ADVERTISEMENT

ಬೆಳೆಗೆ ರೋಗ | ಸೂಕ್ತ ಪರಿಹಾರ ಅಗತ್ಯ: ಐ.ಕೆ. ಕಾಳಪ್ಪನವರ

ಧಾರವಾಡ ಕೃಷಿ ವಿ.ವಿ ಡೀನ್ ಐ.ಕೆ. ಕಾಳಪ್ಪನವರ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 16:18 IST
Last Updated 16 ಆಗಸ್ಟ್ 2024, 16:18 IST
ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ತಾಂತ್ರಿಕ ಸಭೆಯನ್ನು ಧಾರವಾಡ ಕೃಷಿ ವಿ.ವಿ ಡೀನ್ ಕಾಳಪ್ಪನವರ ಉದ್ಘಾಟಿಸಿದರು
ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ತಾಂತ್ರಿಕ ಸಭೆಯನ್ನು ಧಾರವಾಡ ಕೃಷಿ ವಿ.ವಿ ಡೀನ್ ಕಾಳಪ್ಪನವರ ಉದ್ಘಾಟಿಸಿದರು   

ವಿಜಯಪುರ: ‘ಬೆಳೆಗಳಿಗೆ ರೋಗಭಾದೆ ಹೆಚ್ಚಾಗುತ್ತಿದ್ದು, ಶೇ 60ರಷ್ಟು ರೋಗ ತಡೆಯಲು ಸಸ್ಯರೋಗ ಶಾಸ್ತ್ರಜ್ಞರು ವಿಶೇಷ ಯೋಜನೆ ರೂಪಿಸಬೇಕು’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡೀನ್ ಐ.ಕೆ. ಕಾಳಪ್ಪನವರ ಹೇಳಿದರು.

ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ಸಸ್ಯರೋಗಶಾಸ್ತ್ರ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ವಾರ್ಷಿಕ ತಾಂತ್ರಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರು ವಾಣಿಜ್ಯ ಬೆಳೆಗಳತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಬೆಳೆಗಳಿಗೆ ವಾತಾವರಣ ಬದಲಾವಣೆಯಿಂದ ಅನೇಕ ರೋಗಗಳು ಉಂಟಾಗುತ್ತವೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸಲು ನಾವೆಲ್ಲ ಶ್ರಮಿಸಬೇಕಾಗಿದೆ’ ಎಂದರು.

ADVERTISEMENT

ಮುಖ್ಯಸ್ಥ ಪಿ.ವಿ. ಪಾಟೀಲ ಮಾತನಾಡಿ, ‘ರೈತರು ತೊಗರಿ, ಮೆಕ್ಕೆಜೋಳ, ಗೋಧಿ, ಕಬ್ಬು ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ನೂತನ ಬೀಜೋಪಚಾರ, ಔಷಧಗಳು, ರೋಗ ಬಂದ ಸಂದರ್ಭದಲ್ಲಿ ಹೊಸ ರೋಗನಾಶಕ ಔಷಧಗಳ ಕುರಿತು ಸಂಶೋಧನೆ ಕೈಗೊಳ್ಳಬೇಕು. ರೋಗ ನಿರೋಧಕ ತಳಿಗಳನ್ನು ರೈತರಿಗೆ ಪರಿಚಯಿಸಬೇಕು’ ಎಂದರು.

ಕೃಷಿ ಮಹಾವಿದ್ಯಾಲಯದ ಡೀನ್ ಭೀಮಪ್ಪ ಎ. ಮಾತನಾಡಿ, ‘ಹಲವು ಸಸ್ಯಔಷಧಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ತಜ್ಞರು ಬೆಳೆಗೆ ತಗಲುವ ರೋಗಗಳಿಗೆ ಸಾವಯವ ಕ್ರಮಗಳಿಂದ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.

ಸಹ ಸಂಶೋಧನಾ ನಿರ್ದೇಶಕ ಎ.ಎಸ್.ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ರವೀಂದ್ರ ಬೆಳ್ಳಿ ಮಾತನಾಡಿದರು. ಅರುಣ ಸತರಡ್ಡಿ, ಎಸ್.ಎಂ. ವಸ್ತ್ರದ, ಧಾರವಾಡ ಕೃಷಿ ವಿ.ವಿ ಸಸ್ಯರೋಗ ತಜ್ಞರಾದ ಶಾಮರಾವ ಜಾಗೀರದಾರ, ಶ್ರೀಪಾದ ಕುಲಕರ್ಣಿ, ಎಸ್.ಐ.ಹರ್ಲಾಪೂರ, ಪಿ.ನಾಗರಾಜು, ಕೆ.ಬಿ.ಯಡಹಳ್ಳಿ, ಪ್ರಶಾಂತಿ, ಬಸಮ್ಮ ಕುಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.