ADVERTISEMENT

‘ಸ್ಮಾರ್ಟ್ ವಿಲೇಜ್‌’ ಆದ ಉಕ್ಕಲಿ

ವೈ–ಫೈ ಮೂಲಕವೇ ಸೋಲಾರ್ ಬೀದಿದೀಪ, ಸಿಸಿಟಿವಿ ಕ್ಯಾಮೆರಾ, ಎಫ್ಎಂ ರೇಡಿಯೊ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:39 IST
Last Updated 4 ಫೆಬ್ರುವರಿ 2026, 2:39 IST
ಉಕ್ಕಲಿಯ ‘ಅಮೃತ’ ಗ್ರಾಮ ಪಂಚಾಯಿತಿ ಕಟ್ಟಡ ಮುಂದೆ ಟ್ರ್ಯಾಕ್ಟರ್‌ಗೆ ಜೋಡಣೆಯಾದ ಜೆಸಿಬಿ ನಿಲ್ಲಿಸಲಾಗಿದೆ 
ಉಕ್ಕಲಿಯ ‘ಅಮೃತ’ ಗ್ರಾಮ ಪಂಚಾಯಿತಿ ಕಟ್ಟಡ ಮುಂದೆ ಟ್ರ್ಯಾಕ್ಟರ್‌ಗೆ ಜೋಡಣೆಯಾದ ಜೆಸಿಬಿ ನಿಲ್ಲಿಸಲಾಗಿದೆ    

ಬಸವನಬಾಗೇವಾಡಿ: ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಕೇವಲ 10 ತಿಂಗಳಲ್ಲಿ ವೈ–ಫೈ ತಂತ್ರಜ್ಞಾನ ಆಧಾರಿತ ಸೋಲಾರ್ ಬೀದಿದೀಪಗಳು, ಸಿಸಿ ಟಿ.ವಿ ಕ್ಯಾಮೆರಾ, ಎಫ್ಎಂ ರೇಡಿಯೊ ಮೊದಲಾದ ಅಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಹಲವಾರು ಜನಸ್ನೇಹಿ ಯೋಜನೆಗಳನ್ನು ಅನುಷ್ಠಾನಗೊಳಿದೆ. ಈ ಮೂಲಕ ‘ಸ್ಮಾರ್ಟ್ ವಿಲೇಜ್’ಆಗಿ ಪರಿವರ್ತನೆಗೊಂಡು ರಾಜ್ಯದ ಗಮನ ಸೆಳೆದಿದೆ.

ಸುಮಾರು 11 ಸಾವಿರ ಜನಸಂಖ್ಯೆ ಹಾಗೂ ಗ್ರಾಮ ಪಂಚಾಯಿತಿ 24 ಸದಸ್ಯ ಬಲದ ಉಕ್ಕಲಿ ‘ಅಮೃತ’ ಗ್ರಾಮ ಪಂಚಾಯಿತಿಗೆ 10 ತಿಂಗಳ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾದ ನಿಂಗೊಂಡ ಸಿಂದಗಿ ಹಾಗೂ ಮೂರು ತಿಂಗಳ ಹಿಂದೆ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡ ಬಿ. ಎಸ್. ಬಡಿಗೇರ ಅವರು ಎಲ್ಲ ಸದಸ್ಯರು, ಗ್ರಾಮಸ್ಥರ ಸಹಕಾರ ಪಡೆದು, ಈ ಅಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದ್ದಾರೆ.

