ADVERTISEMENT

ಸಾರಿಗೆ ನೌಕರರ ಮುಷ್ಕರ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಕೆಲಸಕ್ಕೆ ಹಾಜರಾಗದ ಸಾರಿಗೆ ನೌಕರರಿಗೆ ವಸತಿ ಗೃಹ ಖಾಲಿ ಮಾಡಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 15:49 IST
Last Updated 7 ಏಪ್ರಿಲ್ 2021, 15:49 IST
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ಭಣಗುಡುತ್ತಿದ್ದ ವಿಜಯಪುರ ಕೇಂದ್ರ ಬಸ್‌ ನಿಲ್ದಾಣ –ಪ್ರಜಾವಾಣಿ ಚಿತ್ರ
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ಭಣಗುಡುತ್ತಿದ್ದ ವಿಜಯಪುರ ಕೇಂದ್ರ ಬಸ್‌ ನಿಲ್ದಾಣ –ಪ್ರಜಾವಾಣಿ ಚಿತ್ರ   

ವಿಜಯಪುರ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಆರಂಭಿಸಿರುವುದರಿಂದ ಬುಧವಾರ ಜಿಲ್ಲೆಯಾದ್ಯಂತ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

ದೂರದ ನಗರ, ಹಳ್ಳಿಗಳಿಗೆ ತೆರಳಲು ಬಸ್‌ಗಳಿಲ್ಲದೇ ಪ್ರಯಾಣಿಕರು ಪರದಾಡಿದರು. ನಿನ್ನೆ ರಾತ್ರಿಯಿ‌ಂದಲೇ ಬಸ್‌ಗಳ ಸಂಚಾರ ವಿರಳವಾಗಿರುವುದರಿಂದ ಅನೇಕ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದಾರೆ.

ಬೆಂಗಳೂರು, ಮಂಗಳೂರು, ಉಡುಪಿ, ಗೋವಾ, ಮುಂಬೈ, ಶ್ರೀಶೈಲ, ಸೊಲ್ಲಾಪುರ ಸೇರಿದಂತೆ ವಿವಿಧೆಡೆಗಳಿಂದ ಮಂಗಳವಾರ (ನಿನ್ನೆ) ಹೊರಟಿದ್ದ ಲಾಂಗ್ ರೂಟ್ ಬಸ್ಸುಗಳು ಬುಧವಾರ ಮಧ್ಯಾಹ್ನದ ವರೆಗೂ ಒಂದೊಂದಾಗಿ ನಗರಕ್ಕೆ ಮರಳಿದವು. ನಗರ ಸಾರಿಗೆ ಬಸ್‌ಗಳು ಸೇರಿದಂತೆ ಉಳಿದ ಎಲ್ಲ ಮಾರ್ಗಗಳ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

ADVERTISEMENT

ಆಟೊ, ಟಂಟಂ ಮತ್ತು ಖಾಸಗಿ ಮಿನಿ ಬಸ್‌ಗಳು ಹೆಚ್ಚಿನ ದರವನ್ನು ಪ್ರಯಾಣಿಕರಿಂದ ವಸೂಲಿ ಮಾಡಿದರು. ಊರುಗಳಿಗೆ ತೆರಳಲೇ ಬೇಕಾದವರು ಹೆಚ್ಚಿನ ಹಣ ತೆತ್ತು ಖಾಸಗಿ ವಾಹನಗಳಲ್ಲಿ ಸಂಚರಿಸಿದರು.

ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿ ಕಂಡುಬಂದಿತು. ಬಸ್, ಪ್ರಯಾಣಿಕರು ಇಲ್ಲದೆ ಬಸ್ ನಿಲ್ದಾಣಗಳು ಬಣಗುಡುತ್ತಿದ್ದವು.

ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ಜಿಲ್ಲಾ ವಿಭಾಗೀಯ ಸಂಚಾಲಕ ನಾರಾಯಣಪ್ಪ ಕುರುಬರ ಅವರು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ತೊಂದರೆಗೆ ಒಳಗಾದ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದರು. ಮುಷ್ಕರ ನಿರತ ಸಾರಿಗೆ ಸಂಸ್ಥೆ ನೌಕರರೊಂದಿಗೆ ಮಾತುಕತೆ ನಡೆಸಿದರು. ಸಾರಿಗೆ ನೌಕರರ ಮುಷ್ಕರ ಶಾಂತಿಯುತವಾಗಿ ನಡೆಯುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

***

ವಸತಿ ಗೃಹ ಖಾಲಿ ಮಾಡಿಸುವ ಎಚ್ಚರಿಕೆ

ವಿಜಯಪುರ: ಕರ್ತವ್ಯಕ್ಕೆ ತಕ್ಷಣ ಹಾಜರಾಗದಿದ್ದರೆ ಈಗಾಗಲೇ ಹಂಚಿಕೆ ಮಾಡಲಾಗಿರುವ ವಸತಿ ಗೃಹವನ್ನು(ಕ್ವಾಟ್ರಸ್‌) ಹಿಂಪಡೆಯಲಾಗುವುದು ಎಂಬ ನೋಟಿಸ್‌ ಅನ್ನು ಮುಷ್ಕರ ನಿರತ ಸಾರಿಗೆ ನೌಕರರ ವಸತಿ ಗೃಹಗಳ ಬಾಗಿಲಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಅಧಿಕಾರಿಗಳು ಅಂಟಿಸುವ ಮೂಲಕ ಮುಷ್ಕರ ಕೈಬಿಡುವಂತೆ ಒತ್ತಡ ಹೇರಿದ್ದಾರೆ. ಅದರೆ, ನೌಕರರ ಕುಟುಂಬದವರು ಅಧಿಕಾರಿಗಳ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಜೊತೆಗೆ ಕರ್ತವ್ಯಕ್ಕೆ ಹಾಜರಾದ ಬೆರಳೆಣಿಕೆ ಸಿಬ್ಬಂದಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸುವ ಮೂಲಕ ಉಳಿದವರು ಮುಷ್ಕರ ಕೈಬಿಡುವಂತೆ ಮನವೊಲಿಸುವ ಯತ್ನವನ್ನು ಅಧಿಕಾರಿಗಳು ಮಾಡಿದರೂ ಪ್ರಯೋಜನವಾಗಿಲ್ಲ.

***

ಮುಷ್ಕರ: ಪರೀಕ್ಷಾರ್ಥಿಗಳಿಗೆ ತೊಂದರೆ

ವಿಜಯಪುರ: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಅನೇಕ ವಿಶ್ವವಿದ್ಯಾನಿಲಯಗಳು ಪರೀಕ್ಷೆಗಳನ್ನು ಮುಂದೂಡಿವೆ. ಆದರೆ, ವಿಟಿಯು ಸೇರಿದಂತೆ ಕೆಲವು ವಿಶ್ವವಿದ್ಯಾನಿಲಯಗಳು ಪರೀಕ್ಷೆಗಳನ್ನು ನಡೆಸುತ್ತಿರುವುದಕ್ಕೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ವಿರೋಧ ವ್ಯಕ್ತಪಡಿಸಿದೆ.

ರಾಜ್ಯದಾದ್ಯಂತ ಪದವಿ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿದೆ. ಈ ಮುಷ್ಕರದ ಮಾಹಿತಿಯು ಮುಂಚಿತವಾಗಿಯೇ ತಿಳಿದಿದ್ದರೂ ಸಹ ಸರ್ಕಾರವು ಏನೂ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸಿರುವುದರಿಂದ ಪರೀಕ್ಷಾ ಸ್ಥಳಕ್ಕೆ ತೆರಳಲು ಬಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಸರ್ಕಾರ ಹಾಗೂ ವಿಶ್ವವಿದ್ಯಾನಿಲಯಗಳು ತುರ್ತಾಗಿ ಚರ್ಚಿಸಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯಜಿಲ್ಲಾ ಉಪಾಧ್ಯಕ್ಷೆ ಕಾವೇರಿ ರಜಪೂತ,ಜಿಲ್ಲಾ ಕಾರ್ಯದರ್ಶಿ ಸುರೇಖಾ ಕಡಪಟ್ಟಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.