ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ನಡುರಸ್ತೆಯಲ್ಲಿ ಮಂಗಳಮುಖಿಯೊಬ್ಬರನ್ನು ಆರೇಳು ಮಂಗಳಮುಖಿಯರು ಸಾರ್ವಜನಿಕರ ಎದುರೇ ಬೆತ್ತಲೆಗೊಳಿಸಿ, ಅಮಾನವೀಯವಾಗಿ ಥಳಿಸಿರುವ ಘಟನೆ ನಡೆದಿದೆ.
ಮಂಗಳಮುಖಿಯನ್ನು ರಸ್ತೆ ಮೇಲೆ ಕೆಡವಿ ಆಕೆಯ ಸುತ್ತಲೂ ಏಳೆಂಟು ಜನ ಮಂಗಳಮುಖಿಯರು ಸುತ್ತುವರಿದು, ಮನಬಂದಂತೆ ಥಳಿಸುತ್ತಿರುವ, ಬಟ್ಟೆಯನ್ನು ಹರಿದು ಬೆತ್ತಲೆಗೊಳಿಸುತ್ತಿರುವ, ಕಾಲಿನಿಂದ ಒದೆಯುತ್ತಿರುವ, ಕಾರದಪುಡಿಯನ್ನು ಮರ್ಮಾಂಗಕ್ಕೆ ಎರಚುವ, ಸೀರೆಯನ್ನು ಎತ್ತಿ ಪ್ರದರ್ಶಿಸುವ, ಚಪ್ಪಾಳೆ ತಟ್ಟುತ್ತಾ ಆಕೆಯನ್ನು ಸುತ್ತುವ, ಅಸಭ್ಯ ಪದಗಳಿಂದ ನಿಂದಿಸುತ್ತಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ.
ಮಂಗಳಮುಖಿ ಎಷ್ಟೇ ಕಾಡಿಬೇಡಿದರೂ ಬಿಡದೇ ಮಂಗಳಮುಖಿಯರ ತಂಡವು ರೊಚ್ಚಿಗೆದ್ದು ಹಲ್ಲೆ ನಡೆಸುತ್ತಿದ್ದರೂ ಸ್ಥಳದಲ್ಲಿದ್ದ ಯಾರೂ ಬಿಡಿಸದೇ ಮೂಖಪ್ರೇಕ್ಷಕರಾಗಿ ವೀಕ್ಷಿಸುತ್ತಿರುವ ದೃಶ್ಯಾವಳಿ ವಿಡಿಯೊದಲ್ಲಿ ಇದೆ.
ಮಂಗಳಮುಖಿಯರ ನಡುವೆ ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
‘ಶೀಘ್ರ ಕ್ರಮ’
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ‘ವಿಜಯಪುರ ನಗರದಲ್ಲಿ ಆರೇಳು ಮಂಗಳಮುಖಿಯರು ಕೂಡಿಕೊಂಡು ಮಂಗಳಮುಖಿಯೊಬ್ಬರನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ತಂಡವೊಂದನ್ನು ರಚಿಸಲಾಗಿದ್ದು, ಸಂತ್ರಸ್ತ ಮಂಗಳಮುಖಿ ಸೇರಿದಂತೆ ಹಲ್ಲೆ ನಡೆಸಿದವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.