ADVERTISEMENT

ನಾಲ್ಕು ವರ್ಷ ಗತಿಸಿದರೂ ಬದಲಾಗದ ನಾಮಫಲಕ..!

‘ವಿಜಯಪುರ’ ಕಡತಕ್ಕಷ್ಟೇ ಸೀಮಿತಗೊಂಡ ಆದೇಶ; ಇಂದಿಗೂ ವಿಜಾಪುರ, ಬಿಜಾಪುರ, ವಿಜಯಾಪುರ ಬಳಕೆ

ಡಿ.ಬಿ, ನಾಗರಾಜ
Published 31 ಡಿಸೆಂಬರ್ 2018, 17:53 IST
Last Updated 31 ಡಿಸೆಂಬರ್ 2018, 17:53 IST
ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ಇಗ್ನೊ ಪ್ರಾದೇಶಿಕ ಕೇಂದ್ರದ ನಾಮಫಲಕಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ಇಗ್ನೊ ಪ್ರಾದೇಶಿಕ ಕೇಂದ್ರದ ನಾಮಫಲಕಪ್ರಜಾವಾಣಿ ಚಿತ್ರ   

ವಿಜಯಪುರ: ನಗರದ ಹೆಸರು ಬದಲಾಗಿ ಬರೋಬ್ಬರಿ ನಾಲ್ಕು ವರ್ಷ ಗತಿಸಿವೆ. ಈ ಅವಧಿಯಲ್ಲಿ ಸರ್ಕಾರದ ಚುಕ್ಕಾಣಿ ಹಿಡಿದವರು ಬದಲಾಗಿದ್ದಾರೆ. ಇಬ್ಬರು ಜಿಲ್ಲಾಧಿಕಾರಿ ಕರ್ತವ್ಯ ನಿರ್ವಹಿಸಿದ್ದು; ಇದೀಗ ಮೂರನೇಯವರು ಜಿಲ್ಲಾಡಳಿತದ ಚುಕ್ಕಾಣಿ ಹಿಡಿದಿದ್ದಾರೆ.

ಐತಿಹಾಸಿಕ ನಗರಿಯ ಹೆಸರಿನ ಗೊಂದಲ ಇಂದಿಗೂ ಬಗೆಹರಿದಿಲ್ಲ. ರಾಜ್ಯ ಸರ್ಕಾರ, ಜಿಲ್ಲಾಡಳಿತದ ಆದೇಶಗಳು ಕಡತಕ್ಕಷ್ಟೇ ಸೀಮಿತಗೊಂಡಿದೆ. ಹೆಸರು ಬದಲಾವಣೆಯ ನಿರ್ಣಯ ಅಂಗೀಕರಿಸಿ, ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹ ಈ ವಿಷಯದಲ್ಲಿ ಮೌನ ವಹಿಸಿದೆ.

ಇದರ ಪರಿಣಾಮ ಇಂದಿಗೂ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ವಿಜಾಪುರ, ಬಿಜಾಪುರ, ವಿಜಯಾಪುರ ಬಳಕೆಯಲ್ಲಿದೆ. ದಿನಗಳು ಉರುಳಿದಂತೆ ಸರ್ಕಾರಿ–ಖಾಸಗಿ ವಲಯದಲ್ಲಿ ವಿಜಯಪುರ ಹೆಸರು ಚಾಲ್ತಿಗೆ ಬಂದರೂ; ಸರ್ಕಾರಿ ವಲಯದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲದಿರುವುದು ಎಲ್ಲೆಡೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

ADVERTISEMENT

ಖಾಸಗಿ ವಲಯವೂ ಇದರಿಂದ ಹೊರತಾಗಿಲ್ಲ. ಪ್ರತಿಷ್ಠಿತರು, ಹೆಸರು ಬದಲಾವಣೆಗೆ ಕಾರಣರಾದವರ ಸಂಸ್ಥೆಗಳಲ್ಲೇ ವಿಜಾಪುರ, ಬಿಜಾಪುರ ರಾರಾಜಿಸುತ್ತಿದೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ.

