ADVERTISEMENT

ವಿಜಯಪುರ |ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರನ್ನು ಕೂಡಿ ಹಾಕಿ ಹಲ್ಲೆ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 10:13 IST
Last Updated 20 ಜನವರಿ 2025, 10:13 IST
<div class="paragraphs"><p>ಬಂಧನ</p></div>

ಬಂಧನ

   

(ಸಾಂದರ್ಭಿಕ ಚಿತ್ರ)

ವಿಜಯಪುರ: ಇಟ್ಟಿಗೆ ಭಟ್ಟಿಯೊಂದರಲ್ಲಿ ಕೆಲಸ ಮಾಡಲು ನಿರಾಕರಿಸಿದ ಮೂವರು ಕೂಲಿ ಕಾರ್ಮಿಕರನ್ನು ಕೂಡಿಹಾಕಿ, ಕೈ-ಕಾಲು ಕಟ್ಟಿ ಅಮಾನವೀಯವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟ್ಟಿಗೆ ಭಟ್ಟಿ ಮಾಲೀಕ, ಮಾಲೀಕನ ಮಗ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ADVERTISEMENT

‘ಕೂಲಿ ಕಾರ್ಮಿಕರಾದ ಸದಾಶಿವ ಮಾದರ, ಸದಾಶಿವ ಬಬಲಾದಿ ಮತ್ತು ಉಮೇಶ ಮಾದರ ಅವರಿಗೆ ಅಂಗಾಲು, ಬೆನ್ನು, ಸೊಂಟಕ್ಕೆ ಗಾಯಗಳಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಆರೋಪದ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಬಸವನಗರದ ಖೇಮು ರಾಠೋಡ, ಆತನ ಮಗ ರೋಹನ್ ಖೇಮು ರಾಠೋಡ ಹಾಗೂ ಸಹಚರರಾದ ಕನಕಮೂರ್ತಿ ಗೋಂಧಳಿ, ಸಚಿನ ಮಾನವರ, ವಿಶಾಲ ಜುಮನಾಳ ಎಂಬುವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

‘ಗಾಂಧಿ ನಗರದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಪ್ರತಿ ದಿನ ₹600 ಕೂಲಿಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಳೆದ ಸಂಕ್ರಮಣದಂದು ಮನೆಗೆ ತೆರಳಿದ್ದರು. ಕೆಲಸಕ್ಕೆ ಬರುವಂತೆ ಇಟ್ಟಿಗೆ ಭಟ್ಟಿ ಮಾಲೀಕ ದೂರವಾಣಿ ಕರೆ ಮಾಡಿದಾಗ, ಹಬ್ಬದ ಖರ್ಚಿಗೆ ₹10 ಸಾವಿರ ನೀಡಲು ಕಾರ್ಮಿಕರು ಕೋರಿದ್ದರು. ಹಣ ಕೊಡುವುದಾಗಿ ಮಾಲೀಕ ಹೇಳಿದ್ದ. ಜನವರಿ 16ರಂದು ಬಂದ ಕಾರ್ಮಿಕರಿಗೆ ಮಾಲೀಕ ಹಣ ಕೊಡದೇ, ಹೆದರಿಸಿ, ಬೆದರಿಸಿ ಕೆಲಸ ಮಾಡಿಸಿದ’ ಎಂದು ವಿವರಿಸಿದರು.

‘ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡಲು ಒಪ್ಪದೇ, ಕೂಲಿ ಕಾರ್ಮಿಕರು ತಮ್ಮ ಎಲ್ಲಾ ವಸ್ತುಗಳ ಸಹಿತ ಮನೆಗೆ ಹೋಗಲು ಪ್ರಯತ್ನಿಸಿದಾಗ, ಮಾಲೀಕ ಮತ್ತು ಆತನ ಮಗ ತಡೆದಿದ್ದಾರೆ. ತಮ್ಮ ಕಡೆಯ ಜನರನ್ನು ಕರೆಸಿಕೊಂಡು, ಕಾರ್ಮಿಕರನ್ನು ಕೊಠಡಿಯಲ್ಲಿ ಕೂಡಿ ಹಾಕಿ, ನಿತ್ಯವೂ ಹಲ್ಲೆ ಮಾಡಿಸಿದ್ದಾರೆ’ ಎಂದು ಹೇಳಿದರು.

ಕಾರ್ಮಿಕರ ಮೇಲೆ ನಡೆದಿರುವ ಹಲ್ಲೆ ಅಮಾನವೀಯ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು
ಎಂ. ಬಿ. ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ, ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.