ಸಿಂದಗಿ: ರಾಜ್ಯದಲ್ಲಿ ಸಾರಿಗೆ ನಿಗಮದಲ್ಲಿ 2016ರಿಂದ ಯಾವುದೇ ನೇಮಕಾತಿ ಮಾಡಿಕೊಂಡಿರಲಿಲ್ಲ. ನಾನು ಸಾರಿಗೆ ಸಚಿವನಾದ ನಂತರ ಇದುವರೆಗೆ 10 ಸಾವಿರ ಉದ್ಯೋಗಗಳನ್ನು ಒದಗಿಸಿಕೊಡಲಾಗಿದೆ. ಸಾರಿಗೆ ನಿಗಮದಲ್ಲಿ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವುದನ್ನು ಕೂಡ ಸ್ಥಗಿತಗೊಳಿಸಲಾಗಿತ್ತು. ಅದನ್ನು ಪುನ: ಪ್ರಾರಂಭಿಸುವ ಮೂಲಕ ಈಗಾಗಲೇ ಒಂದು ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಇಲ್ಲಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ‘ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಬಸ್ ನಿಲ್ದಾಣ’ ನಾಮಕರಣ ಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು.
ರಾಜ್ಯದಾದ್ಯಂತ ಸಮಾಜಸೇವೆ ಮಾಡಿದ ಮಹಾಪುರುಷರ ಹೆಸರುಗಳನ್ನು ಸಾರಿಗೆ ನಿಗಮದ ಬಸ್ ನಿಲ್ದಾಣಗಳಿಗೆ ಹೆಸರು ಇಡುವ ಕಾರ್ಯ ಪ್ರಾರಂಭಿಸಲಾಗಿದೆ. ದೇವರಹಿಪ್ಪರಗಿ ಬಸ್ ನಿಲ್ದಾಣಕ್ಕೆ ಶಿವಶರಣ ಮಡಿವಾಳ ಮಾಚಿದೇವರ ಹೆಸರು, ಸುರಪುರ ಬಸ್ ನಿಲ್ದಾಣಕ್ಕೆ ರಾಜಾ ವೆಂಕಟಪ್ಪ ನಾಯಕ, ಅದರಂತೆ ವಿಜಯಪುರ ನಗರ ಕೇಂದ್ರ ಬಸ್ ನಿಲ್ದಾಣಕ್ಕೆ ಸಚಿವ ಎಂ.ಬಿ.ಪಾಟೀಲರ ಸೂಚನೆಯಂತೆ ಕಿತ್ತೂರ ರಾಣಿ ಚೆನ್ನಮ್ಮ ಬಸ್ ನಿಲ್ದಾಣ ಎಂದು ಹೆಸರಿಡುವ ಕುರಿತು ಬೋರ್ಡ್ ಮೀಟಿಂಗ್‌ನಲ್ಲಿ ಒಪ್ಪಿಗೆ ದೊರಕಿದೆ. ಇನ್ನೇನು ಗೆಜೆಟ್ ಆದ ತಕ್ಷಣವೇ ವಿದ್ಯುಕ್ತವಾಗಿ ನಾಮಕರಣ ಮಾಡಲಾಗುವುದು ಎಂದು ವಿವರಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 4 ವರ್ಷಗಳಿಂದ ಯಾವೊಂದು ಹೊಸ ಬಸ್ ನೀಡಿರಲಿಲ್ಲ. ಈಗ ಜಿಲ್ಲೆಗೆ ನೂರರಂತೆ ಏಳು ಜಿಲ್ಲೆಗಳಿಗೆ 700 ಹೊಸ ಬಸ್ ಗಳನ್ನು ನೀಡಲಾಗಿದೆ ತಿಳಿಸಿದರು.
