ADVERTISEMENT

ವಿಜಯಪುರ: ನಾಡದೇವಿ ಉತ್ಸವಕ್ಕೆ ತಾಂಬಾ ಸಜ್ಜು

53 ವರ್ಷಗಳಿಂದ ಈ ಉತ್ಸವ ಆಯೋಜನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 4:43 IST
Last Updated 2 ಅಕ್ಟೋಬರ್ 2024, 4:43 IST
ತಾಂಬಾ ಗ್ರಾಮದ ನಾಡದೇವಿ ನವರಾತ್ರಿ ಉತ್ಸವಕ್ಕೆ ಸಿದ್ದಗೊಂಡಿರುವ ವೇದಿಕೆ ಸಿಂದಗಿ ಶಾಸಕ ಅಶೋಕ ಮನಗೂಳಿ ಮತ್ತು ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ ವೀಕ್ಷಿಸಿದರು
ತಾಂಬಾ ಗ್ರಾಮದ ನಾಡದೇವಿ ನವರಾತ್ರಿ ಉತ್ಸವಕ್ಕೆ ಸಿದ್ದಗೊಂಡಿರುವ ವೇದಿಕೆ ಸಿಂದಗಿ ಶಾಸಕ ಅಶೋಕ ಮನಗೂಳಿ ಮತ್ತು ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ ವೀಕ್ಷಿಸಿದರು   

ತಾಂಬಾ: ‘ಉತ್ತರ ಕರ್ನಾಟಕ’ದ ದಸರಾ ಎಂದೇ ಈ ಭಾಗದಲ್ಲಿ ಖ್ಯಾತಿಯಾಗಿರುವ ತಾಂಬಾ ನಾಡದೇವಿ ಉತ್ತವಕ್ಕೆ ಅಪಾರ ಜನಸ್ತೋಮದ ಸಮ್ಮುಖದಲ್ಲಿ ಗುರುವಾರ ಸಿಂದಗಿ ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಆರಂಭವಾಗಲಿದೆ.

ಅದ್ದೂರಿಯಾಗಿ ನಡೆಯಲಿರುವ ಮೆರವಣಿಗೆಯಲ್ಲಿ ವಿವಿಧ ಭಾಗದ ಕಲಾವಿದರು ಪಾಲ್ಗೊಂಡು ಉತ್ಸವದ ಮೆರುಗು ಹೆಚ್ಚಿಸಲಿದ್ದಾರೆ. ಪೂರ್ಣಕುಂಭ ಹೊತ್ತು ಮೆರವಣೆಗೆಯ ಮುಂಚೂಣಿಯಲ್ಲಿ ಸಾಗುವ ಮಹಿಳೆಯರ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ.

ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ನಡೆಯುವ ವೈಭವದ ದಸರಾ ಉತ್ಸವಗಳಲ್ಲಿ ತಾಂಬಾ ನಾಡದೇವಿ ಉತ್ಸವ ಮೊದಲ ಸ್ಥಾನ ಪಡೆದಿದೆ. ಗ್ರಾಮದಲ್ಲಿ 53 ವರ್ಷಗಳಿಂದ ಈ ಉತ್ಸವ ಆಯೋಜನೆಗೊಳ್ಳುತ್ತಿರುವುದು ವಿಶೇಷ.

ADVERTISEMENT

ಜಗದಂಬಾ ವಿದ್ಯಾವರ್ಧಕ ಸಂಘ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ.ಪೂಲ್‌ಸಿಂಗ್ ಚವ್ಹಾಣ ಆರಂಭಿಸಿದ ನಾಡದೇವಿ ಉತ್ಸವವನ್ನು ಇದೀಗ ಪುತ್ರರಾದ ನಾಗಠಾಣ ಮಾಜಿ ಶಾಸಕ ದೇವಾನಂದ ಎಫ್. ಚವ್ಹಾಣ ಮತ್ತು ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ ಮುಂದುವರೆಸಿಕೊಂಡು ಬಂದಿದ್ದಾರೆ.

ವರ್ಷದಿಂದ ವರ್ಷಕ್ಕೆ ಉತ್ಸವ ವಿಜೃಂಭಣೆ ಹೆಚ್ಚುತ್ತಿದೆ. ಮೈಸೂರ ದಸರಾ ವೀಕ್ಷಿಸಲು ಸಾಧ್ಯವಾಗದ ಗ್ರಾಮೀಣ ಜನರು ತಾಂಬಾ ನಾಡದೇವಿ ಉತ್ಸವವನ್ನೇ ಕಣ್ತುಂಬಿಕೊಳ್ಳುವುದು ವಿಶೇಷ.

ಕಲಾವಿದರ ಮೆರುಗು

ಅ.3ರಂದು ನಡೆಯಲಿರುವ ನಾಡದೇವಿ ದಸರಾ ಉತ್ತವದ ಉದ್ಘಾಟನಾ ಸಮಾರಂಭದ ಮೆರವಣಿಗೆಯಲ್ಲಿ ನಾಡಿನ ವಿವಿಧ ಭಾಗದ ಕಲಾವಿದರು ಭಾಗಿಯಾಗಿ ತಮ್ಮ ಕಲೆ ಪ್ರದರ್ಶಿಸಿಲಿದ್ದಾರೆ. 1501ಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಭ ಹೊತ್ತು ಮೆರವಣಿಗೆಯ ಮೆರುಗು ಹೆಚ್ಚಿಸಲಿದ್ದಾರೆ. ಇದಕ್ಕೆ ಪೂರಕವಾಗಿ ಕುದುರೆ ಮೆರವಣಿಗೆ, ಯಕ್ಷಗಾನ, ಡೊಳ್ಳು ವಾದನ, ಗೊಂಬೆಗಳ ಕುಣಿತ, ಕೀಲು ಕುದುರೆ ಕುಣಿತ, ಬಂಜಾರಾ ಕಲೆಯ ನೃತ್ಯ, ಡೊಳ್ಳು ಕುಣಿತ, ಝಂಜ್ ಮೇಳ, ಲೇಜಿಮ್ ಸೇರಿದಂತೆ ವಿವಿಧ ಕಲೆ ಪ್ರದರ್ಶಿಸುವ ತಂಡಗಳು ಈಗಾಗಲೇ ಗ್ರಾಮದಲ್ಲಿ ಬೀಡು ಬಿಟ್ಟಿವೆ. ಎರಡು ಕಿ.ಮೀ. ದೂರದ ಮೆರವಣಿಗೆ ಕಣ್ತುಂಬಿಕೊಳ್ಳುವುದೇ ಒಂದು ಅನಂದ.

ಕಾರ್ಯಕ್ರಮಗಳು: ನವರಾತ್ರಿ ಉತ್ಸವ ಅಂಗವಾಗಿ 9 ದಿನ ನಿರಂತರವಾಗಿ ವಿವಿಧ ಸಂಸ್ಕೃತಿಕ, ಮನರಂಜನೆ, ಧಾರ್ಮಿಕ ಕ್ರೀಡಾ ಮತ್ತು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾಗಠಾಣ ಮಾಜಿ ಶಾಸಕ ದೇವಾನಂದ ಎಫ್ ಚವ್ಹಾಣ ಮತ್ತು ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ ತಿಳಿಸಿದ್ದಾರೆ.

ಅ.3ರಂದು ಬೆಳಿಗ್ಗೆ 9ಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಕರು. ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಕುಂಭಮೇಳಕ್ಕೆ ಚಾಲನೆ ನೀಡುವರು. ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ ಭವ್ಯ ಮೆರವಣಿಗೆಗೆ ಚಾಲನೆ ನೀಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.