ADVERTISEMENT

ಮುದ್ದೇಬಿಹಾಳ | ತೊಗರಿ ಬೆಳೆಗೆ ಗೊಡ್ಡು ರೋಗದ ಬಾಧೆ: ಅನ್ನದಾತರಲ್ಲಿ ಆತಂಕ

ಬೆಳೆ ನಿರ್ವಹಣೆಗೆ ಕೃಷಿ ಇಲಾಖೆ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:58 IST
Last Updated 8 ಆಗಸ್ಟ್ 2025, 5:58 IST
ಮುದ್ದೇಬಿಹಾಳ ತಾಲ್ಲೂಕಿನ ಸರೂರು ಭಾಗದ ಹೊಲಗಳಿಗೆ ಭೇಟಿ ನೀಡಿದ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಸೋಮನಗೌಡ ಬಿರಾದಾರ ಅವರು ಕೀಟಬಾಧೆಗೆ ಒಳಗಾಗದ ಬೆಳೆಯನ್ನು ಪರಿಶೀಲಿಸಿದರು
ಮುದ್ದೇಬಿಹಾಳ ತಾಲ್ಲೂಕಿನ ಸರೂರು ಭಾಗದ ಹೊಲಗಳಿಗೆ ಭೇಟಿ ನೀಡಿದ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಸೋಮನಗೌಡ ಬಿರಾದಾರ ಅವರು ಕೀಟಬಾಧೆಗೆ ಒಳಗಾಗದ ಬೆಳೆಯನ್ನು ಪರಿಶೀಲಿಸಿದರು   

ಮುದ್ದೇಬಿಹಾಳ: ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಒಳ್ಳೆಯ ರೀತಿಯಲ್ಲಿ ಆಗಿದೆ ಎಂದು ಖುಷಿಯಿಂದ ಬಿತ್ತನೆ ಮಾಡಿದ್ದ ತೊಗರಿ ಬೆಳೆಗೆ ಗೊಡ್ಡು ರೋಗದ ಬಾಧೆ ಕಂಡು ಬಂದಿದ್ದು, ಅನ್ನದಾತರನ್ನು ಆತಂಕಕ್ಕೆ ದೂಡಿದೆ.

ತಾಲ್ಲೂಕಿನ ಸರೂರು ಗ್ರಾಮದ ಈರಯ್ಯ ಹಿರೇಮಠ, ಸಂತೋಷ ನಾಯ್ಕೋಡಿ, ಶಂಕ್ರಪ್ಪ ನಾಯ್ಕೋಡಿ, ಯಮನಪ್ಪ ನಾಯ್ಕೋಡಿ, ಸಿದ್ದಪ್ಪ ಬಪ್ಪರಗಿ, ಯಲ್ಲಪ್ಪ ಬಪ್ಪರಗಿ ಅವರ ಜಮೀನುಗಳಲ್ಲಿ ಗೊಡ್ಡು ರೋಗ ಕಾಣಿಸಿಕೊಂಡಿರುವುದು ಕೃಷಿ ಇಲಾಖೆ ಅಧಿಕಾರಿಗಳ ಭೇಟಿ ಸಮಯದಲ್ಲಿ ಪತ್ತೆಯಾಗಿದೆ.

ಇಲಾಖೆಯ ಅಧಿಕಾರಿಗಳ ಮಾಹಿತಿಯಂತೆ ತೊಗರಿ ಬೆಳೆಯಲ್ಲಿ ಗೊಡ್ಡು ರೋಗ ಬರಲು ಪಿ.ಪಿ.ಎಸ್.ಎಂ ಕಾರಣವಾಗಿದ್ದು, ಏರಿಯೋಫಿಡ್ ಎಂಬ ಮೈಟ್ ನುಸಿ ಹರಡಿಸುತ್ತದೆ.

ADVERTISEMENT

ಗೊಡ್ಡು ರೋಗದ ಲಕ್ಷಣಗಳು: 

ತೊಗರಿ ಬೆಳೆಗೆ ರೋಗ ಬಂದ ನಂತರ ಗಿಡಗಳು ಸಣ್ಣ ಗಾತ್ರದ ಮೇಲ್ಬಾಗದಲ್ಲಿ ತಿಳಿ ಮತ್ತು ದಟ್ಟ ಹಳದಿ ಬಣ್ಣದ ಮೋಸಾಯಿಕ್ ತರಹದ ಮಚ್ಚೆಗಳನ್ನು ಹೊಂದಿ ಮುರುಟಿಕೊಂಡಿರುವ, ಹೆಚ್ಚಿನ ಸಂಖ್ಯೆಯ ಎಲೆಗಳನ್ನು ಹೊಂದಿ ಹೂ ಕಾಯಿಗಳಿಲ್ಲದೇ ಗೊಡ್ಡಾಗಿ ಉಳಿಯುತ್ತವೆ.

