ADVERTISEMENT

ವಿಜಯಪುರ: ಅಸ್ಪೃಶ್ಯತೆ ಸಮಾಜಕ್ಕೆ ಅಂಟಿದ ಶಾಪ -ಕನ್ನೊಳಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 11:40 IST
Last Updated 2 ಅಕ್ಟೋಬರ್ 2021, 11:40 IST
ತೋರವಿಯಲ್ಲಿ ಶನಿವಾರ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮನಗೌಡ ಕನ್ನೊಳಿ ಶ್ರಮದಾನ ಮಾಡಿದರು
ತೋರವಿಯಲ್ಲಿ ಶನಿವಾರ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮನಗೌಡ ಕನ್ನೊಳಿ ಶ್ರಮದಾನ ಮಾಡಿದರು   

ವಿಜಯಪುರ: ಅಸ್ಪೃಶ್ಯತೆ ಎನ್ನುವುದು ನಮ್ಮ ಸಮಾಜಕ್ಕೆ ಅಂಟಿದ ಶಾಪ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮನಗೌಡ ಕನ್ನೊಳಿ ಹೇಳಿದರು.

ತೊರವಿಯಲ್ಲಿ ಶನಿವಾರ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾನವ ಕುಲಂ ತಾನೊಂದೆ ವಲಂ’ ಎನ್ನುವ ಆದಿಕವಿ ಪಂಪನ ಸಂದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಕೋಟ್ಯಂತರ ಅನುದಾನ ಭರಿಸಿ ಅನುಷ್ಟಾನಗೊಳಿಸುತ್ತಿದೆ ಎಂದರು.

ADVERTISEMENT

ನಮ್ಮ ಸಮಾಜದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ದುರಂತ. ಅಸ್ಪೃಶ್ಯತೆ ಪಾಲಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು.

‘ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಹಕ್ಕು’ ಎನ್ನುವ ಬಿ.ಆರ್.ಅಂಬೇಡ್ಕರ್ ರಚಿತ ಸಂವಿಧಾನದ ಆಶಯದಂತೆ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ಭದ್ರ ಭಾರತ ನಿರ್ಮಾಣವಾಗಬೇಕಿದೆ ಎಂದರು.

ಜಾತಿ ನಿಂದನೆ ಮಾಡುವುದು, ಧಾರ್ಮಿಕ ಕ್ಷೇತ್ರ, ಪೂಜಾ ಸ್ಥಳಗಳಲ್ಲಿ ಪ್ರವೇಶ ತಡೆಯುವುದು, ಯಾವುದೇ ಧಾರ್ಮಿಕ ಸೇವೆ ಮಾಡದಿರುವುದು, ಯಾವುದೇ ಕೆರೆ, ಬಾವಿ, ಕೊಳವೆಬಾವಿ ಬಳಕೆಗೆ ಅವಕಾಶ ಮಾಡಿಕೊಡದಿರುವುದು, ‌ನೀರು ಉಪಯೋಗಿಸುವುದಕ್ಕೆ ಅಡ್ಡಿಯುಂಟು ಮಾಡುವುದು, ಜಾತಿ ಆಧಾರದ ಮೇಲೆ ಯಾವುದೇ ಅಂಗಡಿ, ಸಾರ್ವಜನಿಕ ಉಪಹಾರ ಗೃಹ, ಹೋಟೆಲ್‌, ಸಾರ್ವಜನಿಕ ಮನೋರಂಜನಾ ಸ್ಥಳ, ಸಲೂನ್ ಪ್ರವೇಶಕ್ಕೆ ಅಡ್ಡಿ ಮಾಡಬಾರದು ಎಂದು ಅವರು ಹೇಳಿದರು.

ಬುದ್ಧ, ಬಸವ, ಅಂಬೇಡ್ಕರ್ ಅವರ ಕನಸಿನ ಸಮ ಸಮಾಜವನ್ನು ಕಟ್ಟೋಣ, ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸೋಣ ಎಂದು ಅವರು ಹೇಳಿದರು.

ಅಸ್ಪೃಶ್ಯತೆ ನಿವಾರಣೆ ಬಗ್ಗೆ ಗಾಂಧಿಜಿಯವರು ತಿಳಿಸಿರುವ ಸಂದೇಶದ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಿ, ಅಸ್ಪೃಶ್ಯತೆ ಆಚರಣೆ ವಿರೋಧದ ಕಾನೂನಿನ ಅರಿವು ಮೂಡಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯಗಳು ಹಾಗೂ ಶಾಲೆಗಳಲ್ಲಿ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಕಳ್ಳಿಮನಿ, ದಲಿತ ಮುಖಂಡ ಅಡಿವೆಪ್ಪ ಸಾಲಗಲ್, ದಾದಾಸಾಬ ಬಾಗಾಯತ್, ಲಾಲಪ್ಪ ಗುಡಿಮನಿ, ಹನುಮಂತ ಪಟ್ಟೇದ, ಶಾಂತಿನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸುರೇಶಗೌಡ ಬಿರಾದಾರ, ಸಿದ್ಧಾರ್ಥ ಪರಣಾಕರ, ಸುರೇಶ್ ಗಚ್ಚಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.