ADVERTISEMENT

ಬೆಳ್ಳಿತೆರೆ ಮೇಲೆ ವಿಜಯಪುರ ‘ಉಡಾಳ’ ಹವಾ

‘ಡ್ರೀಮ್‌ ಲ್ಯಾಂಡ್‌’ ಚಿತ್ರ ಮಂದಿರದಲ್ಲಿ ತಾರಾ ಬಳಗದಿಂದ ಭರ್ಜರಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 3:53 IST
Last Updated 16 ನವೆಂಬರ್ 2025, 3:53 IST
ವಿಜಯಪುರದಲ್ಲಿ ಶನಿವಾರ ‘ಉಡಾಳ’ ಸಿನಿಮಾ ತಂಡದವರು ಪ್ರಚಾರ ನಡೆಸಿದರು
ವಿಜಯಪುರದಲ್ಲಿ ಶನಿವಾರ ‘ಉಡಾಳ’ ಸಿನಿಮಾ ತಂಡದವರು ಪ್ರಚಾರ ನಡೆಸಿದರು   

ವಿಜಯಪುರ: ಶುಕ್ರವಾರ ತೆರೆಕಂಡಿರುವ ‘ಉಡಾಳ’ ಸಿನಿಮಾಕ್ಕೆ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಚಿತ್ರದ ಸಹ ನಿರ್ದೇಶಕ ವಿಜಯಪುರದ ಅಮೋಲ್ ಪಾಟೀಲ್ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾ ಸಂಪೂರ್ಣವಾಗಿ ಉತ್ತರ ಕರ್ನಾಟಕ ಭಾಷಾ ಸೊಗಡಿನಲ್ಲಿದೆ. ಅಲ್ಲದೇ, ಇಡೀ ಚಿತ್ರವನ್ನು ವಿಜಯಪುರದ ಐತಿಹಾಸಿಕ ಸ್ಮಾರಕಗಳ ಆವರಣದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ ಎಂದರು.

‘ಉತ್ತರ ಕರ್ನಾಟಕದ ಸೊಗಡನ್ನು ಊಟದಲ್ಲಿ ಉಪ್ಪಿನಕಾಯಿ ಇದ್ದ ಹಾಗೆ ಮಾತ್ರ ಇದುವರೆಗೆ ಕೆಲವು ಚಿತ್ರಗಳಲ್ಲಿ ಬಳಸಿಕೊಳ್ಳಲಾಗಿತ್ತು. ಆದರೆ, ನಮ್ಮ ಚಿತ್ರ ಫುಲ್ ಮೀಲ್ಸ್ ತರಹ ಉತ್ತರ ಕರ್ನಾಟಕದ್ದೇ ಸಿನಿಮಾ. ಇಡೀ ಕಥೆ ವಿಜಯಪುರದಲ್ಲೇ ನಡೆಯುತ್ತದೆ. ಉತ್ತರ ಕರ್ನಾಟಕದ ಸುಂದರತೆ ಈ ಚಿತ್ರದಲ್ಲಿದೆ’ ಎಂದು ಹೇಳಿದರು.

ADVERTISEMENT

‘ನಗಿಸುವುದು ಸುಲಭವಲ್ಲ. ಅದೇ ರೀತಿ ನಗು ಬರುವುದು ಅಷ್ಟು ಸುಲಭವಿಲ್ಲ. ಆದರೆ, ಈ ಚಿತ್ರದಲ್ಲಿ ನಮ್ಮ ತಂಡ  ನಗುವಿನ ರಸದೌತಣವನ್ನೇ ಬಡಿಸಿದೆ’ ಎಂದರು.

ವಿಜಯಪುರದ ಈ ಸಿನಿಮಾವನ್ನು ಪ್ರೇಕ್ಷಕರು ಗೆಲ್ಲಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡಲು ಪ್ರೋತ್ಸಾಹ ಸಿಗಲಿದೆ ಎಂದು ಹೇಳಿದರು.

ಸಿನಿಮಾ ವಿಜಯಪುರ, ಉತ್ತರ ಕರ್ನಾಟಕದಲ್ಲಿ ಸದ್ದು ಮಾಡುವ ಮೂಲಕ ಬೆಂಗಳೂರಿನ ಜನ ಮಾತನಾಡುವಂತಾಗಬೇಕು ಎಂದರು. 

ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲ್ಮ್‌ ಲಾಂಛನದಲ್ಲಿ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಈ ಸಿನಿಮಾ ನಿರ್ಮಿಸಿದ್ದಾರೆ. ಯೋಗರಾಜ್‌ ಭಟ್‌ ಅವರ ಜೊತೆ ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ ಎಂದು ಅಮೋಲ್ ಪಾಟೀಲ್ ಹೇಳಿದರು.

ನಾಯಕ ನಟನಾಗಿ ಪೃಥ್ವಿ ಶಾಮನೂರು, ನಾಯಕ ನಟಿಯಾಗಿ ಹೃತಿಕ ಶ್ರೀನಿವಾಸ್ ಹಾಗೂ ಬಲ ರಾಜವಾಡಿ, ಮಾಳು ನಿಪ್ನಾಳ್, ಹರೀಶ್ ಹಿರಿಯೂರು, ಬಿರಾದಾರ್, ಸುಮಿತ್ ಸಂಕೋಜಿ, ವಾದಿರಾಜ ಬಬ್ಲಾದಿ, ಪ್ರವೀಣ್ ಗಸ್ತಿ, ದಯಾನಂದ ಬೀಳಗಿ, ರೇಣುಕ, ಶ್ರೀಧರ್, ದಾನಪ್ಪ, ಶಿಲ್ಪ ಶಾಂತಕುಮಾರ್, ಸೋನಿಯಾ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.