ಶಾಸಕ ಅಶೋಕ ಮನಗೂಳಿಯವರು ಪಟ್ಟಣಕ್ಕೆ ಸಿಟಿ ಬಸ್ ಬೇಡಿಕೆಯನ್ನಿಟ್ಟಿದ್ದಾರೆ. ಮುಂದಿನ ವಾರದಿಂದಲೇ ಸಿಂದಗಿಯಲ್ಲಿ ಸಿಟಿ ಬಸ್ ಸಂಚಾರ ಪ್ರಾರಂಭವಾಗುವಂತೆ ಕ್ರಮ ಜರುಗಿಸಬೇಕು ಎಂದು ಸ್ಥಳದಲ್ಲಿಯೇ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಸಾರಿಗೆ ಘಟಕದ ಬಳಿ ₹ 2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ 14 ವಸತಿ ಗೃಹಗಳನ್ನು ಸಚಿವರು ಸಿಬ್ಬಂದಿಗೆ ಹಸ್ತಾಂತರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ ಮನಗೂಳಿ ಮಾತನಾಡಿ, 1952ರಲ್ಲಿ ಇಲ್ಲಿಯ ಸಾರಂಗಮಠದ ಪೀಠಾಧ್ಯಕ್ಷರಾಗಿದ್ದ ಚೆನ್ನವೀರ ಸ್ವಾಮೀಜಿ ಬಸ್ ನಿಲ್ದಾಣಕ್ಕಾಗಿ ಎರಡು ಎಕರೆ ಜಮೀನು ನೀಡಿದ್ದರು. ಬಸ್ ನಿಲ್ದಾಣಕ್ಕೆ ಅವರ ಹೆಸರು ಇಡುವ ಬಗ್ಗೆ ಬಹು ವರ್ಷಗಳ ಬೇಡಿಕೆ ಇತ್ತು. ಹೆಚ್ಚಿನ ಮುತವರ್ಜಿ ವಹಿಸಿ ಸ್ವಾಮೀಜಿ ಹೆಸರು ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಲು ಸಹಕರಿಸಿದ ಸಚಿವರ ಕಾರ್ಯವೈಖರಿ, ಅವರ ವ್ಯಕ್ತಿತ್ವ ಕುರಿತು ಗುಣಗಾನ ಮಾಡಿದರು.
2018-19ರಲ್ಲಿ ನನ್ನ ತಂದೆಯವರು ಸಚಿವರಾಗಿದ್ದ ಸಂದರ್ಭದಲ್ಲಿ ಇಲ್ಲಿಯ ಸಾರಿಗೆ ನಿಗಮದ ಸಿಬ್ಬಂದಿ ವಸತಿಗೃಹಗಳಿಗೆ ಅಡಿಗಲ್ಲು ಹಾಕಿದ್ದರು. ಈಗ ನಾನು ಶಾಸಕನಾಗಿ ಅದರ ಉದ್ಘಾಟನೆಯಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯ ವಿಶೇಷ ಎಂದರು.
ಇಲ್ಲಿಯ ಬಸ್ ನಿಲ್ದಾಣದ ಉನ್ನತೀಕರಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು. ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿ ದೇವಸ್ಥಾನಗಳ ಜೀರ್ಣೊದ್ಧಾರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿಕೊಂಡರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಇಂದಿನ ದಿನ ಸಿಂದಗಿ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆದಿಡುವ ದಿನ ಎಂದು ಸಂತಸ ವ್ಯಕ್ತಪಡಿಸಿದರು. ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾರಂಗಮಠ-ಗಚ್ಚಿನಮಠದ ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಉಪಸ್ಥಿತರಿದ್ದರು.
ನುಡಿದಂತೆ ನಡೆದ ಸಚಿವ 2013ರಲ್ಲಿ ಸಿಂದಗಿ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಉದ್ಘಾಟನೆಗಾಗಿ ಬಂದಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಪಟ್ಟಣದ ಸಾರ್ವಜನಿಕರು ಮಠದ ಸದ್ಭಕ್ತರು ಬಸ್ ನಿಲ್ದಾಣಕ್ಕೆ ಎರಡು ಎಕರೆ ಜಮೀನು ನೀಡಿದ ಚೆನ್ನವೀರಸ್ವಾಮೀಜಿ ಹೆಸರು ಇಡಬೇಕು ಎಂದು ಒತ್ತಾಯಿಸಿದ್ದರು. ಸಚಿವರು ಹೆಸರು ಇಡುವ ಬಗ್ಗೆ ಭರವಸೆ ನೀಡಿದ್ದರು. ಈಗ ಅವರೇ ಮತ್ತೆ ಸಾರಿಗೆ ಸಚಿವರಾಗಿ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡು ನುಡಿದಂತೆ ನಡೆದ ಸಚಿವರಾಗಿದ್ದಾರೆ ಎಂದು ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.