
ಸಿಂದಗಿ: ಈ ನೆಲದ ಹೆಮ್ಮೆಯ ಪುತ್ರ, ರಂಗಭೂಮಿಯ ಮೇರುನಟ, ನಟಭಯಂಕರರೆಂದೇ ಬಿರುದಾಂಕಿತರಾಗಿದ್ದ ರಾಜ್ಯಮಟ್ಟದ ರಂಗಭೂಮಿ ಖ್ಯಾತ ಕಲಾವಿದ ತಾಲ್ಲೂಕಿನ ಹಂದಿಗನೂರ ಗ್ರಾಮದ ಹಂದಿಗನೂರ ಸಿದ್ರಾಮಪ್ಪನವರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣ ಬಹು ವರ್ಷಗಳಿಂದ ತಾಂತ್ರಿಕ ಕಾರಣಾಂತರದಿಂದ ನನೆಗುದಿದೆ ಬಿದ್ದಿತ್ತು.
‘ಈಗ ₹55 ಲಕ್ಷ ಅನುದಾನ ಬಿಡುಗಡೆಗೊಂಡು ಕಾಮಗಾರಿಗೆ ಚಾಲನೆ ದೊರಕಿದೆ. ಎರಡನೆಯ ಹಂತದ ₹60 ಲಕ್ಷ ಅನುದಾನದ ಟೆಂಡರ್ ಪ್ರಕ್ರಿಯೆ ಬೇಗನೆ ನಡೆಯುವುದು. ಈ ರಂಗಮಂದಿರ ನನ್ನ ಶಾಸಕ ಅಧಿಕಾರ ಅವಧಿಯಲ್ಲಿಯೇ ಉದ್ಘಾಟನೆಗೊಳ್ಳುತ್ತದೆ’ ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಪಟ್ಟಣದ ಜಿ.ಪಿ.ಪೋರವಾಲ ಕಾಲೇಜು ಎದುರಿನ ಪುರಸಭೆ ನಿವೇಶನದಲ್ಲಿ ಮಂಗಳವಾರ ಏರ್ಪಡಿಸಿದ್ದ ಹಂದಿಗನೂರ ಸಿದ್ರಾಮಪ್ಪ ರಂಗಮಂದಿರ ಭೂಮಿಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇಡೀ ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿಯನ್ನಾಗಿಸಲು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಶಿಕ್ಷಕರ ಭವನಕ್ಕಾಗಿ ₹50 ಲಕ್ಷ ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆಯಲ್ಲಿದೆ. ಡಾ. ಅಂಬೇಡ್ಕರ್ ವೃತ್ತದಿಂದ ಮಹಾತ್ಮಗಾಂಧಿ ವೃತ್ತದವರೆಗೆ ₹1 ಕೋಟಿ ವೆಚ್ಚದಲ್ಲಿ ಡಲ್ಟ್ ವಿಭಾಗದಿಂದ ರಸ್ತೆ ಎರಡೂ ಬದಿ ಪಾದಚಾರಿ ಮಾರ್ಗ ನಿರ್ಮಾಣ, ವಿದ್ಯುದೀಪಗಳ ಅಳವಡಿಕೆ ಕಾರ್ಯ ಪ್ರಾರಂಭಗೊಳ್ಳುವುದು. ಚಿಕ್ಕಸಿಂದಗಿ ಬೈಪಾಸ್‌ನಿಂದ ಹೆಸ್ಕಾಂ ಸ್ಟೇಷನ್ ಬಳಿ ಪೆಟ್ರೋಲ್ ಬಂಕ್‌ವರೆಗೆ ಹದಗೆಟ್ಟ ರಸ್ತೆ ಸುಧಾರಣೆಗಾಗಿ ₹4.60 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ದೊರಕುವುದು’ ಎಂದು ವಿವರಿಸಿದರು.
ಕೆರೆ ಅಭಿವೃದ್ಧಿ ಯೋಜನೆಯಡಿ ಕೆರೆಯ ಮೇಲೆ ವಾಯುವಿಹಾರಕ್ಕಾಗಿ ಅಗತ್ಯವಾಗಿರುವ ಕಾಮಗಾರಿಗಾಗಿ ₹53 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಪಟ್ಟಣದ ಜನತೆಗೆ ಆರೋಗ್ಯದ ದೃಷ್ಟಿಯಿಂದ ತೀರ ಅಗತ್ಯವಾಗಿರುವ ₹45 ಲಕ್ಷ ವೆಚ್ಚದಲ್ಲಿ ಜಿಲ್ಲೆಯಲ್ಲಿಯೇ ಮಾದರಿಯಾಗಿರುವ ಸುಸಜ್ಜಿತಗೊಂಡ ಹೈಟೆಕ್ ಅಬ್ಯುಲನ್ಸ್ ಮುಂಬರುವ ಜನವರಿ 26 ರಂದು ಲೋಕಾರ್ಪಣೆಗೊಳ್ಳುವುದು ಎಂದು ತಿಳಿಸಿದರು.
ಸಾರಂಗಮಠದ ಪೀಠಾಧ್ಯಕ್ಷರಾದ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಎಂ.ಎಂ.ಪಡಶೆಟ್ಟಿ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಸಿದ್ಧಲಿಂಗ ಚೌಧರಿ ಮಾತನಾಡಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಎಂ.ಮುಂಡೇವಾಡಗಿ, ಪುರಸಭೆ ಮಾಜಿ ಉಪಾಧ್ಯಕ್ಷ ಹಾಸಿಂ ಆಳಂದ, ಪುರಸಭೆ ಜೆಇ ಅಜರ್ ನಾಟೀಕಾರ, ಗುತ್ತಿಗೆದಾರ ಮುತ್ತು ಮಾಳೇಗಾರ ಇದ್ದರು.
‘ಗದಗ ತೋಂಟದಶ್ರೀ ಪುತ್ಥಳಿ ಸ್ಥಾಪನೆ’
ಸಿಂದಗಿ ಪಟ್ಟಣದ ಕೆರೆ ಕೆಳಗಿರುವ ಸಿಂದಗಿ ಸಿರಿ ಲಿಂ. ಶಾಂತವೀರ ಪಟ್ಟಾಧ್ಯಕ್ಷರ ವನವನ್ನು ₹2.40 ಕೋಟಿ ವಿಶೇಷ ಅನುದಾನದಲ್ಲಿ ಭವ್ಯ ರೀತಿಯಲ್ಲಿ ಹಸಿರಾಗಿಸಿ ಅಲ್ಲಿ ಸಿಂದಗಿಯವರೇ ಆದ ಗದಗ ತೋಂಟದಾರ್ಯ ಸಂಸ್ಥಾನಮಠದ ಲಿಂ. ಸಿದ್ಧಲಿಂಗ ಶ್ರೀಗಳ ನೆನಹುಗಾಗಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.