ದೇವರಹಿಪ್ಪರಗಿ: ನಿಗದಿತ ಸಮಯಕ್ಕೆ ಬಾರದ ಬಸ್‌ಗಳು ಹಾಗೂ ಬಸ್‌ಗಳ ಕೊರತೆಯಿಂದ ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳು ಬಾಗಿಲಲ್ಲಿ ನಿಂತು ಪ್ರಯಾಣಿಸುವಂತಾಗಿದೆ.
ಪಟ್ಟಣ ಹಾಗೂ ತಾಲ್ಲೂಕು ಕೇಂದ್ರದಲ್ಲಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕಳೆದ 8 ತಿಂಗಳುಗಳಿಂದ ಬಸ್ ಕೊರತೆಯ ಸಮಸ್ಯೆ ಎದುರಿಸುತ್ತಿದ್ದು, ನಿತ್ಯ ಅಪಾಯಕಾರಿ ಬಾಗಿಲು ಪ್ರಯಾಣ ಮಾಡುವಂತಾಗಿದೆ. ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಿವರಾಜ್ ತಳವಾರ ಮಾತನಾಡಿ, ಬೆಳಿಗ್ಗೆ ಶಾಲಾ ಕಾಲೇಜು ಆರಂಭ ಸಮಯಕ್ಕೆ ಬಸ್‌ಗಳ ಕೊರತೆ ಅಷ್ಟಾಗಿ ಕಾಡುವುದಿಲ್ಲ. ಆದರೆ ಮಧ್ಯಾನ್ಹ 12 ಗಂಟೆಗೆ ಹಾಗೂ ಸಾಯಂಕಾಲ 5 ಗಂಟೆಗೆ ಶಾಲೆ, ಕಾಲೇಜುಗಳು ಕೊನೆಗೊಳ್ಳುವ ಸಮಯಕ್ಕೆ ಬಸ್ಗಳು ಇರದ ಕಾರಣ ನಂತರದ ಸಮಯದ ಬಸ್‌ಗಳಲ್ಲಿ ನೂಕು ನೂಗ್ಗಲು ಉಂಟಾಗಿ ಬಹುತೇಕ ಪ್ರಯಾಣಿಕರು ಅದರಲ್ಲೂ ಶಾಲಾ ವಿದ್ಯಾರ್ಥಿಗಳು ನಿಂತು ಪ್ರಯಾಣಿಸುವ ಅನಿವಾರ್ಯತೆಗೆ ಒಳಗಾಗಬೇಕಾಗಿದೆ.
ಕಾಲೇಜು ಬಿಡುವ ಮಧ್ಯಾನ್ಹದ 12.30 ಗಂಟೆಗೆ ಹಾಗೂ ಶಾಲೆ ಬಿಡುವ ಸಾಯಂಕಾಲ 5.30 ಗಂಟೆಯ ಸಮಯಕ್ಕೆ ಸರಿಯಾಗಿ ದೇವರಹಿಪ್ಪರಗಿಯಿಂದ ಇಂಡಿ , ಕೋರವಾರ, ಬಸವನಬಾಗೇವಾಡಿ, ಹೂವಿನಹಿಪ್ಪರಗಿ ಹಾಗೂ ತಾಳಿಕೋಟೆ ಮಾರ್ಗಗಳಲ್ಲಿ ಬಸ್ ಓಡಾಡುವಂತಾಗಬೇಕು. ನಂತರ ಇದೇ ಮಾರ್ಗದಲ್ಲಿ 6 ಗಂಟೆಗೆ ಇನ್ನೊಂದು ಬಸ್ ಓಡಿದರೂ ಸಾಕು ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಪ್ರಯಾಸದ ಪ್ರಯಾಣ ನಿಲ್ಲುತ್ತದೆ.
ಶಾಲಾ ಹಾಗೂ ಕಾಲೇಜುಗಳ ಬಿಡುವಿನ ವೇಳೆಗೆ ಇಂಡಿ, ಸಿಂದಗಿ, ತಾಳಿಕೋಟೆ ಹಾಗೂ ಬಸವನ ಬಾಗೇವಾಡಿ ಸಾರಿಗೆ ಘಟಕಗಳು ನಿಯಂತ್ರಕರು, ನಿರ್ವಹಣಾಧಿಕಾರಿಗಳು ಹೆಚ್ಚುವರಿ ಒಂದು ಬಸ್ ವ್ಯವಸ್ಥೆ ಕಲ್ಪಿಸುವುದರ ಮೂಲಕ ಅಗತ್ಯ ಕ್ರಮ ಕೈಗೊಂಡು ಬಸ್ ಚಾಲಕರು ಹಾಗೂ ನಿರ್ವಾಹಕರ ಮೇಲಿನ ಸಾರ್ವಜನಿಕರ ಆರೋಪಕ್ಕೆ ಕಡಿವಾಣ ಹಾಕಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಗಣೇಶ ಸಿಂಧೆ, ಆನಂದ ಬಿರಾದಾರ(ಮಣ್ಣೂರ), ವೆಂಕಟೇಶರೆಡ್ಡಿ (ಭೈರವಾಡಗಿ), ರಾವುತ ಎಸ್.ಟಿ, ಪ್ರಕಾಶ ಡೋಣೂರಮಠ(ಸಾತಿಹಾಳ) ಸಹಿತ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.