ADVERTISEMENT

ತಾಂಡಾ ಕಂದಾಯ ಗ್ರಾಮ ಕಾಂಗ್ರೆಸ್ ಕೊಡುಗೆ: ಪ್ರಕಾಶ ರಾಠೋಡ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 13:31 IST
Last Updated 22 ಜನವರಿ 2023, 13:31 IST
ಪ್ರಕಾಶ ರಾಠೋಡ
ಪ್ರಕಾಶ ರಾಠೋಡ   

ವಿಜಯಪುರ: ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡಿರುವುದು ಬಿಜೆಪಿ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು ಬೋಗಸ್ ಹೇಳಿಕೆ ನೀಡಿ ಲಂಬಾಣಿ ಸಮುದಾಯದ ಜನರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಬಾಣಿ ಸಮುದಾಯದ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಯಲ್ಲಿ ಕಾಂಗ್ರೆಸ್ ಪಾತ್ರವೇ ದೊಡ್ಡದಾಗಿದೆ ಎಂದರು.

ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಹಕ್ಕೊತ್ತಾಯ ಈಗಿನದಲ್ಲ, ಲಂಬಾಣಿ ತಾಂಡಾಗಳನ್ನು
ಕಂದಾಯ ಗ್ರಾಮಗಳಾಗಿಸಲು ಬಿ.ಟಿ. ಲಲಿತನಾಯಕ್ ಶಾಸನಸಭೆಯಲ್ಲಿ ಕಣ್ಣೀರು ಹಾಕಿದ್ದರು, ನಾನು ಸೇರಿದಂತೆ ಅನೇಕ ನಾಯಕರು ಈ ಬಗ್ಗೆ ಧ್ವನಿ ಎತ್ತಿದ್ದೆವು ಎಂದು ಹೇಳಿದರು

ADVERTISEMENT

ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ
270 ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು, ಇದು ಸಾಧ್ಯವಾಗಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂದರು.

2013 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಪರಿಣಾಮಕಾರಿಯಾಗಿ ಈ ಯೋಜನೆ ಅನುಷ್ಠಾನಗೊಳಿಸಲು ನರಸಿಂಹಯ್ಯ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ, ವಿಶೇಷ ಐಎಎಸ್ ಅಧಿಕಾರಿಯನ್ನು ಈ ಕಾರ್ಯಕ್ಕೆ ನೋಡೆಲ್ ಅಧಿಕಾರಿಯಾಗಿ ನಿಯೋಜಿಸಿ ಪ್ರಾಮಾಣಿಕ ಪ್ರಯತ್ನ ಮಾಡಿತು. ಅರಣ್ಯ ಕಾಯ್ದೆ, ಭೂ ತಿದ್ದುಪಡಿ ಕಾಯ್ದೆ ಸೇರಿದಂತೆ ಅನೇಕ‌ ಕಾಯ್ದೆಗಳಿಗೆ ರಾಷ್ಟ್ರಪತಿಗಳ ಅಂಕಿತ ದೊರಕಿದ್ದು ಸಹ ಕಾಂಗ್ರೆಸ್ ಅವಧಿಯಲ್ಲಿ ಎಂದರು.

ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ರೂಪಿಸಿದ ಕಾರ್ಯವನ್ನು ತಮ್ಮ ಕಾರ್ಯ ಎಂದು ಬಿಂಬಿಸಲು ಹೊರಟಿದೆ. ಆದರೆ, ಲಂಬಾಣಿ ಸಮುದಾಯಕ್ಕೆ ಸತ್ಯಾಂಶದ ಅರಿವಿದೆ ಎಂದರು.

ಈ ಯೋಜನೆ ಮಲಿಕಾರ್ಜುನ ಖರ್ಗೆ ಅವರ ಕನಸಿನ ಕೂಸು ಎಂದು ಹೇಳಿದರು.

ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಿದ್ದಾರೆ. ಆದರೆ, ಮೂಲ ಸೌಕರ್ಯಕ್ಕೆ ಯಾವ ಅನುದಾನವನ್ನು ಒದಗಿಸಿಲ್ಲ, ಈ ಬಗ್ಗೆ ಮಾತು ಸಹ ಆಡಿಲ್ಲ, ಕೇವಲ ಹಕ್ಕುಪತ್ರ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಲಾಗಿದರ ಎಂದರು.

ಲಂಬಾಣಿ ತಾಂಡಾದಲ್ಲಿ ಕೇವಲ 4 ಸಾವಿರ ಅಡಿಕ್ಕೆ ಅವೈಜ್ಞಾನಿಕ ರೀತಿಯಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. ತಾಂಡಾದಲ್ಲಿರುವ ಉಳಿದ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.

ಎಸ್.ಸಿ. ಪಟ್ಟಿಗೆ ಸೇರಿಸಿದ್ದು ಕಾಂಗ್ರೆಸ್:

ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಿದ್ದು ಕಾಂಗ್ರೆಸ್, ಸಂತ ಸೇವಾಲಾಲರ ಜಯಂತೋತ್ಸವವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಣೆ ಮಾಡಿದ್ದು ಕಾಂಗ್ರೆಸ್ ಎಂದು ತಿಳಿಸಿದರು.

ಬ್ರಿಟಿಷರು ಲಂಬಾಣಿ ಸಮುದಾಯವನ್ನು ಅಪರಾಧಿ ಬುಡಕಟ್ಟು ಸಮಾಜ ಎಂದು ಗುರುತಿಸಿದ್ದರು. ಕಾಂಗ್ರೆಸ್ ಇದನ್ನು ಸಂಪೂರ್ಣವಾಗಿ ತೊಡೆದು ಹಾಕಿ ಲಂಬಾಣಿ ಸಮುದಾಯಕ್ಕೆ ಘನತೆಯಿಂದ ಬದುಕಲು ಬಲ ತುಂಬಿದರು ಎಂದರು.

ದೇಶದ ಪ್ರಧಾನಿ ಮೋದಿ ಅವರು ಅಮೀತಾಬ್ ಬಚ್ಚನ್ ಗಿಂತ ಉತ್ತಮವಾಗಿ ನಟಿಸುತ್ತಾರೆ. ಅವರೊಬ್ಬ ಸುಳ್ಳುಗಾರ ಎಂದು ಟೀಕಿಸಿದರು. ಪ್ರಧಾನಿ ಮೋದಿ ಅವರಿಗೆ ಲಂಬಾಣಿ ಸಮುದಾಯದ ಬಗ್ಗೆ ನೈಜವಾದ ಕಾಳಜಿ ಇದ್ದರೆ ಒಳ ಮೀಸಲಾತಿಗೆ ಸಂಬಂಧಿಸಿದ ನ್ಯಾ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವುದಾಗಿ ಘೋಷಣೆ ಮಾಡಬೇಕಿತ್ತು ಎಂದರು.

ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು ಲಂಬಾಣಿ ತಾಂಡಾದಲ್ಲಿ. ಆ ಸಂದರ್ಭದಲ್ಲಿ ಸಂತ ಸೇವಾಲಾಲರ ದೇವಾಲಯ ಧ್ವಂಸ ಮಾಡಲಾಗಿತ್ತು, ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲರ ಹೆಸರು ಇರಿಸುವ ಘೋಷಣೆಯಾದರೂ ಮಾಡಬೇಕಿತ್ತು ಎಂದರು.

ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮೊಹಮ್ಮದ್ ರಫೀಕ್ ಟಪಾಲ್, ಪ್ರಮುಖರಾದ ಸಾಹೇಬಗೌಡ ಬಿರಾದಾರ, ಪ್ರೇಮಸಿಂಗ್ ಚವ್ಹಾಣ, ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.