ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ
ಬೆಂಗಳೂರು: ಕನೇರಿಯ ಅದೃಶ್ಯ ಕಾಡ ಸಿದ್ದೇಶ್ವರ ಮಠದ ಸ್ವಾಮೀಜಿ ಅವರು ಅಶ್ಲೀಲ ಪದ ಬಳಕೆ ಮೂಲಕ ಸ್ತ್ರೀ ಸಮುದಾಯ, ಗುರು ಪರಂಪರೆಗೆ ಅವಮಾನ ಮಾಡಿದ್ದು ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ಆಗ್ರಹಿಸಿದೆ.
ಸ್ವಾಮೀಜಿ ಅವರು ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿರುವುದನ್ನು ವಿರೋಧಿಸುವ ಮೂಲಕ ಬಿಜೆಪಿಯ ಕೆಲವು ನಾಯಕರು ಪರೋಕ್ಷವಾಗಿ ಸ್ವಾಮೀಜಿಯ ಬೆಂಬಲಕ್ಕೆ ನಿಂತಿದ್ದಾರೆ. ತಮಗೂ ತಾಯಂದಿರಿದ್ದಾರೆ ಎನ್ನುವುದನ್ನು ಬಿಜೆಪಿ ನಾಯಕರು ಮರೆಯಬಾರದು ಎಂದು ಬೆಳಗಾವಿ ಹಂದಿಗುಂದ ಮಠದ ಶಿವಾನಂದ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಸವ ಸಂಸ್ಕೃತಿ ಉತ್ಸವವನ್ನು ಟೀಕಿಸುವ ಭರದಲ್ಲಿ ಸ್ವಾಮೀಜಿಗಳು ಸ್ತ್ರಿಯರನ್ನೇ ಅಷ್ಟೇ ಅಲ್ಲದೇ ಕಲಾವಿದರಿಗೂ ಅಗೌರವ ತೋರಿದ್ದಾರೆ. ಗುರುವೇ ಹೀಗೆ ಮಾತನಾಡಿದರೆ ಶಿಷ್ಯರ ಸ್ಥಿತಿ ಏನಾಗಬಹುದು ಎಂದು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಪ್ರಶ್ನಿಸಿದರು.
ಅವರ ಹೇಳಿಕೆಯಿಂದ ಅಶಾಂತಿ ಉಂಟಾಗಬಾರದು ಎಂದು ವಿಜಯಪುರ ಡಿಸಿ ನಿರ್ಬಂಧ ಹೇರಿದ್ದಾರೆ. ಅವರ ನಡವಳಿಕೆ ಹೀಗೆಯೇ ಇದ್ದರೆ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸದಂತೆ ನಿರ್ಬಂಧ ಹೇರಬಹುದು ಎಂದು ಎಚ್ಚರಿಸಿದರು.
ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಸಮಾಜದ ಪರವಾಗಿ ನಿರ್ಧಾರ ಕೈಗೊಂಡಿದ್ದಕ್ಕೆ ಗೌರವಿಸಲಾಗಿದೆ. ಇದನ್ನು ಬಿಟ್ಟರೇ ಯಾವುದೇ ಪಕ್ಷ, ನಾಯಕರ ಪರವಾಗಿ ಒಕ್ಕೂಟ ಇಲ್ಲ ಎಂದು ಭಾಲ್ಕಿ ಪಟ್ಟದ್ದೇವರು ಸ್ವಾಮೀಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.