಟಿ ಅನುದಾನ ಕೊಟ್ಟು ಆಲಮಟ್ಟಿ ಎತ್ತರವನ್ನು ಹೆಚ್ಚಿಸಿದರು. 10 ತಿಂಗಳಲ್ಲಿ ಅವರ ಸರ್ಕಾರ ತೆಗೆದರು. ಆ ಮೇಲೆ ಬಂದ ಸರ್ಕಾರಗಳು ಮಾಡಿದ್ದೇನು? ಈ ವರೆಗೂ ನೀರು ಹರಿಸುವ ಕಾಲುವೆಗಳನ್ನು ಮಾಡಿಲ್ಲ. ರಾಜ್ಯದ ಪಾಲಿನ ನೀರನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇವೇಗೌಡರು ಅಚಲ ಬದ್ಧತೆಯಿಂದ ಕೃಷ್ಣಾ ನೀರು ಸದ್ಬಳಕೆಗೆ ಟೊಂಕ ಕಟ್ಟದೇ ಇದ್ದಿದ್ದರೆ ಇಲ್ಲಿನ ಪರಿಸ್ಥಿತಿ ಯಾವ ರೀತಿ ಇರುತ್ತಿತ್ತು ಎಂಬುದನ್ನು ಊಹಿಸಿ ಎಂದರು.

ನನಗೆ ಒಮ್ಮೆ ಪೂರ್ಣ ಪ್ರಮಾಣದ ಅಧಿಕಾರ ಕೊಡಿ. ರಾಜ್ಯದ ಪ್ರತಿ ಮನೆಗೂ ತಲುಪುವಂತೆ ಪಂಚರತ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇನೆ. ಒಂದು ವೇಳೆ ನಾನು ವಿಫಲನಾದರೆ ಮತ್ತೆಂದೂ ಮತ ಕೇಳಲು ಬರುವುದಿಲ್ಲ ಎಂದರು.

ಪಂಚರತ್ನ ಯೋಜನೆಗಳು ರಾಜ್ಯದ ಚಿತ್ರಣವನ್ನೇ ಬದಲಿಸುತ್ತವೆ. ಮಕ್ಕಳ ಶಿಕ್ಷಣ, ಕುಟುಂಬದ ಆರೋಗ್ಯ, ಮನೆ ನಿರ್ಮಾಣ, ಉದ್ಯೋಗ, ಬೇಸಾಯಕ್ಕೆ ಯಾರು ಕೂಡ ಸಾಲಕ್ಕೆ ಸಿಲುಕಬಾರದು ಎನ್ನುವುದು ನನ್ನ ಉದ್ದೇಶ ಎಂದು ಹೇಳಿದರು.

ಬದಲಾವಣೆ ಇಲ್ಲ:

ಬಬಲೇಶ್ವರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಹೊನ್ನವಾಡ ಅವರನ್ನು ಯಾವ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ, ಘೋಷಣೆ ಮಾಡಿ ಆಗಿದೆ ಎಂದು ಹೇಳಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆಗಳನ್ನು ಕೊಡುತ್ತಿದೆ. ಆ ಪಕ್ಷ ಅಧಿಕಾರದಲ್ಲಿದ್ದ ಯಾವ ರಾಜ್ಯದಲ್ಲಿಯೂ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದರು.

ರಾಜ್ಯದಲ್ಲಿ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿ ಮನೆಯ ಯಜಮಾನಿಗೆ ₹ 2 ಕೊಡುವ ಯೋಜನೆ ಘೋಷಣೆ ಮಾಡಿದೆ. ಆದರೆ, ಅಂತಹ ಯೋಜನೆಗಳನ್ನು ತಾನು ಅಧಿಕಾರದಲ್ಲಿರುವ ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಏಕೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ. ಪಾಟೀಲ್ ಹಲಸಂಗಿ, ಅಭ್ಯರ್ಥಿ ಬಸವರಾಜ ಹೊನ್ನವಾಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.