ವೈ–ಫೈ ಮೂಲಕವೇ ನಿರ್ವಹಣೆ: ಪಂಚಾಯಿತಿಗೆ ಸುವರ್ಣ ಗ್ರಾಮ ಯೋಜನೆಯಡಿ ಬಂದಿದ್ದ ಸೋಲಾರ್ ಪ್ಲೇಟ್, ವಿದ್ಯುತ್ ಕಂಬಗಳನ್ನೇ ಬಳಸಿಕೊಂಡು  ₹2 ಲಕ್ಷ ವೆಚ್ಚದಲ್ಲಿ ಒಟ್ಟು 3,500 ಎಲ್ಇಡಿ ವಿದ್ಯುತ್ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ವೈ–ಫೈ ಮೂಲಕ ಸ್ವಯಂಚಾಲಿತ ನಿರ್ವಹಣೆಯಾಗುವಂತೆ  ವ್ಯವಸ್ಥೆ ಮಾಡಲಾಗಿದೆ. ನಿತ್ಯ ವಿದ್ಯುತ್ ಸೋರಿಕೆ, ಕಡಿತ ಹಾಗೂ ಬಲ್ಬ್‌ಗಳು ಸುಡುವ ವಿದ್ಯುತ್ ಸಮಸ್ಯೆಗಳ ದೂರುಗಳೆಲ್ಲ ದೂರವಾಗಿವೆ. ಈ ಮೊದಲು ಪಂಚಾಯಿತಿಗೆ ಮಾಸಿಕವಾಗಿ ಬರುತ್ತಿದ್ದ ₹2 ಲಕ್ಷರಿಂದ ₹3ಲಕ್ಷ ವಿದ್ಯುತ್ ಬಿಲ್ ಈಗ ₹5 ಸಾವಿರದಿಂದ ₹6 ಸಾವಿರಕ್ಕೆ ಇಳಿಕೆಯಾಗಿದೆ.

ADVERTISEMENT

ಎಫ್ಎಂ ರೇಡಿಯೊ: ಗ್ರಾಮದಲ್ಲಿ ಜನರಿಗೆ ಆರೋಗ್ಯ ಇಲಾಖೆಯಿಂದ ಆಗಾಗ ಸಲಹೆ, ಸೂಚನೆಗಳನ್ನು ನೀಡಲು ಹಾಗೂ ಪಂಚಾಯಿತಿಯಿಂದ ಪ್ರಕಟಣೆಗಳು, ಮಾಹಿತಿಗಳನ್ನು ನೀಡಲು ಅಂದಾಜು ₹1 ಲಕ್ಷ ವೆಚ್ಚದಲ್ಲಿ ವೈ–ಫೈ ಮೂಲಕವೇ ಎಫ್.ಎಂ ರೇಡಿಯೊ ಸೌಲಭ್ಯ ಅಳವಡಿಸಲಾಗಿದೆ. ಈಗಾಗಲೇ‌ ಆರಂಭಿಕವಾಗಿ ಗ್ರಾಮದ 11 ವಾರ್ಡ್‌ಗಳಲ್ಲಿ ಎಫ್ಎಂ ರೇಡಿಯೊ ಸಾಧನ ಅಳವಡಿಸಲಾಗಿದೆ.

ಸಿಸಿ ಟಿ.ವಿ ಕ್ಯಾಮೆರಾ ಕಣ್ಗಾವಲು: ಗ್ರಾಮಸ್ಥರ ಸುರಕ್ಷತೆ, ರೈತರ ಹೊಲಗಳಲ್ಲಿ‌ ಕಳವು ತಪ್ಪಿಸಲು ಪಂಚಾಯಿತಿಯಿಂದ ₹1 ಲಕ್ಷ ವೆಚ್ಚದಲ್ಲಿ ಪ್ರಮುಖ‌ ವೃತ್ತಗಳು, ಸಾರ್ವಜನಿಕ ಸ್ಥಳಗಳಲ್ಲಿ ವೈ–ಫೈ ಮೂಲಕ ನಿಯಂತ್ರಣವಾಗುವ ಸೋಲಾರ್ ಮೂಲಕ ಸ್ವಯಂಚಾಲಿತ ಸಿಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆರು ಕಡೆಗಳಲ್ಲಿ ಸಿಸಿ ಟಿ.ವಿ ಕ್ಯಾಮೆರಾ‌ಗಳನ್ನು ಅಳವಡಿಸಲಾಗಿದ್ದು, ಇನ್ನೂ‌ ಆರು ಜಾಗದಲ್ಲಿ ಅಳವಡಿಸಬೇಕಿದೆ.

ಅಂಗನವಾಡಿ ಅಭಿವೃದ್ಧಿಗೆ ಒತ್ತು: ಇಲ್ಲಿ ಒಟ್ಟು 13 ಅಂಗನವಾಡಿ ಕೇಂದ್ರಗಳಿದ್ದು, ನಾಲ್ಕು ಅಂಗನವಾಡಿಗಳಿಗೆ ಸುಸಜ್ಜಿತ, ಕಲಿಕಾ ಸ್ನೇಹಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಎರಡು ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಜಾಗ ಖರೀದಿಸಿ ಕೊಡಲಾಗಿದೆ. ಎಲ್ಲ ಅಂಗನವಾಡಿಗಳ ಮಕ್ಕಳಿಗೆ ಪಂಚಾಯಿತಿಯಿಂದಲೇ ಸಮವಸ್ತ್ರ ವಿತರಿಸಿರುವುದು ವಿಶೇಷ.

