ADVERTISEMENT

ಆಲಮೇಲ: ಕಡೆಗಣನೆಗೆ ಒಳಗಾದ ಕಡಣಿ ಗ್ರಾಮ

ಬೇಕಿದೆ ಬಸ್ ನಿಲ್ದಾಣ, ಸ್ಮಶಾನ ಜಾಗ

ಡಾ.ರಮೇಶ ಎಸ್.ಕತ್ತಿ
Published 12 ಮಾರ್ಚ್ 2025, 5:50 IST
Last Updated 12 ಮಾರ್ಚ್ 2025, 5:50 IST
ಆಲಮೇಲ ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ದುರಸ್ತಿಗೆ ಕಾದ ಶುದ್ಧಕುಡಿಯುವ ನೀರಿನ ಘಟಕ
ಆಲಮೇಲ ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ದುರಸ್ತಿಗೆ ಕಾದ ಶುದ್ಧಕುಡಿಯುವ ನೀರಿನ ಘಟಕ   

ರಮೇಶ ಎಸ್. ಕತ್ತಿ

ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮವು ಜಿಲ್ಲೆಯ ಕೊನೆಯಹಳ್ಳಿಯಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳ ಕಡೆಗಣನೆಗೆ ಒಳಗಾಗಿದೆ.

ಕಲಬುರಗಿ ಮತ್ತು ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಕಡಣಿ ಬ್ಯಾರೇಜ್‌ ನಿರ್ಮಾಣಕ್ಕೆ ಈಗಾಗಲೇ ₹ 44.50 ಕೋಟಿ ಮಂಜೂರಾಗಿದ್ದು, ಕಾಮಗಾರಿ ನಡೆಯದೇ ನನೆಗುದಿಗೆ ಬಿದ್ದಿದೆ. ಸಕ್ಕರೆ ಕಾರ್ಖಾನೆಯೂ ಗ್ರಾಮದ ಸಮೀಪದಲ್ಲಿರುವುದರಿಂದ ನಿತ್ಯ ನೂರಾರು ರೈತರು ಬಂದು,ಹೋಗುತ್ತಾರೆ. ಆದರೆ, ಗ್ರಾಮಕ್ಕೆ ಬಸ್ ನಿಲ್ದಾಣ ಎಂಬುದೇ ಇಲ್ಲವಾಗಿದೆ.

ADVERTISEMENT

ಶುದ್ದ ಕುಡಿಯುವ ನೀರಿನ ಘಟಕ ಹೆಸರಿಗಿದೆ ಅದು ಕಾರ್ಯನಿರ್ವಹಿಸುತ್ತಿಲ್ಲ, ಸಾವಿರಕ್ಕೂ ಹೆಚ್ಚು ಮನೆಗಳಿವೆ, ಸ್ಮಶಾನಜಾಗವಿಲ್ಲ ಈ ಎಲ್ಲ ಸೌಲಭ್ಯಗಳು ಬೇಕು ಎನ್ನುತ್ತಿದ್ದಾರೆ ಕಡಣಿ ಗ್ರಾಮಸ್ಥರು.

ಹೌದು, ಕಡಣಿ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾಗಿದೆ. ನಾಲ್ಕು ಹಳ್ಳಿಗಳ ಕೇಂದ್ರಸ್ಥಾನ ಗ್ರಾಮ ಪಂಚಾಯಿತಿ ಕಾರ್ಯಾಲಯವೂ ಹೊಂದಿದೆ, ಶಾಲಾ ಕಾಲೇಜು ಇದೆ. ಆದರೆ, ಇಲ್ಲಿಂದ ಬಸ್ ಬರುವ ಜಾಗಕ್ಕೆ ಬಂದರೆ ಕುಳಿತುಕೊಳ್ಳಲು ಬಸ್ ನಿಲ್ದಾಣ ಎಂಬುದು ಇಲ್ಲವೇ ಇಲ್ಲ, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಹತ್ತಿರದ ಮನೆಗಳ ಮುಂದಿನ ಕಟ್ಟೆಗಳ ಮೇಲೆ ಕುಳಿತುಕೊಳ್ಳಬೇಕು.

