ವಿಜಯಪುರ: ಶೌಚಾಲಯ ನಿರ್ಮಿಸಿಕೊಂಡ ಪ್ರತಿ ಕುಟುಂಬ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹಾಂತಮ್ಮ ಬಿರಾದಾರ ಹೇಳಿದರು.
ತಾಲ್ಲೂಕಿನ ಜಂಬಗಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ವತಿಯಿಂದ ಶೌಚಾಲಯ ನಿರ್ಮಾಣ ಮತ್ತು ಬಳಕೆ ಕುರಿತು ಏರ್ಪಡಿಸಿದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ಸೌಲಭ್ಯ ಪಡೆದುಕೊಂಡು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಗಳು ಕೇವಲ ಶೌಚಾಲಯಗಳನ್ನು ನಿರ್ಮಿಸಿಕೊಂಡರೆ ಸಾಲದು ಕಡ್ಡಾಯವಾಗಿ ಬಳಸಬೇಕು. ಅಂದರೆ ಮಾತ್ರ ಸರ್ಕಾರದ ಯೋಜನೆಗೆ ಮಹತ್ವ ಬರಲು ಸಾಧ್ಯ. ಬಳಸದಿದ್ದರೆ ಸರ್ಕಾರದ ಅನುದಾನ ವ್ಯರ್ಥವಾಗುವ ಜತೆಗೆ ಪರಿಸರ ಹಾನಿಗೆ ಕಾರಣವಾಗುತ್ತದೆ ಎಂದರು.
ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಬಂಡೆಪ್ಪ ತೇಲಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಸಂಗಮೇಶ ಗುದಳೆ, ಮುಖ್ಯೋಪಾಧ್ಯಾಯ ಎಂ.ಕೆ.ಆಕಳವಾಡಿ, ಮಲ್ಲಪ್ಪ ವಾಲಿಕಾರ ಸೇರಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು. ಪ್ರಕಾಶ ಹಚಡದ ಸ್ವಾಗತಿಸಿದರು. ಗುರು ಅರಕೇರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.