ADVERTISEMENT

ರಂಗೋಲಿಯಲ್ಲಿ ವೈದ್ಯಕೀಯ ಮಾಹಿತಿ ಅನಾವರಣ

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವರ್ಣರಂಜಿತ ರಂಗೋಲಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2024, 5:20 IST
Last Updated 11 ಮಾರ್ಚ್ 2024, 5:20 IST
ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಸ್ತೆಯಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವದಲ್ಲಿ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ರಂಗೋಲಿ ಬಿಡಿಸಿದರು.  –ಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ
ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಸ್ತೆಯಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವದಲ್ಲಿ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ರಂಗೋಲಿ ಬಿಡಿಸಿದರು.  –ಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ   

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ  ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಬೃಹತ್‌ ಪ್ರಮಾಣದ ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವ ಆಯೋಜಿಸಿ ಆರೋಗ್ಯಕ್ಕೆ ಸಂಬಂಧಿಸಿದ ನಾನಾ ಬಗೆಯ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಿ, ಸಾರ್ವಜನಿಕರಿಗೆ ಆರೋಗ್ಯದ ಕುರಿತು ಭರಪೂರ ಮಾಹಿತಿ ಉಣಬಡಿಸಿದರು.

ರಂಗೋಲಿ ಮೂಲಕ ಮಾನವನ ಶರೀರ, ಕಾಯಿಲೆಗಳು, ಅವುಗಳ ಗುಣಲಕ್ಷಣಗಳು, ದುಶ್ಚಟಗಳ ದುಷ್ಪರಿಣಾಮ, ರೋಗಗಳ ನಿಯಂತ್ರಣ, ಆಹಾರ ನಿಯಮತ ಸೇವನೆ, ಆರೋಗ್ಯದ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬಹುದಾದ ಚಿಕಿತ್ಸೆ, ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳ ಜೊತೆಗೆ ಮನೋಸ್ಥೈರ್ಯ ಹೆಚ್ಚಳ, ಸ್ವಚ್ಛ ಪರಿಸರ, ಪರಿಸರ ಸಂರಕ್ಷಣೆ ಕುರಿತ ರಂಗೋಲಿಯ ವರ್ಣರಂಜಿತ ಚಿತ್ತಾರಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.  

ಪೆನ್‌, ಸ್ಟೆಥಸ್ಕೋಪ್ ಹಿಡಿಯುವ ಕೈಗಳು ಭಾನುವಾರದ ನಸುಕಿನ ಜಾವದಲ್ಲಿಯೇ ಕೈಯಲ್ಲಿ ರಂಗೋಲಿ ಹಿಡಿದು ವೈದ್ಯಕೀಯ ಶಿಕ್ಷಣದ ಕುರಿತು ಜಾಗತಿಕ ದಾಖಲೆ ನಿರ್ಮಾಣಕ್ಕೆ ಸಿದ್ಧರಾಗಿದ್ದರು. ಸುಮಾರು 1500ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು, 50 ಸಾವಿರ ಚದರ ಅಡಿ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಠ್ಯಕ್ಕೆ ಪೂರಕವಾದ 250 ಚಿತ್ರಗಳನ್ನು ಬಿಡಿಸಿದರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ 40 ಜನ, ಮೇಲ್ವಿಚಾರಕರಾಗಿ 20 ಜನರು ವಿದ್ಯಾರ್ಥಿಗಳಿಗೆ ಸಾಥ್‌ ನೀಡಿದರು. 

ADVERTISEMENT

ವಿದ್ಯಾರ್ಥಿಗಳಿಗೆ ಬಾಳೆಹಣ್ಣು, ಜ್ಯೂಸ್‌: 

ಬಿಎಲ್‌ಡಿಇ ವಿಶ್ವವಿದ್ಯಾಲಯದಲ್ಲಿ ರಸ್ತೆಯಲ್ಲಿ ರಂಗೋಲಿ ಬಿಡಿಸುವ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಇದರ ಜೊತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಸ್ತೆ ಉದ್ದಕ್ಕೂ ಅಲ್ಲಲ್ಲಿ ಬಾಳೆಹಣ್ಣು, ಶುದ್ಧ ಕುಡಿಯುವ ನೀರು, ಲಿಂಬೆ ಜ್ಯೂಸ್‌ಗಳನ್ನು ಇರಿಸಲಾಗಿತ್ತು. ಸುಸ್ತು, ಬಾಯಾರಿಕೆ ಆದ ವಿದ್ಯಾರ್ಥಿಗಳನ್ನು ಜ್ಯೂಸ್‌ಗಳನ್ನು ಸೇವಿಸಿ ಮತ್ತೆ ರಂಗೋಲಿ ಬಿಡಿಸುವಲ್ಲಿ ಮಗ್ನರಾಗಿದ್ದರು.

