ADVERTISEMENT

ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 15:04 IST
Last Updated 20 ನವೆಂಬರ್ 2020, 15:04 IST
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ   

ನಾವು ಗಳಿಸಿದ ಸಂಪತ್ತನ್ನು ಪರರಿಗೆ ಮತ್ತು ಧರ್ಮದ ಕಾರ್ಯಕ್ಕೆ ಯಾವುದೇ ಫಲಾಪೇಕ್ಷೆ ಇಲ್ಲದೆ ದಾನ ಮಾಡುವುದೆ ಪುಣ್ಯ ಕಾರ್ಯ ಎಂದು ಮಹಾತ್ಮರು ಹೇಳಿದ್ದಾರೆ.

ನಾವೇನಾದರೂ ಗಳಿಸಿದ ಸಂಪತ್ತನ್ನು ಪರರಿಗೆ ದಾನ ಮಾಡದೇ ಹೋದರೆ ಆ ಸಂಪತ್ತಿಗೆ ಬೆಲೆ ಸಿಗುವುದಿಲ್ಲ. ಅದಕ್ಕಾಗಿ ಸರ್ವಜ್ಞನವರು ‘ಸೊಡರೆಣ್ಣೆ ತೀರಿದರೆ ಕೊಡನೆತ್ತಿ ಹೊಯ್ಯುವರೇ? ಕೊಡಬೇಡ ಕೊಡದೆ ಇರಬೇಡ ಕೊಟ್ಟಿದ್ದು ಕೆಟ್ಟಿತೆನಬೇಡ, ಮುಂದೆ ಕಟ್ಟಿಹುದು ಬುತ್ತಿ, ಸರ್ವಜ್ಞ’ ಎಂದು ತಿಳಿಸಿದ್ದಾರೆ.

ಸಂಪತ್ತು ಶಾಶ್ವತವಾಗಿ ಯಾರಲ್ಲಿಯೂ ಉಳಿಯುವುದಿಲ್ಲ. ‘ಸಿರಿ ಎಂಬುದು ಸಂತೆಯ ಮಂದಿ ಕಂಡಯ್ಯಾ’ ಎಂದು ಶರಣರು ಹೇಳಿದ್ದಾರೆ. ಸಂತೆ ಮುಂಜಾನೆ ಕೂಡುತ್ತದೆ. ಮತ್ತೆ ಸಂಜೆ ಮುಗಿದು ಬಿಡುತ್ತದೆ. ಮುಂಜಾನೆ ಬಂದಾಗ ವ್ಯಾಪಾರ ಮಾಡಿಕೊಂಡು ಬಿಡುವ ಹಾಗೆ ಭಗವಂತನು ಸಿರಿ ಸಂಪದವನ್ನು ಕೊಟ್ಟಾಗ ಅದನ್ನು ಸದುಪಯೋಗ ಮಾಡಿಕೊಂಡು ಜನಪರ ಕಾರ್ಯಗಳನ್ನು ಮಾಡಬೇಕು.

ADVERTISEMENT

‘ಸಿರಿಬಂದ ಕಾಲದಲಿ, ಕರೆದು ದಾನವ ಮಾಡು ಪರಿಣಾಮವಕ್ಕೂ ಪದವಕ್ಕೂ ಕೈಲಾಸ ನೆರೆಮನೆಯಕ್ಕೂ ಸರ್ವಜ್ಞ’ ಎಂದು ತಿಳಿಸಿದ್ದಾರೆ.

ದಾನ, ಧರ್ಮ ಕಾರ್ಯಗಳಿಗೆ ಸದ್ ವಿನಿಯೋಗ ಮಾಡಬೇಕು. ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ ನಮಗೆ ಭಗವಂತನ ಕೃಪೆಯಾಗುತ್ತದೆ. ಜೀವನವು ಸಂತೃಪ್ತಿ ಅನುಭವಿಸುತ್ತದೆ. ಒಮ್ಮೆ ಒಬ್ಬರಿಗೆ ಸಹಾಯವನ್ನು ಮಾಡಿನೋಡಬೇಕು.

ಸಹಾಯವನ್ನು ಯಾರಿಗೆ ಮಾಡಬೇಕು ಎನ್ನುವ ವಿಚಾರ ಬರುತ್ತದೆ. ನಿಜವಾದ ಸಹಾಯದ ಅವಶ್ಯಕತೆ ಇರುವವರಿಗೆ ವಿಚಾರ ಮಾಡಿ ಸಹಾಯ ಮಾಡಬೇಕಾಗುತ್ತದೆ. ನಾನು ದಾನ ಮಾಡಿದ್ದೇನೆ ಎನ್ನುವ ಭಾವ ನಮ್ಮಲ್ಲಿ ಬಂದರೆ ಅದು ಅಹಂಕಾರವಾಗುತ್ತದೆ. ಅದಕ್ಕೆ ಬಸವಣ್ಣನವರು ‘ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ ಏಡಿಸಿ ಕಾಡಿತ್ತು ಶಿವನ ಡಂಗುರ ಮಾಡಿದೆನೆನ್ನದಿರಾ ಲಿಂಗಕ್ಕೆ ಮಾಡಿದೆನೆನ್ನದಿರಾ ಜಂಗಮಕ್ಕೆ ಮಾಡಿದೆನೆಂಬುದು ಮನದಲಿಲದಿದ್ದಡೆ ಬೇಡಿದ್ದನೀವನು ಕೂಡಲಸಂಗಮದೇವ’ ಎಂದು ಬೋಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.