ADVERTISEMENT

ಸಹಸ್ರಾರು ಭಕ್ತರಿಂದ ಸಿದ್ಧೇಶ್ವರ ಸ್ವಾಮೀಜಿ ಚಿತಾಭಸ್ಮ ದರ್ಶನ

ನದಿ, ಸಮುದ್ರದಲ್ಲಿ ಸಿದ್ಧೇಶ್ವರರ ಚಿತಾಭಸ್ಮ ವಿಸರ್ಜನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 22:18 IST
Last Updated 4 ಜನವರಿ 2023, 22:18 IST
ವಿಜಯಪುರ ಜ್ಞಾನಯೋಗಾಶ್ರಮಕ್ಕೆ ಭಕ್ತರು ಬುಧವಾರ ಭೇಟಿ ನೀಡಿ ಸಿದ್ಧೇಶ್ವರ ಸ್ವಾಮೀಜಿ ಅವರ ಚಿತಾಭಸ್ಮದ ದರ್ಶನ ಪಡೆದರು  – ಪ್ರಜಾವಾಣಿ ಚಿತ್ರ
ವಿಜಯಪುರ ಜ್ಞಾನಯೋಗಾಶ್ರಮಕ್ಕೆ ಭಕ್ತರು ಬುಧವಾರ ಭೇಟಿ ನೀಡಿ ಸಿದ್ಧೇಶ್ವರ ಸ್ವಾಮೀಜಿ ಅವರ ಚಿತಾಭಸ್ಮದ ದರ್ಶನ ಪಡೆದರು  – ಪ್ರಜಾವಾಣಿ ಚಿತ್ರ   

ವಿಜಯಪುರ: ಸಿದ್ಧೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಡೆದ ಜ್ಞಾನ ಯೋಗಾಶ್ರಮಕ್ಕೆ ಬುಧವಾರ ದಿನಪೂರ್ತಿ ಸಹಸ್ರಾರು ಭಕ್ತರು ಭೇಟಿ ನೀಡಿ ಚಿತಾಭಸ್ಮದ ದರ್ಶನ ಪಡೆದರು.

ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದವರು ಹಾಗೂ ಪಡೆಯಲಾಗದವರು ಸೇರಿದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಆಶ್ರಮಕ್ಕೆ ಬೆಳಿಗ್ಗೆಯಿಂದಲೇ ಬಂದು ಸರದಿಯಲ್ಲಿ ನಿಂತು ಚಿತಾಭಸ್ಮಕ್ಕೆ ಕೈಮುಗಿದು, ಕಂಬನಿ ಮಿಡಿದರು.

ಆಶ್ರಮದ ಗಿಡಮರಗಳ ಕೆಳಗೆ ಕುಳಿತು ಸಿದ್ಧೇಶ್ವರ ಶ್ರೀಗಳ ಗುಣಗಾನ, ಭಜನೆ ಮಾಡುತ್ತಿರುವ ದೃಶ್ಯ ಕಂಡುಬಂದಿತು.

ADVERTISEMENT

‘ಶ್ರೀಗಳು ದೈಹಿಕವಾಗಿ ನಮ್ಮ ನಡುವೆ ಇಲ್ಲವಾದರೂ, ಅವರ ಪ್ರವಚನಗಳು, ನೀತಿ ಬೋಧನೆಗಳು, ವಿಚಾರಗಳು ನಮ್ಮಲ್ಲಿ ನಿರಂತರವಾಗಿರುತ್ತವೆ’ ಎಂದು ಚಿತಾಭಸ್ಮ ದರ್ಶನಕ್ಕೆ ಬಂದಿದ್ದ ಭಕ್ತರಾದ ಸುಮಂಗಲಾ ಬಿರಾದಾರ, ಸಿದ್ದಮ್ಮ ದಳವಾಯಿ, ಗೀತಾ ಅಂಗಡಿ, ಬೋರಮ್ಮ ಹಂಚಿನಾಳ ಹೇಳಿದರು.

ಐದು ಕಡೆ ವಿಸರ್ಜನೆ: ‘ಸಿದ್ಧೇಶ್ವರ ಶ್ರೀಗಳ ಕೋರಿಕೆಯಂತೆ ಅವರ ಚಿತಾಭಸ್ಮವನ್ನು ನಾಲ್ಕು ನದಿ, ಒಂದು ಸಾಗರ ಸೇರಿದಂತೆ ಐದು ಕಡೆ ಒಂದೆರಡು ದಿನಗಳಲ್ಲಿ ವಿಸರ್ಜಿಸಲಾಗುವುದು’ ಎಂದು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.

‘ಸಾರ್ವಜನಿಕರಿಗೆ ಶ್ರೀಗಳ ಚಿತಾಭಸ್ಮ ನೀಡಲಾಗುವುದು ಎಂದು ಅಂತ್ಯಕ್ರಿಯೆ ವೇಳೆ ತಿಳಿಸಲಾಗಿತ್ತು. ಆದರೆ, ಈಗ ನೀಡದಿರಲು ನಿರ್ಧರಿಸಲಾಗಿದೆ’ ಎಂದರು.

‘ಶ್ರೀಗಳ ಬಗ್ಗೆ ಗೌರವ ಇರುವವರು ಆಶ್ರಮದ ಜ್ಞಾನ ಭಂಡಾರದಲ್ಲಿ ಸಿಗುವ ಗ್ರಂಥಗಳನ್ನು, ವಿಭೂತಿಯನ್ನು ಕೊಂಡೊಯ್ಯಲಿ’ ಎಂದರು.

‘ಆಶ್ರಮದಲ್ಲಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ನಿತ್ಯ ದಾಸೋಹ, ಪ್ರವಚನಗಳು ಮುಂದುವರಿಸಿಕೊಂಡು ಹೋಗಬೇಕು ಎಂಬ ಆಶಯ ಇದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.