ಉಕ್ಕಲಿ‌ ಗ್ರಾಮದಲ್ಲಿ ವೈ–ಫೈ ನಿಯಂತ್ರಿತ ಹಾಗೂ ಸೋಲಾರ್ ಆಧಾರಿತ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ 

ಕಟ್ಟಡಗಳ  ಮೇಲೆ ಸೋಲಾರ್

ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ವೈ–ಫೈ ಅಂಟೆನಾ ಜೊತೆ ಅಂದಾಜು ₹6 ಲಕ್ಷ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ. ಈಗಾಗಲೇ ಆರೋಗ್ಯ ಕೇಂದ್ರ ಕಟ್ಟಡ ಅಂಗನವಾಡಿ ಕೇಂದ್ರಗಳು ಸರ್ಕಾರಿ‌ ಶಾಲೆಗಳು ಮೊದಲಾದ ಸರ್ಕಾರಿ ಕಟ್ಟಡಗಳ ಮೇಲೆ‌ ಸೋಲಾರ್ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಸ್ವಾವಲಂಬನೆಯತ್ತ ಹೆಜ್ಜೆ ಇರಿಸಲಾಗಿದೆ.

ಟ್ರ್ಯಾಕ್ಟರ್ ಜೆಸಿಬಿ ಯಂತ್ರ ಖರೀದಿ

ಗ್ರಾಮ ಪಂಚಾಯಿತಿಗೆ ಸೇರಿದ ವಾಣಿಜ್ಯ ಮಳಿಗೆಗಳ‌ ಲಿಲಾವಿನಿಂದ ಉಳಿತಾಯವಾದ ಹಣ ಬಳಸಿಕೊಂಡು ₹15 ಲಕ್ಷದಲ್ಲಿ ಟ್ರ್ಯಾಕ್ಟರ್ ಜೋಡಣೆಯಾದ ಜೆಸಿಬಿ ಯಂತ್ರ ಮಾಡಿಕೊಳ್ಳಲಾಗಿದೆ. ಪಂಚಾಯಿತಿ ಕಾರ್ಯಗಳ ಜೊತೆಗೆ ರೈತರಿಗೆ ಹೊಲದ ರಸ್ತೆಗಳ ದುರಸ್ತಿಗೆ ಅತ್ಯಲ್ಪ ದರದಲ್ಲಿ ಜೆಸಿಬಿ ಯಂತ್ರದ ಸೇವೆ ಒದಗಿಸಲಾಗಿದೆ.

ಜೆಸಿಬಿಗೆ ಬಾಡಿಗೆ ನೀಡಲು ಪಂಚಾಯಿತಿಯು ಪ್ರತಿ ತಿಂಗಳು ಖರ್ಚು ಮಾಡುತ್ತಿದ್ದ ಸುಮಾರು ₹50 ಸಾವಿರ ಉಳಿತಾಯದ ಜೊತೆ ಜೆಸಿಬಿ ಯಂತ್ರಕ್ಕಾಗಿ ಪರದಾಟ ತಪ್ಪಿದೆ. ಆರೋಗ್ಯ ಕೇಂದ್ರದ ಆವರಣದಲ್ಲಿ ವ್ಯಾಯಾಮ ಉಪಕರಣಗಳ ಅಳವಡಿಕೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ‌ ಸ್ಮಾರ್ಟ್ ಕ್ಲಾಸ್ ಶಾಲಾ ಆವರಣದಲ್ಲಿ‌ ನರೇಗಾ ಅಡಿ ರನ್ನಿಂಗ್ ಟ್ರ್ಯಾಕ್ ಪ್ರತಿ ಸರ್ಕಾರಿ ಶಾಲೆಗಳಿಗೆ‌ ಕ್ರೀಡಾ ಸಾಮಗ್ರಿಗಳು ಸೇರಿದಂತೆ ಅಂದಾಜು ₹54 ಲಕ್ಷ ಅನುದಾನದಲ್ಲಿ ಅಧುನಿಕ‌ ತಂತ್ರಜ್ಞಾನ ಸಹಿತ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.