ADVERTISEMENT

ಶೌಚಾಲಯ ನಿರ್ಮಾಣ: ಅನುದಾನ ದುರ್ಬಳಕೆ ವಿರುದ್ಧ ಕ್ರಮ

ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 15:06 IST
Last Updated 11 ಜನವರಿ 2021, 15:06 IST
ವಿಜಯಪುರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಬಾಕಿ ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಮಾತನಾಡಿದರು
ವಿಜಯಪುರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಬಾಕಿ ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಮಾತನಾಡಿದರು   

ವಿಜಯಪುರ: ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಆಗಿರುವ ಅನುದಾನ ದುರ್ಬಳಕೆ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಿ, ದುರ್ಬಳಕೆಯಾಗಿರುವ ಅನುದಾನ ಬಡ್ಡಿ ಸಹಿತ ವಾಪಸ್ ಪಡೆಯಲು ಕ್ರಮಕೈಗೊಳ್ಳಲಾಗುವುದು ಎಂದುಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಬಾಕಿ ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈವರೆಗೆ ವೈಯಕ್ತಿಕ, ಸಮುದಾಯ ಶೌಚಾಲಯಗಳ ನಿರ್ಮಾಣ, ಅನುದಾನದ ಸಮರ್ಪಕ ಬಳಕೆ, ಅನುದಾನ ದುರ್ಬಳಕೆ ಸೇರಿದಂತೆ ಸಮಗ್ರ ಮಾಹಿತಿಯನ್ನು ಒಳಗೊಂಡ ವರದಿಯನ್ನು ಪ್ರತಿ ಗ್ರಾಮ ಪಂಚಾಯ್ತಿವಾರು ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸಲ್ಲಿಸಬೇಕು ಎಂದು ಅವರು ಸೂಚನೆ ನೀಡಿದರು.

ADVERTISEMENT

ಗ್ರಾಮೀಣ ನೈರ್ಮಲ್ಯತೆಗೆ ವಿಶೇಷ ಗಮನ ನೀಡಬೇಕು. ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ರೂಪಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ನೈರ್ಮಲ್ಯ ಕಾಪಾಡುವ ಕುರಿತಂತೆ ಎಲ್ಲ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ, ಆಯಾ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳಿಂದ ಅವಶ್ಯಕ ಕ್ರಮ ಕೈಗೊಳ್ಳಲು ತಿಳಿಸಿದರು.

ಜಿಲ್ಲೆಯಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳ ಬಾಕಿ ಪ್ರಕರಣಗಳು, ಸರ್ಕಾರದ ಸೌಲಭ್ಯ ವಂಚಿತ ಮತ್ತು ನೆರೆ ಸಂತ್ರಸ್ತರ ಅರ್ಜಿ ಇತ್ಯರ್ಥ ಕುರಿತು ಸಮಗ್ರ ವಿವರಣೆ ಒಳಗೊಂಡ ವರದಿಯನ್ನು ಸಹ ಪ್ರತಿ ತಹಶೀಲ್ದಾರರು ಒಂದು ತಿಂಗಳಲ್ಲಿ ಸಲ್ಲಿಸಬೇಕು ಎಂದರು.

ಸಾರ್ವಜನಿಕರ ದೂರುಗಳನ್ನು ಸಕಾಲಕ್ಕೆ ಇತ್ಯರ್ಥ ಪಡಿಸಬೇಕು ಮತ್ತು ಸರ್ಕಾರದ ಸೌಲಭ್ಯಗಳು ಬಾಕಿ ಉಳಿಯದಂತೆ ನಿಗಾ ಇಡಬೇಕು. ಪ್ರತಿ ತಾಲ್ಲೂಕಿನಲ್ಲಿ ಬರುವಂತಹ ಸಾರ್ವಜನಿಕರ ದೂರುಗಳನ್ನು ತಕ್ಷಣ ಇತ್ಯರ್ಥ ಪಡಿಸುವಂತೆ ಅವರು ಸೂಚನೆ ನೀಡಿದರು.