ಬೆಳೆಯ ಎಳೆಯ ವಯಸ್ಸಿನಲ್ಲಿ ಈ ರೋಗ ಬಂದರೆ ಕಾಂಡವು ಉದ್ದವಾಗಿ ಬೆಳೆಯದೆ ಸಣ್ಣ ಟೊಂಗೆಗಳು ಹಾಗೂ ತಿಳಿ ಹಳದಿ ಬಣ್ಣದ ಚಿಕ್ಕ ಗಾತ್ರದ ಮುರುಟಿಕೊಂಡಿರುವ ಎಲೆಗಳ ಗುಂಪಿನಿಂದ ಕೂಡಿ ಪೊದೆಯಂತಾಗಿ ಇಡೀ ಗಿಡವೇ ಕಾಯಿ ಹೂ ಬಿಡದೇ ಗೊಡ್ಡು ಆಗುವುದು. ಈ ರೋಗ ಬೆಳೆಗೆ ಆವರಿಸಿದರೆ ಶೇ 30ರಷ್ಟು ಇಳುವರಿಗೆ ಹಾನಿ ಮಾಡುತ್ತದೆ ಎಂಬುದು ಕೃಷಿ ಇಲಾಖೆಯ ಅಧಿಕಾರಿಗಳ ಹೇಳಿಕೆ.

ನಿರ್ವಹಣೆ ಹೇಗೆ?: ತೊಗರಿಗೆ ಗೊಡ್ಡು ರೋಗ ಬಂದ ಗಿಡಗಳನ್ನು ಕಿತ್ತು ನಾಶ ಮಾಡಬೇಕು. ರೋಗಾಣುವಿನ ಆಸರೆ ಸಸ್ಯಗಳಾದ ಬಹುವಾರ್ಷಿಕ ತೊಗರಿ ಮತ್ತು ಕೂಳೆ ತೊಗರಿ ಬೆಳೆಯನ್ನು ಕಿತ್ತು ನಾಶ ಮಾಡಬೇಕು. ನುಸಿ ನಾಶಕಗಳಾದ ಆಕ್ಸಿಡೆಮಟಾನ್ ಮಿಥೈಲ್ 1.5 ಮಿ. ಲೀ. ಅಥವಾ ಸ್ಪೇರೋಮಿಸಿಫನ್ ಅಥವಾ ಫೇನಜಾಕ್ವೀನ್ 1 ಮಿ. ಲೀ . ಪ್ರತಿ ಲೀಟರ್ ನೀರಿಗೆ ಬೆರೆಸುವುದರೊಂದಿಗೆ ನೀರಿನಲ್ಲಿ ಹಾಕಿ ಸಿಂಪಡಿಸಬೇಕು. ಅವಶ್ಯಕತೆ ಇದ್ದಲ್ಲಿ 15 ದಿನಗಳ ನಂತರ ಪುನಃ ಸಿಂಪಡಣೆ ತೆಗೆದುಕೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಸೋಮನಗೌಡ ಬಿರಾದಾರ ಮಾಹಿತಿ ನೀಡಿದ್ದಾರೆ.
 

ರೈತರು ತೊಗರಿ ಗಿಡಗಳನ್ನು ಪರಿಶೀಲನೆ ಮಾಡಬೇಕು. ಎಲ್ಲೆಲ್ಲಿ ಇಂತಹ ಗಿಡಗಳು ರೋಗಬಾಧೆಗೆ ಒಳಗಾಗಿವೆಯೋ ಅವುಗಳನ್ನು ಕಿತ್ತು ನಾಶಪಡಿಸಬೇಕು
ಎಸ್.ಡಿ.ಭಾವಿಕಟ್ಟಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ
ತೊಗರಿ ಬೆಳೆಯಲ್ಲಿ ಇತರೆ ಸಾಮಾನ್ಯ ಗಿಡಗಳಂತೆ ಬೆಳೆಯದೇ ಅಲ್ಲಲ್ಲಿ ಮುರುಟಿಕೊಂಡಿದ್ದ ಗಿಡಗಳನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವು. ಅಂತಹ ಗಿಡಗಳನ್ನು ನಾಶಪಡಿಸಿದ್ದೇವೆ
ಈರಯ್ಯ ಹಿರೇಮಠ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.