‘ಕೆಲ ಸರ್ಕಾರಿ ಕಚೇರಿಗಳ ನಾಮಫಲಕದಲ್ಲಿ ಇಂದಿಗೂ ವಿಜಾಪುರ ಬಳಕೆಯಲ್ಲಿದೆ. ಶಾಲೆಗಳ ಸ್ವಾಗತ ಕಮಾನಿನಲ್ಲೂ ವಿಜಾಪೂರವೇ ಇದೆ. ಅಧಿಕಾರಿಗಳು ಬಳಸುವ ಸರ್ಕಾರಿ ವಾಹನಗಳ ಚಿಕ್ಕ ನಾಮಫಲಕದಲ್ಲೂ ಹಳೆಯ ಹೆಸರಿದೆ. ಈ ವಾಹನ ಎಲ್ಲೆಡೆ ಸಂಚರಿಸಲಿದ್ದು, ಕುತೂಹಲದಿಂದ ವೀಕ್ಷಿಸಿದವರು ಊರ ಹೆಸರು ನೋಡಿ ಗೊಂದಲಕ್ಕೊಳಗಾಗುತ್ತಿದ್ದಾರೆ.

ಚುನಾವಣಾ ಆಯೋಗದಲ್ಲೂ ಹೆಸರು ಬದಲುಗೊಂಡಿಲ್ಲ. ಇಂದಿಗೂ ಬಿಜಾಪುರ ಬಳಕೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ’ ಎಂಬ ಅಸಮಾಧಾನ ವಿಜಯಪುರದ ಕೆ.ಎ.ಪಟೇಲ ಅವರದ್ದು.

ಜಿಲ್ಲಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಕಚೇರಿಯನ್ನು ನಗರದ ಹೆಸರು ಬದಲಾದ ಬಳಿಕ ಆರಂಭಿಸಿದರೂ; ಇದರ ನಾಮಫಲಕ ಸಹ ಬಿಜಾಪುರ ಎಂದಿದೆ.

ಈ ಕಚೇರಿ ಈ ಹಿಂದೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಜಿಲ್ಲಾ ಕಚೇರಿಯಾಗಿತ್ತು. ಇದೀಗ ಇಲ್ಲಿಯೇ ಬಿಜಾಪುರ ಎಂದು ಬಳಕೆಯಾಗಿದೆ. ಅದೂ ದೂರ ಶಿಕ್ಷಣ ಒದಗಿಸುವ ವಿ.ವಿ.ಯ ಪ್ರಾದೇಶಿಕ ಕೇಂದ್ರ ಕಚೇರಿಯ ನಾಮಫಲಕದಲ್ಲಿ ಎಂಬುದು ಗಮನಾರ್ಹ.

ಕಸಾಪ ನಿರ್ಣಯ ಅನುಷ್ಠಾನ

2013ರಲ್ಲಿ ನಗರದಲ್ಲಿ ನಡೆದಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ವಿಜಯಪುರ ಎಂದು ನಾಮಕರಣ ಮಾಡಬೇಕು ಎಂಬ ನಿರ್ಣಯ ಅಂಗೀಕರಿಸಲಾಗಿತ್ತು. 2014ರ ನ.1ರಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ನಿರ್ಣಯವನ್ನು ಅನುಷ್ಠಾನಗೊಳಿಸಿತು.

ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಬಿ.ಪಾಟೀಲ ಕನ್ನಡ ರಾಜ್ಯೋತ್ಸವದಲ್ಲಿ ‘ವಿಜಯಪುರ’ ಹೆಸರು ಘೋಷಿಸಿದ್ದರು. ಇದೇ ಸಂದರ್ಭ ಎಲ್ಲೆಡೆ ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.