ADVERTISEMENT

ಮೇಧಾವಿಯನ್ನಾಗಿಸುವ ಮಾಂತ್ರಿಕ ‘ಗುರು’

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 12:05 IST
Last Updated 9 ಜುಲೈ 2021, 12:05 IST
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ   

ಮಹಾನ್ ದಡ್ಡ ಎಂದು ಯಾರನ್ನು ಪರಿಗಣಿಸಬೇಡಿ. ಏಕೆಂದರೆ, ಮಹಾನ್ ಬುದ್ಧಿಯನ್ನು ಕರುಣಿಸುವ, ಮೌಢ್ಯವನ್ನು ತೊಳೆದು, ಮೇಧಾವಿಯನ್ನಾಗಿಸುವ ಮಾಂತ್ರಿಕನ ಪರಿಚಯ ಮಾಡಿಕೊಳ್ಳುವ ಬನ್ನಿ.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವವರಿಗೂ ಮುಂದೆ ಗುರಿ, ಹಿಂದೆ ಗುರು ಇರಬೇಕು. ಎಲ್ಲ ರಂಗಗಳಲ್ಲಿ ಗುರುವಿನ ಮಾರ್ಗದರ್ಶನ ಅವಶ್ಯಕ. ಹೀಗಿರುವಾಗ ಆಧ್ಯಾತ್ಮಿಕ ಸಾಧಕನಿಗೆ ಗುರುವೇ ಸರ್ವಸ್ವ, ಗುರುವೇ ಬ್ರಹ್ಮ, ವಿಷ್ಣು, ಮಹೇಶ್ವರ.

ಗುರುಕೃಪೆಯಿಂದ ಅಜ್ಞಾನಿ ಜ್ಞಾನಿಯಾಗುವನು ಎಂಬುದಕ್ಕೆ ಶಂಕರರ ಜೀವನದ ಒಂದು ಉದಾಹರಣೆ ಕೊಡಬಹುದು.

ADVERTISEMENT

ಆದಿ ಶಂಕರರ ನೇರ ಶಿಷ್ಯರುಗಳೆಂದರೆ ಪದ್ಮಪಾದ, ಹಸ್ತಾಮಲಕ, ಸುರೇಶ್ವರಾಚಾರ್ಯ ಮತ್ತು ತೋಟಕಾಚಾರ್ಯ. ಅವರಲ್ಲಿ ತೋಟಕಾಚಾರ್ಯ ಸ್ವಲ್ಪ ಓದುವುದರಲ್ಲಿ ಹಿಂದೆ. ಆದರೆ, ಶಂಕರರ ಎಲ್ಲ ಸೇವೆಯನ್ನೂ ಅತ್ಯಂತ ಶ್ರಧ್ಧೆ, ನಿಷ್ಠೆ, ಭಕ್ತಿಯಿಂದ ಮಾಡುತ್ತಿದ್ದರು. ಒಮ್ಮೆ ಆಚಾರ್ಯರು ಪಾಠ ಮಾಡಲು ಪ್ರಾರಂಭಿಸಿದ್ದಾಗ ಇನ್ನೂ ತೋಟಕ ಬಂದಿರಲಿಲ್ಲ. ಅವನು ಬಂದಮೇಲೆ ಪ್ರಾರಂಭ ಮಾಡೋಣವೆಂದು ಹೇಳಿದರು. ಕೂಡಲೇ ಉಳಿದ ಶಿಷ್ಯರು ನಕ್ಕರು. ‘ಗುರುಗಳೇ ಅವನಿಗೆ ಯಾವ ಪಾಠವೂ ಅರ್ಥವಾಗುವುದಿಲ್ಲ ಅವನು ಕೇಳಿದರೂ ಒಂದೇ, ಕೇಳದಿದ್ದರೂ ಒಂದೇ ಅವನಿಗಾಗಿ ಕಾಯುವ ಸಮಯ ವ್ಯರ್ಥ’ ಎಂದರು. ಇದನ್ನು ಗಮನಿಸಿದ ಶಂಕರರು ಮನದಲ್ಲಿ ತೋಟಕನನ್ನು ಮಹಾಜ್ಞಾನಿ ಆಗಲೆಂದು ಸಂಕಲ್ಪಿಸಿ, ಆಶೀರ್ವದಿಸಿದರು.

ಕೆಲವು ನಿಮಿಷಗಳ ನಂತರ ತೋಟಕಾಚಾರ್ಯರು ಬರುವಾಗಲೇ ಗುರುಗಳ ಮೇಲೆ ಸ್ತೋತ್ರವನ್ನು ರಚಿಸುತ್ತಾ ಬಂದರು. ತಮ್ಮ ಗುರುವನ್ನು ಸ್ತುತಿಸುವ ‘ತೋಟಕಶತಕ’ವನ್ನು ಸಂಸ್ಕೃತದಲ್ಲಿ ರಚಿಸಿ ಪ್ರಖ್ಯಾತರಾದರು. ಶಂಕರರ ಉಪನಿಷದ್ ಭಾಷ್ಯಕ್ಕೆ ಟೀಕೆಗಳನ್ನು ಬರೆದು, ಅನೇಕ ಗ್ರಂಥಗಳನ್ನು ರಚಿಸಿ ಸಂಸ್ಕೃತ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಗುರುವಿನ ಸೇವೆಯನ್ನು ಪರಿಶುದ್ಧ ಮನಸ್ಸಿನಿಂದ ಮಾಡುವವರಿಗೆ ಎಂದಿಗೂ ಉತ್ತಮ ಭವಿಷ್ಯವಿದೆ ಎಂಬುದನ್ನು ತೋರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.