ರೈತರಿಗೆ ಸರ್ಕಾರದ ಸೌಲಭ್ಯಗಳು ಸಕಾಲಕ್ಕೆ ದೊರೆಯಲು ಮತ್ತು ತಮ್ಮ ವ್ಯವಸಾಯದಲ್ಲಿ ಆಗುವಂತಹ ನಷ್ಟ ತಪ್ಪಿಸಲು ಮಣ್ಣು ತಪಾಸಣೆ, ಸಸಿ, ಬೆಳೆ ಸಂರಕ್ಷಣೆ, ರಸ ಗೊಬ್ಬರಗಳ ಸಮರ್ಪಕ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಗ್ರಾಮವಾರು ಈವರೆಗೆ ರೈತರಿಗೆ ಮಣ್ಣು ತಪಾಸಣೆ ಸೌಲಭ್ಯ ಕಲ್ಪಿಸಿದ ಬಗ್ಗೆ, ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳ ಸಂರಕ್ಷಣೆಗೆ ಕೈಗೊಂಡ ಕ್ರಮಗಳು, ವಿವಿಧ ಬೆಳೆಗಳಿಗೆ ರೋಗ ನಿಯಂತ್ರಣ ಹತೋಟಿ ಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದರು.

ಜಿಲ್ಲೆಯಲ್ಲಿ ಬೃಹತ್ ಮತ್ತು ಸಣ್ಣ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, ವಿವಿಧ ಕಾಲುವೆಗಳ ಮೂಲಕ ನೀರು ಹರಿದು ಕೆರೆಗಳು ಭರ್ತಿಯಾಗಿ ನೀರು ಪೋಲಾಗಿ ಹೋಗುವುದನ್ನು ತಡೆಗಟ್ಟಲು ಈವರೆಗೆ ನಿರ್ಮಿಸಿದ ಬ್ಯಾರೇಜ್, ಚೆಕ್‍ಡ್ಯಾಮ್ ನಿರ್ಮಾಣದ ವಿವರ, ನೀರು ಪೋಲಾಗದಂತೆ ನಿರ್ವಹಣಾ ವಿಧಾನಗಳ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ತಿಳಿಸಿದರು.

ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಕಾಲುವೆ ನಿರ್ಮಾಣ ಮತ್ತು ಇತರೆ ಕಾಮಗಾರಿಗಳಿಗೆ ಸ್ವಾಧೀನ ಪಡಿಸಿಕೊಳ್ಳಲಾಗುವ ಭೂಮಿಗೆ ಸಂಬಂಧಪಟ್ಟಂತೆ ನಿಗದಿತ ಪರಿಹಾರ ದೊರಕಿಸಿ, ಯೋಜನೆ ಜಾರಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಸೇವೆಯಲ್ಲಿರುವ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಜನರ ತೊಂದರೆಗಳಿಗೆ ತಕ್ಷಣ ಸ್ಪಂದಿಸಬೇಕು. ಹೆಚ್ಚಿನ ದೂರುಗಳಿಗೆ ಅವಕಾಶ ನೀಡದೆ ನ್ಯಾಯಸಮ್ಮತ, ಪಾರದರ್ಶಕ ರೀತಿಯಲ್ಲಿ ಸೇವೆ ಕಲ್ಪಿಸಬೇಕು. ಗಂಭೀರ ರೀತಿಯ ದೂರುಗಳು ಬಂದಲ್ಲಿ ಕಾನೂನಿನ ರೀತ್ಯ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.‌‌

ವಿವಿಧ ಗ್ರಾಮಗಳಲ್ಲಿ ಬಹಿರ್ದೆಸೆಯಿಂದ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ವಿಜಯಪುರ ನಗರದ ಸ್ವಚ್ಛತೆ ಬಗ್ಗೆ ವಿಶೇಷ ಕ್ರಮಕೈಗೊಳ್ಳಬೇಕು. ಮಧ್ಯಪ್ರದೇಶದ ಇಂದೋರ್ ಮತ್ತು ಮೈಸೂರು ಮಾದರಿಯಲ್ಲಿ ಸಮಗ್ರ ಸ್ವಚ್ಛತೆಗೆ ವಿಶೇಷ ಯೋಜನೆ ರೂಪಿಸಿ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.‌

ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದ, ಭ್ರಷ್ಟಾಚಾರದಲ್ಲಿ ತೊಡಗಿರುವಂತಹ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸೂಕ್ತ ಕ್ರಮಕೈಗೊಳ್ಳುವದಾಗಿ ಅವರು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಲೋಕಾಯುಕ್ತ ಎಸ್‌ಪಿ ಯಶೋಧಾ ಒಂಟಗೋಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ದಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.