ತಾಳಿಕೋಟೆ: ಸಮೀಪದ ಡೋಣಿ ನದಿಯಲ್ಲಿ ಬುಧವಾರ ಯುವಕರಿಬ್ಬರು ಬೈಕ್ ಸಮೇತ ಕೊಚ್ಚಿ ಹೋದ ಸೇತುವೆ ಬಳಿಗೆ ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಗುರುವಾರ ಭೇಟಿ ನೀಡಿದರು.
ತಾಳಿಕೋಟೆಗೆ ಬಂದಿದ್ದ ವಡವಡಗಿ ಗ್ರಾಮದ ಯುವಕರಿಬ್ಬರು ಮರಳಿ ಹೋಗುವಾಗ ಡೋಣಿ ಸೇತುವೆ ಮೇಲಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದರು. ಅವರಲ್ಲಿ ಮಹಾಂತೇಶ ಮಲ್ಲನಗೌಡ ಹೊಸಗೌಡರನನ್ನು ರಕ್ಷಿಸಲಾಗಿದ್ದು ಇನ್ನೊಬ್ಬ ಯುವಕ ಸಂತೋಷ ಹಡಪದ (28) ಇನ್ನೂ ಪತ್ತೆಯಾಗಿಲ್ಲ.
ಶೋಧ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಮಾಹಿತಿ ಪಡೆದ ನಡಹಳ್ಳಿ ಅವರು, ಪ್ರವಾಹದ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಜೀವ ರಕ್ಷಕ ಸೌಲಭ್ಯಗಳ ವ್ಯವಸ್ಥೆ ಹಾಗೂ ತಕ್ಷಣದ ಪರಿಹಾರ ಒದಗಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಆಗ್ರಹಿಸಿದರು.
ಸ್ಥಳದಲ್ಲಿಯೇ ಬೀಡುಬಿಟ್ಟಿರುವ ಯುವಕನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ಇಂತಹ ಘಟನೆಗಳು ಮರುಕಳಿಸದಂತೆ ತಾಲ್ಲೂಕು ಆಡಳಿತ ತುರ್ತು ಜವಾಬ್ದಾರಿ ವಹಿಸಬೇಕು ಎಂದರು.
ತಹಶೀಲ್ದಾರ್ ಡಾ.ವಿನಯಾ ಹೂಗಾರ, ಪಿಎಸೈ ಜ್ಯೋತಿ ಖೋತ ಸಿಬ್ಬಂದಿ ಅಗ್ನಿಶಾಮಕ ಸಿಬ್ಬಂದಿ, ಪುರಸಭೆ ಸದಸ್ಯ ವಾಸುದೇವ ಹೆಬಸೂರ ಮತ್ತು, ನಿಂಗನಗೌಡ ಕುಂಟೋಜಿ, ಕಳಕೂಸಾ ರಂಗರೇಜ, ಶಿವಶಂಕರ ಹಿರೇಮಠ, ಡಿ.ಕೆ.ಪಾಟೀಲ, ಜಗದೀಶ ಬಿಳೇಭಾವಿ, ಪ್ರಭು ಬಿಳೇಭಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.