ADVERTISEMENT

ಇಂಡಿ | ಸಿದ್ಧಲಿಂಗನ ಕ್ಷೇತ್ರಕ್ಕೆ ಅನುದಾನ: ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:48 IST
Last Updated 15 ಸೆಪ್ಟೆಂಬರ್ 2025, 4:48 IST
ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ ಶನಿವಾರ ನಡೆದ ಪುರಾಣ ಮಹಾಮಂಗಲೋತ್ಸವದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು
ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ ಶನಿವಾರ ನಡೆದ ಪುರಾಣ ಮಹಾಮಂಗಲೋತ್ಸವದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು   

ಇಂಡಿ: ತಾಲ್ಲೂಕಿನ ಲಚ್ಯಾಣದಲ್ಲಿ ಲಿಂ.ಸಿದ್ಧಲಿಂಗ ಮಹಾರಾಜರ ಐಕ್ಯ ಸ್ಥಳದ ಕಾರ್ಯ ಪ್ರಗತಿ ಪಥದತ್ತ ಸಾಗುತ್ತಿದೆ. ಈ ಜೀರ್ಣೋದ್ಧಾರ ಕಾರ್ಯಕ್ಕೆ ಅನುದಾನದ ರೂಪದಲ್ಲಿ ಈ ಹಿಂದೆ ₹1 ಕೋಟಿ ನೀಡಿದ್ದೇನೆ, ಅದೇ ರೀತಿ ಮತ್ತೆ ₹1 ಕೋಟಿ ಅನುದಾನ ನೀಡಲಾಗುವುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.

ತಾಲ್ಲೂಕಿನ ಲಚ್ಯಾಣದಲ್ಲಿ ಸಿದ್ಧಲಿಂಗ ಮಹಾರಾಜರ 98ನೇ ಪುಣ್ಯಾರಾಧನೆ ಅಂಗವಾಗಿ ಶನಿವಾರ ನಡೆದ ಪುರಾಣ ಮಂಗಲ ಕಾಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲರು ಇಂದು ಶಾಂತಿಯಿಂದ ಬದುಕಲು ಕಾರಣ ಮಠದ ಪರಂಪರೆ ರಕ್ಷಣೆಗೆ ನನ್ನ ಜೀವನವನ್ನೆ ಮೀಸಲಾಗಿ ಇಡುತ್ತೇನೆ. ಈ ಕ್ಷೇತ್ರದಲ್ಲಿ ಬಿ.ಇಡಿ ಶಿಕ್ಷಣ ತರಬೇತಿ ಕೇಂದ್ರ ಸ್ಥಾಪನೆಗೆ ಶ್ರಮಿಸುತ್ತೇನೆ ಎಂದರು.

ಇಂತಹ ಮಠದ ಪೀಠಾಧೀಶರಾಗಿದ್ದ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು ಈ ಭಾಗದಲ್ಲಿ ವಿದ್ಯುತ್, ರಸ್ತೆ, ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಶ್ರಮಿಸಿದ್ದಾರೆ. ಪ್ರವಚನ ಕೇಳಿದ ಭಕ್ತರು ಜೋಳಿಗೆಗೆ ಹಾಕಿದ ಹಣದಲ್ಲಿ ಬಿಎಲ್‌ಡಿ ಸಂಸ್ಥೆಯಿಂದ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದಾರೆ. ಇಂಥ ಪೂಜ್ಯರ ಜೀವನ ಚರಿತ್ರೆ ಕುರಿತು ಲಚ್ಯಾಣ ಮಠದಲ್ಲಿ ಪುರಾಣ ಕಾಯಕ್ರಮ ಆಯೋಜಿಸಿದ್ದು ಸಂತೋಷ ಮೂಡಿಸಿದೆ ಎಂದರು.

ADVERTISEMENT

ಯರನಾಳದ ಗುರುಸಂಗನಬಸವ ಸ್ವಾಮೀಜಿ ಮಾತನಾಡಿ, ಲಿಂ.ಸಿದ್ಧಲಿಂಗ ಮಹಾರಾಜರ ಪುಣ್ಯಾರಾಧನೆ ಸಂದರ್ಭದಲ್ಲಿ ಮಳೆ ಆಗುತ್ತಿದ್ದು, ಈ ಕ್ಷೇತ್ರದಲ್ಲಿ ಮಾಣಿಕ್ಯ ರೂಪದಲ್ಲಿ ಬಂದು ನಿಂತವರು ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು ಎಂದರು.

ಪ್ರವಚನಕಾರ ಮುದಗಲ್ನ ಮಹಾಂತ ಸ್ವಾಮೀಜಿ, ಗವಾಯಿಗಳಾದ ಕಲ್ಲೂರಿನ ಶಂಕರಯ್ಯ ಆರ್. ಗುರುಮಠ, ತಬಲಾ ವಾದಕ ಬಸವರಾಜ ಹೊನ್ನಿಗನೂರ, ವಯೋಲಿನ್ ಕಲಾವಿದ ಗೂಗವಾಡದ ಕೃಷ್ಣಾ ಅಂದಾನಿ ಅವರನ್ನು ಸನ್ಮಾನಿಸಲಾಯಿತು.

ಹೂವಿನಹಿಪ್ಪರಗಿಯ ದ್ರಾಕ್ಷಾಯಣಿ ಅಮ್ಮನವರು, ಹಳಿಂಗಳಿಯ ಪೂಜ್ಯರು, ಜಕನೂರಿನ ಸಿದ್ಧಲಿಂಗದೇವರು, ಅಗರಖೇಡದ ಅಭಿನವ ಪ್ರಭುಲಿಂಗ ಸ್ವಾಮೀಜಿ, ಮದರಖಂಡಿ ಬಸವಯ್ಯ ಸ್ವಾಮೀಜಿ, ಆಳೂರಿನ ಶಂಕರಾನಂದ ಸ್ವಾಮೀಜಿ, ಆತ್ಮಾನಂದ ಸ್ವಾಮೀಜಿ ಇದ್ದರು. ನಿವೃತ್ತ ಪ್ರಾಚಾಯ ಎ.ಪಿ. ಕಾಗವಾಡಕರ ಸ್ವಾಗತಿಸಿದರು. ಅರಣ್ಯ ಅಧಿಕಾರಿ ಡಿ.ಎ. ಮುಜಗೊಂಡ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.