ADVERTISEMENT

ತಿಕೋಟಾ: ನಾಳೆಯಿಂದ ಹಾಜಿ ಮಸ್ತಾನ್ ಜಾತ್ರೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 15:17 IST
Last Updated 31 ಆಗಸ್ಟ್ 2018, 15:17 IST

ತಿಕೋಟಾ:ಭಾವೈಕ್ಯದ ಸಂಕೇತ ಇಲ್ಲಿನ ಹಜರತ್ ಹಾಜಿ ಮಸ್ತಾನ್ ಜಾತ್ರೆ ಶನಿವಾರ (ಸೆ.1)ದಿಂದ ನಾಲ್ಕು ದಿನ ನಡೆಯಲಿದೆ.

ಶನಿವಾರ ರಾತ್ರಿ 8ಕ್ಕೆ ರಾಮರಾವ್ ದೇಸಾಯಿ ಮನೆಯಿಂದ ವಾದ್ಯ ವೈಭವದೊಂದಿಗೆ ಗಂಧ ಒಯ್ಯುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10ಕ್ಕೆ ಮಾಲಾಬಾಯಿ ಹಿಡಕಲ್ ತಂಡದಿಂದ ಕೃಷ್ಣ ಪಾರಿಜಾತ (ಬಯಲಾಟ) ಪ್ರದರ್ಶನ ನಡೆಯಲಿದೆ.

ಇದೇ 2ರ ಭಾನುವಾರ ನೈವೇದ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ಕ್ಕೆ ಡಾ.ಮಲ್ಲನಗೌಡ ಪಾಟೀಲ ಮನೆಯವರಿಂದ ಗಲೀಪ ಕಾರ್ಯಕ್ರಮ, 10ಕ್ಕೆ ವಾಡೆ ಮೈದಾನದಲ್ಲಿ ಗಜಾನನ ಉತ್ಸವ ಸಮಿತಿ ಹಳೆ ಪಂಚಾಯ್ತಿ ಆಶ್ರಯದಲ್ಲಿ, ಜೈ ಹನುಮಾನ ನಾಟ್ಯ ಸಂಘ ಅರ್ಪಿಸುವ ‘ಕುಂಟ ಕೋಣ, ಮೂಕ ಜಾಣ’ ಎಂಬ ಸುಂದರ ಸಾಮಾಜಿಕ ಹಾಸ್ಯ ಭರಿತ ನಾಟಕ ಪ್ರದರ್ಶನಗೊಳ್ಳಲಿದೆ.

ADVERTISEMENT

ಇದೇ 3ರ ಸೋಮವಾರ ಹೂ ಇಳಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ 4ಕ್ಕೆ ಅಥಣಿ ರಸ್ತೆಯಲ್ಲಿ ಜಂಗಿ ಕುಸ್ತಿ ಜರುಗಲಿವೆ. ರಾತ್ರಿ 10.30ಕ್ಕೆ ಮಹಾತ್ಮ ಗಾಂಧಿ ಚೌಕ್‌ನಲ್ಲಿ ಕನಕದಾಸ ನಾಟ್ಯ ಸಂಘ ಅರ್ಪಿಸುವ ‘ಭೂಮಿಗೆ ಬಂದ ಭಗವಂತ’ ಅರ್ಥಾತ್ ‘ಸಾಕು ಮಗ ಸರ್ದಾರ’ ಎಂಬ ಸುಂದರ ಸಾಮಾಜಿಕ ನಾಟಕ ಜನಾರ್ದನ ಸಿಂದೆ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

ಇದೇ 4ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಎತ್ತಿನಗಾಡಿ ಸ್ಪರ್ಧೆ ನಡೆಯಲಿದೆ. ಇದಕ್ಕೆ ಪ್ರವೇಶ ಶುಲ್ಕ ₨ 2000. ನಾಲ್ಕು ಬಹುಮಾನಗಳಿದ್ದು ಪ್ರಥಮ ₹ 20001, ದ್ವಿತೀಯ ₹ 15001, ತೃತೀಯ ₹ 10001, ಚತುರ್ಥ ಬಹುಮಾನ ₹ 7001 ನಗದನ್ನು ವಿಧಾನ ಪರಿಷತ್‌ನ ಚುನಾವಣಾ ಅಖಾಡದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ ಸುನೀಲಗೌಡ ಬಿ.ಪಾಟೀಲ ಪ್ರಾಯೋಜಿಸಿದ್ದಾರೆ ಎಂದು ಹಾಜಿಮಸ್ತಾನ ದರ್ಗಾ ಕಮಿಟಿಯ ಜೀವಪ್ಪ ನೀಲಪ್ಪ ಕುರ್ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.