ಬಬಲೇಶ್ವರ: ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಸಂತ್ರಸ್ತರಿಗೆ ಸರ್ಕಾರ ಒಪ್ಪಿಗೆ ಸೂತ್ರದಡಿ ಸಮರ್ಪಕ ಪರಿಹಾರ ಘೋಷಣೆ ಮಾಡಿದ್ದು, ಇದರಿಂದ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಿ ವಿಜಯಪುರ, ಬಾಗಲಕೋಟೆ, ಕೊಪ್ಪಳ ಮತ್ತೀತರ ಜಿಲ್ಲೆಗಳ ಒಣ ಭೂಮಿಗೆ ನೀರಾವರಿ ಕಲ್ಪಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ತಾಲ್ಲೂಕಿನ ದೇವರ ಗಣ್ಣೂರಿನಲ್ಲಿ ಕೃಷ್ಣ ಮೇಲ್ದಂಡೆ ಹಂತ-3ರ ಯೋಜನಾ ಸಂತ್ರಸ್ತರಿಗೆ ಯೋಗ್ಯ ದರ ನಿಗದಿ ಪಡಿಸಿದ ಅಂಗವಾಗಿ ಯೋಜನಾ ಸಂತ್ರಸ್ತರು ಸೋಮವಾರ ಏರ್ಪಡಿಸಿದ್ದ ಅಭಿನಂದನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಯುಕೆಪಿ ಮೂರನೇ ಹಂತದ ಯೋಜನೆಗೆ ಒಟ್ಟು ₹ 2 ಲಕ್ಷ ಕೋಟಿ ಹಣ ಬೇಕು ಎಂದು ಕೆಲವರು ಬಿಂಬಿಸಿದ್ದರು. ಆದರೆ, ನಾನು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಎಳೆಎಳೆಯಾಗಿ ಹೇಳಿದ್ದೆ. ಇದನ್ನು ಮುಂದೆ ಹಾಕಿದರೆ ಭವಿಷ್ಯದಲ್ಲಿ ಈ ಯೋಜನೆ ಮತ್ತೆ ನನೆಗುದಿಗೆ ಬೀಳಲಿದೆ ಎಂದು ಸಿಎಂ ಮತ್ತು ಡಿಸಿಎಂ ಅವರಿಗೆ ಇತ್ತೀಚೆಗೆ ಮನವರಿಕೆ ಮಾಡಿದ್ದೆ. ಇದನ್ನು ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಸಚಿವರೂ ಬೆಂಬಲಿಸಿದ್ದರು. ಈಗ ಮೂರು ಹಂತಗಳಲ್ಲಿ ಪ್ರತಿ ಎಕರೆ ನೀರಾವರಿ ಜಮೀನಿಗ ₹ 40 ಲಕ್ಷ ಮತ್ತು ಒಣಬೇಸಾಯ ಜಮೀನಿಗೆ ₹ 30 ಲಕ್ಷ ದರ ಪರಿಹಾರ ನಿಗದಿ ಪಡಿಸಲಾಗಿದೆ. ಈ ಯೋಜನೆ ಒಂದು ಹಂತಕ್ಕೆ ಬಂದಿದ್ದು, ಎಲ್ಲ ರೈತರೂ ಇದಕ್ಕೆ ಸಂಪೂರ್ಣ ಬೆಂಬಲ ನೀಡಬೇಕು. ಇದೊಂದು ಐತಿಹಾಸಿಕ ನಿರ್ಣಯವಾಗಿದೆ’ ಎಂದು ಅವರು ಹೇಳಿದರು.
ಮುಖಂಡರಾದ ಬಬಲಾದಿಯ ಅಪ್ಪಯ್ಯ ಹಿರೇಮಠ, ಅದೃಷ್ಯಪ್ಪ ವಾಸಣ್ಣ ದೇಸಾಯಿ, ವಿ. ವಿ. ಅರಕೇರಿ, ಕುಮಾರ ದೇಸಾಯಿ, ಬಸವರಾಜ ದೇಸಾಯಿ, ಡಾ. ಕೆ. ಎಚ್. ಮುಂಬಾರಡ್ಡಿ, ಉಮೇಶ ಮಲ್ಲಣ್ಣವರ, ಬಿ. ಡಿ. ಪಾಟೀಲ, ಎಚ್. ಬಿ. ಹರನಟ್ಟಿ, ರಮೇಶ ಯರಗಟ್ಟಿ, ಶಂಕರಗೌಡ ಪಾಟೀಲ, ಲಕ್ಷ್ಮಣ ಚಿಕದಾನಿ, ಕೆ. ಪಿ. ಶಿರಬೂರ, ಅಪ್ಪುಗೌಡ ಪಾಟೀಲ ಶೇಗುಣಸಿ, ವಿಠ್ಠಲ ಶೇಬಾನಿ, ಶಂಕ್ರೆಪ್ಪ ಜನವಾಡ, ದುಂಡಪ್ಪ ಹಂಗರಗಿ, ಸುಬ್ಬನಗೌಡ ಪಾಟೀಲ, ಭೀಮನಗೌಡ ಪಾಟೀಲ, ಪ್ರಶಾಂತ ದೇಸಾಯಿ, ವಾಸು ಗಿರೆವ್ವಗೋಳ, ರವಿ ಬಿರಾದಾರ, ಅಶೋಕ ಕಬಾಡೆ, ನಾಗಪ್ಪ ದೇಸಾಯಿ, ರಾಮಸ್ವಾಮಿ ವಾಲಿಕಾರ ಉಪಸ್ಥಿತರಿದ್ದರು.
ನಂದಿ ಸಕ್ಕರೆ ಕಾರ್ಖಾನೆ ಈ ಭಾಗದ ರೈತರಿಗೆ ಅಸ್ಮಿತೆಯಾಗಿದ್ದು ರೈತರಿಗೆ ನೆರವಾಗಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕಾರ್ಖಾನೆಯ ಉಳಿವಿಗೆ ಎಲ್ಲರೂ ಕೈಜೋಡಿಸಿ ಉಳಿಸೋಣ.– ಎಂ. ಬಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.