ADVERTISEMENT

ಎಲ್ಲ ಕಾಯಿಲೆಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ: ಪಿ.ಸುನೀಲ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 13:42 IST
Last Updated 31 ಮಾರ್ಚ್ 2022, 13:42 IST
ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಹೀಮೋಫಿಲಿಯಾ ಹಾಗೂ ತಲಸೇಮಿಯಾ ರಕ್ತಸಂಬಂಧಿ ಕಾಯಿಲೆಗಳ ರೋಗಿಗಳಿಗೆ ಹಮ್ಮಿಕೊಂಡ ರೋಗ ಪತ್ತೆ ಚಿಕಿತ್ಸೆ, ಅಂಗವಿಕಲ ಪ್ರಮಾಣ ಪತ್ರ ವಿತರಣಾ ಶಿಬಿರವನ್ನು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಉದ್ಘಾಟಿಸಿದರು
ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಹೀಮೋಫಿಲಿಯಾ ಹಾಗೂ ತಲಸೇಮಿಯಾ ರಕ್ತಸಂಬಂಧಿ ಕಾಯಿಲೆಗಳ ರೋಗಿಗಳಿಗೆ ಹಮ್ಮಿಕೊಂಡ ರೋಗ ಪತ್ತೆ ಚಿಕಿತ್ಸೆ, ಅಂಗವಿಕಲ ಪ್ರಮಾಣ ಪತ್ರ ವಿತರಣಾ ಶಿಬಿರವನ್ನು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಉದ್ಘಾಟಿಸಿದರು   

ವಿಜಯಪುರ: ಜಿಲ್ಲೆಯಲ್ಲಿ ಜನಸಾಮಾನ್ಯರು ಯಾವುದೇ ಕಾಯಿಲೆಗಳಿಗೆ ಭಯಪಡುವ ಅಗತ್ಯವಿಲ್ಲ, ಚಿಕಿತ್ಸೆಗೆ ಪೂರಕವಾದ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಆಶ್ರಯದಲ್ಲಿ ಹೀಮೋಫಿಲಿಯಾ ಹಾಗೂ ತಲಸೇಮಿಯಾ ರಕ್ತಸಂಬಂಧಿ ಕಾಯಿಲೆಗಳ ರೋಗಿಗಳಿಗೆ ಹಮ್ಮಿಕೊಂಡ ರೋಗ ಪತ್ತೆ ಚಿಕಿತ್ಸೆ, ಅಂಗವಿಕಲ ಪ್ರಮಾಣ ಪತ್ರ ವಿತರಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿಯೊಬ್ಬ ರೋಗಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದು, ಜಿಲ್ಲಾ ಶಸ್ತ್ರಚಿಕಿತ್ಸಕರು ವೈದ್ಯರು ಮತ್ತು ಎಲ್ಲ ಸಿಬ್ಬಂದಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಚಿಕಿತ್ಸೆಗೆ ಕೊರತೆ ಕಂಡು ಬಂದರೆ ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ಅಥವಾ ನನಗೆ ಮಾಹಿತಿ ನೀಡಿದರೆ ತುರ್ತಾಗಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳುವುದರಿಂದ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲು ಅನೂಕುಲವಾಗುತ್ತದೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ, ಹಿಮೋಫಿಲಿಯ ಮತ್ತು ತಲಸೇಮಿಯಾ ರೋಗಿಗಳು ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ರೋಗವನ್ನು ನಿಯಂತ್ರಣ ಮಾಡಬಹುದಾಗಿದೆ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎಲ್.ಲಕ್ಕಣ್ಣವರ ಮಾತನಾಡಿ, ಆಸ್ಪತ್ರೆಯಲ್ಲಿ ಪ್ರತಿಯೊಬ್ಬರಿಗೂ ಸೂಕ್ತ ಚಿಕಿತ್ಸೆ ದೊರಕುವಂತೆ ನೊಡಿಕೊಳ್ಳಲಾಗುವುದು, ಪ್ರತಿ ಕಾಯಿಲೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಶಿಬಿರಗಳನ್ನು ಹಮ್ಮಿಕೊಂಡು ಸಂಬಂಧಿಸಿದ ತಜ್ಞ ವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ, ರೋಗ ಪತ್ತೆ ಮಾಡಲಾಗುವುದು ಎಂದು ಹೇಳಿದರು.

ದಾವಣಗೆರೆ ಜೆ.ಜೆ. ಎಂ. ವೈದ್ಯಕೀಯ ಮಹಾವಿದ್ಯಾಲಯ ಪ್ರಾದ್ಯಾಪಕ ಡಾ.ಅನಗವಾಡಿ ಸುರೇಶ, ಶಿಬಿರದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಆಶು ನದಾಫ, ವೈದ್ಯಾಧಿಕಾರಿ ಡಾ.ಎ.ಜಿ.ಬಿರಾದಾರ, ಡಾ.ಸುಮಾ ಮಮದಾಪುರ, ಡಾ. ಮೀರಾ ಅನಗವಾಡಿ, ಡಾ.ಸ.ವಿ. ಹವಿನಾಳ, ಡಾ.ಶೈಲಶ್ರೀ, ಡಾ.ಶ್ವೇತಾರಾಣಿ, ಡಾ.ಮಹೇಶ ಮೋರೆ, ಶಿವಕುಮಾರ ಮೇತ್ರಿ, ಆಸ್ಪತ್ರೆಯ ಹಿರಿಯ ಆಪ್ತಸಮಾಲೋಚಕ ರವಿ ಕಿತ್ತೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.