ADVERTISEMENT

ತಾಂಬಾ: ಶಾಸಕದ್ವಯರ ನಡುವೆ ಬಡವಾದ ರಸ್ತೆ

ಸಿದ್ದು ತ.ಹತ್ತಳ್ಳಿ
Published 6 ಜುಲೈ 2025, 5:51 IST
Last Updated 6 ಜುಲೈ 2025, 5:51 IST
ತಾಂಬಾ ಗ್ರಾಮದಿಂದ ಅಥರ್ಗಾ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಹದಗೆಟ್ಟಿರುವುದು
ತಾಂಬಾ ಗ್ರಾಮದಿಂದ ಅಥರ್ಗಾ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಹದಗೆಟ್ಟಿರುವುದು   

ತಾಂಬಾ: ಇಂಡಿ ಮತ್ತು ಸಿಂದಗಿ ಎರಡು ಮತಕ್ಷೇತ್ರಗಳ ವ್ಯಾಪ್ತಿಗೆ ಬರುವ ತಾಂಬಾ–ಅಥರ್ಗಾ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಮಾರ್ಗದಲ್ಲಿ ಸಂಚಾರ ದುರಸ್ತರವಾಗಿದೆ.

ತಾಂಬಾದಿಂದ ಅಥರ್ಗಾವು 13 ಕಿ.ಮೀ. ಅಂತರವಿದೆ. ಅಥರ್ಗಾ ಗ್ರಾಮವು ಇಂಡಿ ಮತಕ್ಷೇತ್ರ, ತಾಂಬಾ ಗ್ರಾಮವು ಸಿಂದಗಿ ಮತಕ್ಷೇತ್ರದಲ್ಲಿದೆ. ಈ 13 ಕಿ.ಮೀ ರಸ್ತೆಯಲ್ಲಿ 7 ಕಿ.ಮೀ ರಸ್ತೆಯನ್ನು ಇಂಡಿ ಮತಕ್ಷೇತ್ರಕ್ಕೆ ಇನ್ನುಳಿದ 6 ಕಿ.ಮೀ ಸಿಂದಗಿ ಮತಕ್ಷೇತ್ರಕ್ಕೆ ಬರುತ್ತಿದೆ. ಈ ರಸ್ತೆ ದುರಸ್ತಿ ಬಗ್ಗೆ ಶಾಸಕರು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

ರಸ್ತೆಯು ತೆಗ್ಗು, ಗುಂಡಿಗಳು ಬಿದ್ದು ಹಾಳಾಗಿದೆ. ಅಧಿಕಾರಿಗಳಿಗೆ ಸಿಂದಗಿ ಮತಕ್ಷೇತ್ರದ ತಾಂಬಾ, ಶಿವಪುರ, ಇಂಡಿ ಮತಕ್ಷೇತ್ರದ ಬೆನಕನಹಳ್ಳಿ, ಅಥರ್ಗಾ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ADVERTISEMENT

ದಿನನಿತ್ಯ ಸರ್ಕಾರಿ ವಾಹನ, ಖಾಸಗಿ ವಾಹನ, ಸೈಕಲ್, ಬೈಕ್, ರೈತರ ಎತ್ತಿನ ಗಾಡಿ, ಶಾಲಾ ವಾಹನಗಳ ಸುವ್ಯವಸ್ಥಿತ ಸಂಚಾರಕ್ಕೆ ಅಡಚಣೆಯಾಗಿದೆ. ಜನರು ಕಾಲುನಡಿಗೆಯಿಂದಲೂ ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಂಬಾ ಮತ್ತು ಅಥರ್ಗಾ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇರುವುದರಿಂದ ಇಲ್ಲಿಗೆ ಬರುವ ತುಂಬು ಗರ್ಭಿಣಿಯರನ್ನು ವಾಹನಗಳಲ್ಲಿ ಕರೆದುಕೊಂಡು ಹೋಗಬೇಕಾದರೆ  ಅವರ ಸ್ಥಿತಿ ದೇವರೇ ಬಲ್ಲ.

ತೆಗ್ಗು ಗುಂಡಿಗಳಿಂದ ಕೂಡಿದ ಹದಗೆಟ್ಟ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಆದ್ದರಿಂದ ಅಧಿಕಾರಿಗಳು ಈ ರಸ್ತೆ ದುರಸ್ತಿ ಮಾಡಲು ಸಾರ್ವಜನಿಕರು ಹಲವಾರು ಭಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.

ಈ ರಸ್ತೆ 2 ಮತಕ್ಷೇತ್ರಗಳಲ್ಲಿ ಬರುವುದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಶೀಘ್ರವಾಗಿ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಮತ್ತು ಸಿಂದಗಿ ಶಾಸಕ ಅಶೋಕ ಮನಗೂಳಿ ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿಸಿ, ಹದಗೆಟ್ಟ ರಸ್ತೆಗೆ ಡಾಂಬರೀಕರಣ ಮಾಡಿಸಬೇಕು ಎಂದು ತಾಂಬಾ, ಶಿವಪುರ, ಬೆನಕನಹಳ್ಳಿ, ಅಥರ್ಗಾ ಗ್ರಾಮಸ್ಥರು ಆಗ್ರಹಿಸಿದ್ದಾರೆ

ತಕ್ಷಣವೇ ಅಧಿಕಾರಿಗಳ ಸಬೆ ನಡಿಸಿ ತಾಂಬಾ ಮತ್ತು ಅಥರ್ಗಾ ರಸ್ತೆಗಳ ಕುರಿತು ಮಾಹಿತಿ ಪಡೆದು ಸರ್ಕಾರದ ಗಮನಕ್ಕೆ ತಂದು ಶೀಘ್ರವೇ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು 
ಅಶೋಕ ಮನಗೂಳಿ, ಶಾಸಕ ಸಿಂದಗಿ 
ಶಿವಪುರದಲ್ಲಿ ಕೂಲಿಕಾರ್ಮಿಕರು ಹೆಚ್ಚಾಗಿದ್ದು ದಿನನಿತ್ಯ ತಾಂಬಾ ಗ್ರಾಮದಿಂದಲೆ ಪಟ್ಟಣಗಳಿಗೆ ಹೊಗಬೇಕಾದರೆ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಅನಿವಾರ್ಯವಾಗಿದೆ 
-ಮಲ್ಲೇಶಿ ಪೂಜಾರಿ  ರೈತ ಶಿವಪುರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.