ಬೈಕ್‌, ವಾಹನಗಳಿದ್ದವರು ಈ ಸಮಸ್ಯೆ ಅರಿವಿಗೆ ಬಾರದೇ ಇರಬಹುದು. ಆದರೆ, ಬಸ್ಸಿಗೆ ಹೋಗುವ ನಿತ್ಯ ನೂರಾರು ಜನರು ಕುಳಿತುಕೊಳ್ಳಲು ಜಾಗವಿಲ್ಲದೆ ಪರಿತಪಿಸುತ್ತಿದ್ದಾರೆ. ಆಲಮೇಲ ಪಟ್ಟಣಕ್ಕೆ, ತಾವರಖೇಡ ಗ್ರಾಮಕ್ಕೆ ತೆರಳುವವರು ಈ ಸಂಕಷ್ಟ ನಿತ್ಯ ಅನುಭವಿಸುತ್ತಿದ್ದಾರೆ.

ಸಣ್ಣಹಳ್ಳಿಗಳಲ್ಲೂ ಬಸ್ ನಿಲ್ದಾಣದ ಕಟ್ಟಡಗಳಿರುತ್ತವೆ. ದೊಡ್ಡ ಊರಾದರೂ ನಮ್ಮಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವುದಕ್ಕಾದರೂ ಸ್ಥಳ ಬೇಡವೇ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಪ್ರಮುಖ ಸಂತೋಷ ಕ್ಷತ್ರಿ ಒತ್ತಾಯಿಸಿದರು.

ಉಪಯೋಗಕ್ಕಿಲ್ಲ:

ಕಳೆದ ಐದು ವರ್ಷಗಳ ಹಿಂದೆ ಗ್ರಾಮೀಣ ಶುದ್ಧಕುಡಿಯುವ ಮತ್ತು ನೈರ್ಮಲ್ಯ ಇಲಾಖೆಯಡಿ ಹಳ್ಳಿಗಳಲ್ಲಿ ಶುದ್ದೀಕರೀಸುವ ನೀರಿನ ಘಟಕವನ್ನು ತೆರೆದಿದ್ದರು, ಅದು ಕೆಲ ವರ್ಷ ನಡೆಯಿತು. ಬಂದ್ ಬಿದ್ದಾಗೊಮ್ಮೆ ರಿಪೇರಿ ಮಾಡಿಸುವುದಿತ್ತು. ಇತ್ತಿತ್ತಲಾಗಿ ಅದ್ನನ್ನು ಕೇಳುವವರು ಇಲ್ಲವೇ ಎನ್ನುವಂತಾಗಿದೆ.

‘ಬಹಳ ತಿಂಗಳಿಂದಲೂ ಕಾರ್ಯನಿರ್ವಹಿಸುತ್ತಿಲ್ಲ, ಇದನ್ನು ದುರಸ್ತಿ ಮಾಡಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದರ ಅಗತ್ಯ ಬಹಳವಿದೆ, ತುರ್ತು ದುರಸ್ತಿ ಮಾಡಿಸಬೇಕು’ ಎಂದು ಭೋಗಪ್ಪ ಬಿರಾದಾರ ಆಗ್ರಹಿಸಿದ್ದಾರೆ.

‘ಉಳ್ಳವರು ತಮ್ಮ ಜಮೀನುಗಳಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ, ಭೂಮಿ ಇರದವರು ಏನು ಮಾಡಬೇಕು ಎಂಬುದು ಸಮಸ್ಯೆಯಾಗಿದೆ. ಆದಷ್ಟು ಬೇಗ ಗ್ರಾಮ ಪಂಚಾಯಿತಿ ಸ್ಮಶಾನಕ್ಕಾಗಿ ಭೂಮಿಯನ್ನು ನೀಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಡಣಿ ಬಸ್ ನಿಲ್ದಾಣದಲ್ಲಿ ಜನರಿಗೆ ಆಸರೆ ಇದೊಂದೆ
ಹೊಸದಾಗಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಕ್ರೀಯಾಯೋಜನೆ ಮಾಡಲಾಗಿದೆ.  ಸ್ಮಶಾನ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಬಗೆಹರಿಸುತ್ತೇವೆ
ಬಸಲಿಂಗಪ್ಪ ಎಸ್. ಕತ್ತಿ ಅಧ್ಯಕ್ಷ ಕಡಣಿ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.