
ಸಿಂದಗಿ: ಭಾರತದ ಆರ್ಥಿಕ ಶಕ್ತಿಗೆ ತಂತ್ರಜ್ಞಾನವೇ ಪ್ರಮುಖ ಬಲವಾಗಿದೆ. ದೇಶ ಸಬಲೀಕರಣ ಹೊಂದಬೇಕಾದರೆ ವಿಜ್ಞಾನ-ತಂತ್ರಜ್ಞಾನ ಮತ್ತು ಗುಣಮಟ್ಟದ ಶಿಕ್ಷಣ, ಕೌಶಲಾಭಿವೃದ್ಧಿ ಮುಖ್ಯ ಎಂದು ಭಾರತೀಯ ಪರಮಾಣು ವಿಜ್ಞಾನಿ ಡಾ.ಅನೀಲ ಕಾಕೋಡ್ಕರ್ ಸಲಹೆ ನೀಡಿದರು.
ಪಟ್ಟಣದ ಸಾರಂಗಮಠದಲ್ಲಿ ಬುಧವಾರ ಪೂಜ್ಯ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಸಾಧಿಸಿರುವ ಮುನ್ನಡೆಗಳು ಕೈಗಾರಿಕೆ, ಕೃಷಿ, ಆರೋಗ್ಯ, ಶಿಕ್ಷಣ ಒಳಗೊಂಡಂತೆ ಎಲ್ಲ ರಂಗಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಿ ದೇಶದ ಆರ್ಥಿಕತೆಗೆ ಭದ್ರ ನೆಲೆ ಒದಗಿಸಿವೆ. ಸಂಶೋಧನೆ, ನವೀನ ಆವಿಷ್ಕಾರಗಳು ಹಾಗೂ ತಾಂತ್ರಿಕ ಪ್ರಗತಿಯೇ ಭಾರತದ ಆರ್ಥಿಕ ಬಲದ ಮೂಲವಾಗಿದೆ ಎಂದರು.
ಯುವಕರಲ್ಲಿ ಅಡಗಿರುವ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಗುರುತಿಸಿ ಅವರಿಗೆ ಸರಿಯಾದ ದಾರಿ ತೋರಿಸುವ ಜವಾಬ್ದಾರಿ ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿದೆ. ಕೌಶಲಾಧಾರಿತ ಶಿಕ್ಷಣ, ವೈಜ್ಞಾನಿಕ ಮನೋಭಾವ ಅಂಶಗಳಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ನಿರಂತರವಾಗಿರಲು ಸಾಧ್ಯ ಎಂದು ತಿಳಿಸಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ದೇಶದ ಹಮ್ಮೆಯ ಪರಮಾಣು ವಿಜ್ಞಾನಿ ಸಿಂದಗಿಯಂಥ ಗ್ರಾಮೀಣ ಪ್ರದೇಶಕ್ಕೆ ಬಂದು ಪ್ರಶಸ್ತಿ ಸ್ವೀಕರಿಸಿರುವುದು ನಮಗೆಲ್ಲ ಅತ್ಯಂತ ಹೆಮ್ಮೆ ತರಿಸಿದೆ. ವಿಜ್ಞಾನಿಗಳು ತಮ್ಮ ಮಾತಿನುದ್ದಕ್ಕೂ ಮಾನವೀಯತೆ, ಶಿಸ್ತು, ಶಿಕ್ಷಣದ ಬಗ್ಗೆ ನೀಡಿದ ಸಂದೇಶ ವಿದ್ಯಾರ್ಥಿಗಳಿಗೆ ಪ್ರೇರಣೆದಾಯಕವಾಗಿದೆ ಎಂದು ಹೇಳಿದರು.
ಮೈಸೂರು ಸಿಎಫ್.ಟಿ.ಆರ್.ಐ ನಿವೃತ್ತ ಉಪನಿರ್ದೇಶಕ ಡಾ.ಪರಮಹಂಸ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಗಣಿತದಲ್ಲಿ ಶೂನ್ಯ ಕಂಡು ಹಿಡಿದ ವಿಜಯಪುರ ಜಿಲ್ಲೆ ಬಿಜ್ಜರಗಿಯ ಶ್ರೇಷ್ಠ ಗಣಿತತಜ್ಞ , ಖಗೋಳ ವಿಜ್ಞಾನಿ ಭಾಸ್ಕರಾಚಾರ್ಯರ ಹೆಸರಿನಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಶ್ರೀಗಳ ಆಶಯದಂತೆ ಸಾರಂಗಮಠ ಪ್ರತಿವರ್ಷ ರಾಷ್ಟ್ರಮಟ್ಟದ ವಿಜ್ಞಾನಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಸಮ್ಮುಖ ವಹಿಸಿದ್ದ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಅಭಿನಂದಪರ ಮಾತುಗಳನ್ನಾಡಿದರು.
ಮಾಜಿ ಶಾಸಕರಾದ ರಮೇಶ ಭೂಸನೂರ, ಅರುಣ ಶಹಾಪೂರ ಹಾಗೂ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು ಇದ್ದರು.
ಪೂಜಾ ಹಿರೇಮಠ, ಪ್ರೊ.ರವಿ ಗೋಲಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಪಿಯು ಕಾಲೇಜು ಐದು ವಿದ್ಯಾರ್ಥಿಗಳು ದೇಶದ ಶ್ರೇಷ್ಠ ವಿಜ್ಞಾನಿ ಡಾ.ಅನೀಲ ಕಾಕೋಡ್ಕರ್ ಜೊತೆ ವಿಜ್ಞಾನಕ್ಷೇತ್ರಕ್ಕೆ ಸಂಬಂಧಿಸಿದ ಸಂವಾದ ನಡೆಸಿರುವುದು ಯುವ ಪೀಳಿಗೆಗೆ ದೊರೆತ ಪ್ರೇರಣೆಯಾಗಿದೆಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾರಂಗಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.