ಪಠ್ಯಕ್ರಮಕ್ಕೆ ಅನುಗುಣವಾಗಿ ಪುಸ್ತಕಗಳಲ್ಲಿ ಚಿತ್ರ ಬಿಡಿಸುತ್ತ ಸದಾ ಅಧ್ಯಯನದಲ್ಲಿ ವ್ಯಸ್ಥರಾಗುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಮನೋಲ್ಲಾಸ ಹೆಚ್ಚಿಸುವ ಮತ್ತು ಜಗತ್ತಿನಲ್ಲಿಯೇ ವಿನೂನತ ದಾಖಲೆಗೆ ಸಾಕ್ಷಿಯಾಗುವ ಘಟನೆಯಲ್ಲಿ ತಾವೂ ಪಾಲುದಾರರು ಎಂಬ ಹೆಗ್ಗಳಿಕೆಗೆ ಸ್ಪೂರ್ತಿಯಾಯಿತು.  

ವೀಕ್ಷಣೆಗೆ ಅವಕಾಶ:

ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವವನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದ್ದು, ಸೋಮವಾರ ಬೆಳಿಗ್ಗೆ 7ರಿಂದ ಸಂಜೆ 7ವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಸಾರ್ವಜನಿಕರು ಮತ್ತು ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದು.

ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ಭಾನುವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವವನ್ನು ಸಚಿವ ಬಿ.ಎಂ. ಪಾಟೀಲ ಉದ್ಘಾಟಿಸಿದರು.– ಪ್ರಜಾವಾಣಿ ಚಿತ್ರ 

ಸ್ವಾಸ್ಥ್ಯ ಸಂತುಲನ ರಂಗೋಲಿ ಮಹೋತ್ಸವದ ಮೂಲಕ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಕೌಶಲ ಹೆಚ್ಚಿಸುವ ಜೊತೆಗೆ  ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ   –ನಂದಿನಿ ಮುಚ್ಚಂಡಿ ಸಹಾಯಕ ಪ್ರಾಧ್ಯಾಪಕಿ

ಇದೊಂದು ಐತಿಹಾಸಿಕ ದಿನವಾಗಿದ್ದು ಜಾಗತಿಕ ದಾಖಲೆಗಳಲ್ಲಿ ಸೇರ್ಪಡೆಯಾಗುಲ್ಲಿ ಮಹತ್ವದ ಹೆಜ್ಜೆಯಾಗಿದೆ. ಗಿನ್ನೀಸ್ ಬುಕ್ ಸೇರಿದಂತೆ ಒಟ್ಟು 5 ಜಾಗತಿಕ ದಾಖಲೆಗಳಲ್ಲಿ ಸೇರುವ ವಿಶ್ವಾಸವಿದೆ –ಎಂ.ಬಿ ಪಾಟೀಲ ಸಚಿವ

10 ಟನ್‌ ರಂಗೋಲಿ ಬಳಕೆ  ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪ್ರಯತ್ನಕ್ಕೆ ಸಾಕ್ಷಿಯಾದ ಬಿ.ಎಂ ಪಾಟೀಲ ವೈದ್ಯಕೀಯ ಕಾಲೇಜು ರಂಗೋಲಿ ಮಹೋತ್ಸವಕ್ಕೆ ಸುಮಾರು 10 ಟನ್‌ ರಂಗೋಲಿ ಬಳಕೆ ಮಾಡಿದರು. ವಿದ್ಯಾರ್ಥಿಗಳಿಗೆ ರಂಗೋಲಿ ಬಿಡಿಸಲು ಬೇಕಾದ ಉಪಕರಣಗಳನ್ನು ಬೀದಿಬದಿ ವ್ಯಾಪಾರಿಗಳಿಂದ ಖರೀದಿಸಿ ವಿದ್ಯಾರ್ಥಿಗಳಿಗೆ ನೀಡಿಲಾಗಿತ್ತು.  ವೈದ್ಯಕೀಯ ಶಿಕ್ಷಣದ ವಿಷಯದ ಮೇಲೆ ಇದೇ ಮೊದಲ ಬಾರಿಗೆ ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಎಲೈಟ್ ವರ್ಲ್ಡ್ ರೆಕಾರ್ಡ್ಸ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಲು ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಪ್ರಾಚಾರ್ಯ ಡಾ.ಅರವಿಂದ ಪಾಟೀಲ‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.