ADVERTISEMENT

ವಿಜಯಪುರ: ನಮಗೂ ಸಂಸಾರವಿದೆ ಎಂದು ಶಿಕ್ಷಕರ ಅಳಲು

ಮಕ್ಕಳು ಶಾಲೆಗೆ ಬರುವವರೆಗೆ ರಜೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 5:26 IST
Last Updated 1 ಜುಲೈ 2020, 5:26 IST
ವಿಜಯಪುರದ ಸರ್ಕಾರಿ ಬಾಲಕಿಯರ ಶಾಲೆಯೊಂದರಲ್ಲಿ ಶಿಕ್ಷಕರು
ವಿಜಯಪುರದ ಸರ್ಕಾರಿ ಬಾಲಕಿಯರ ಶಾಲೆಯೊಂದರಲ್ಲಿ ಶಿಕ್ಷಕರು   

ವಿಜಯಪುರ: ‘ಲಾಕ್‌ಡೌನ್ ಸಮಯದಲ್ಲೂ ಸರ್ಕಾರಿ ಶಾಲೆಗಳ ಶಿಕ್ಷಕರು ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಪರಿಸ್ಥಿತಿ ಕಠಿಣವಾಗುತ್ತಿದೆ. ಸೋಂಕು ಹೆಚ್ಚುತ್ತಿದೆ. ಆದ್ದರಿಂದ ಶಿಕ್ಷಕರನ್ನು ಅನಾವಶ್ಯಕವಾಗಿ
ಶಾಲೆಗಳ ಕಡೆಗೆ ಕಳುಹಿಸುವುದನ್ನು ಸರ್ಕಾರ ಕೈ ಬಿಡಬೇಕು’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ವೆಂಕಟಾಚಲಯ್ಯ ಸರ್ಕಾರಕ್ಕೆ ಒತ್ತಾಯಿಸಿದರು.

‘ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜೂನ್ ತಿಂಗಳು ಪೂರ್ಣಗೊಂಡರೂ ಇದುವರೆಗೂ ಶಾಲೆಗಳು ಆರಂಭಗೊಂಡಿಲ್ಲ. ಆದರೂ ಶಿಕ್ಷಕರು ಶಾಲೆಗಳಿಗೆ ಹೋಗಬೇಕು ಎಂದು ಇಲಾಖೆ ನಿರ್ದೇಶನ ನೀಡಿದೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ವರ್ಷಪೂರ್ತಿ ಶೈಕ್ಷಣಿಕ ಚಟುವಟಿಕೆಗಳನ್ನಷ್ಟೇ ಅಲ್ಲದೇ ಚುನಾವಣೆ, ಜನಗಣತಿಯಂತಹ ಕಾರ್ಯಗಳಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ. ಬೇಸಿಗೆ ರಜೆಯಲ್ಲೂ ನಿರಂತರಪೂರ್ವಸಿದ್ಧವಾಗಿ ಇಲಾಖೆಯ ಕಾರ್ಯಕ್ರಮಗಳಲ್ಲಿ ನಾವು ತೊಡಗಿ
ಕೊಂಡಿದ್ದೇವೆ. ಈಗಿನ ಸಂಕಷ್ಟದ ಪರಿಸ್ಥಿತಿಯಲ್ಲೂ ಮಕ್ಕಳ ದಾಖಲಾತಿ, ಮುಂದಿನ ವರ್ಷದ ಶೈಕ್ಷಣಿಕ ಚಟುವಟಿಕೆಗಳ ಯೋಜನೆ ತಯಾರಿಸಲು ಸೂಚಿಸಿದ್ದಾರೆ.ಶಾಲೆಗಳು ಆರಂಭವಾಗುವವರೆಗೂ ಶಿಕ್ಷಕರಿಗೂ ವಿರಾಮ ಕೊಡಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ ಪ್ರತಿಕ್ರಿಯಿಸಿ, ‘ಸರ್ಕಾರದ ನಿರ್ದೇಶನದಂತೆ ಶಿಕ್ಷಕರನ್ನು ಶಾಲೆಗಳಲ್ಲಿರುವಂತೆ ಸೂಚನೆ ನೀಡಲಾಗಿದೆ. ಮಕ್ಕಳನ್ನು ಶಾಲೆಗೆ ದಾಖಲು ಮಾಡುಕೊಳ್ಳುವುದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಅವಶ್ಯವಿರುವ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಶಿಕ್ಷಕರಿಗೆ ಹೇಳಲಾಗಿದೆ. ಸರ್ಕಾರದಿಂದ ನಿರ್ದೇಶನ ಬಂದರೆ ಅವರಿಗೂ ರಜೆ ನೀಡಲಾಗುತ್ತದೆ’ ಎಂದರು.

ಆತಂಕದಲ್ಲಿ ಶಿಕ್ಷಕ ವಲಯ

‘ಶಾಲೆಗೆ ಮಕ್ಕಳ ದಾಖಲಾತಿ ಮತ್ತು ಮುಂತಾದ ವಿಷಯ ಸಂಬಂಧ ಹಳ್ಳಿಗಳಿಗೆ ಹೋದರೆ ಸ್ಥಳೀಯರ ನಮ್ಮನ್ನು ಅನುಮಾನದಿಂದ ನೋಡುವಂತ ಸ್ಥಿತಿ ಇದೆ. ಹೀಗೆ ಹಳ್ಳಿಗಳಿಗೆ ಹೋಗಿ ಮನೆಗೆ ವಾಪಾಸಾದರೆ, ಹೆಂಡತಿ, ಮಕ್ಕಳು ಬಳಿ ಹೋಗುವುದಕ್ಕೂ ಭಯವಾಗುತ್ತದೆ. ದಯಮಾಡಿ ಶಿಕ್ಷಕರ ಈ ಕಷ್ಟಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂದು ಶಿಕ್ಷಕರು ಹೇಳಿದರು.

‘ನಮ್ಮ ಶಾಲೆಗೆ ಬರುವ ಮಕ್ಕಳಿಗೆ ಬಿಸಿಯೂಟದ ಆಹಾರ ಧಾನ್ಯಗಳನ್ನು ವಿತರಣೆ ಮಾಡಿದ್ದೇವೆ. ನಮ್ಮ ಶಾಲೆಗೆ ಬರುವ ಮಕ್ಕಳ ಮನೆಗಳು ಹೆಚ್ಚು ಸೋಂಕು ಇರುವ ಪ್ರದೇಶದಲ್ಲಿವೆ. ಸಹಜವಾಗಿ ಅಲ್ಲಿಗೆಲ್ಲ ಹೋಗಲು ನಮಗೆ ಆತಂಕ ಕಾಡುತ್ತಿದೆ. ಆದರೂ ಸರ್ಕಾರದ ನಿರ್ದೇಶನವನ್ನು ಪಾಲನೆ ಮಾಡಬೇಕು ಎನ್ನು ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ಶಿಕ್ಷಕಿಯೊಬ್ಬರು ಬೇಸರದಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.