ADVERTISEMENT

ವಿಶ್ವ ಮಾನವ ಬಸವಣ್ಣ  

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 13:14 IST
Last Updated 6 ನವೆಂಬರ್ 2020, 13:14 IST
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ   

12ನೇ ಶತಮಾನದಲ್ಲಿ ಕ್ರಾಂತಿಪುರುಷರಾಗಿ ಕಂಗೊಳಿಸಿ ಸಮಾಜದ ಅಂಕುಡೊಂಕನ್ನು ಸರಿಪಡಿಸಲು ತತ್ವಜ್ಞಾನಿಯಾಗಿ ಬೆಳಗಿದ ಮಹಾಚೇತನ ಬಸವಣ್ಣ. ಸಮಾಜ ಸುಧಾರಕನಾಗಿ, ಕವಿಯಾಗಿ, ಭಾವ ಜೀವಿಯಾಗಿ, ವಿಶ್ವಮಾನ್ಯರಾದವರು.

ಗೌತಮಬುದ್ಧನ ದಯೆ, ವರ್ಧಮಾನ ಮಹಾವೀರನ ಅಹಿಂಸೆ, ಮಹಮ್ಮದ್‌ ಪೈಗಂಬರ್‌ ಕೆಚ್ಚು, ಕ್ರಿಸ್ತನ ಸರಳತೆ, ದಯೆ, ಸತ್ಯ, ನಿಷ್ಠೆ, ಅಹಿಂಸೆ ಹೀಗೆ ಅನೇಕ ಗುಣಗಳಿಗೆ ಆಶ್ರಯರಾದವರು ಬಸವಣ್ಣನವರು.

ಕಲ್ಯಾಣದಲ್ಲಿ ಜ್ಞಾನದೀವಿಗೆಯನ್ನು ಬೆಳಗಿಸಿ ವಚನ ಪುಷ್ಪಗಳೆಂಬ ಸುವಾಸನೆಯನ್ನು ಬೀರಿದರು. ಲಿಂಗ ಮೆಚ್ಚಿ ಅಹುದಹುದು ಎಂಬಂತೆ ಅಮೃತ ತುಂಬಿದ ನುಡಿಗಳನ್ನು ಬಿಟ್ಟು ಹೋಗಿದ್ದಾರೆ. ಕಾಯಕ ತತ್ವದ ಮಹತ್ವವನ್ನು ತಿಳಿಸಿ, ಸರ್ವ ಸಮಾನತೆಯ ತತ್ವವನ್ನು ತೋರಿಸಿಕೊಟ್ಟರು. ಎಲ್ಲ ಜಾತಿ, ವರ್ಗದ ಜನರನ್ನು ಆಕರ್ಷಿಸಿದರು.

ADVERTISEMENT

ಕಲ್ಯಾಣದ ಮಾತುಕತೆಯೇ ಅನುಭವ ಮಂಟಪವಾಯಿತು. ಮಾತು ವಚನವಾಯಿತು. ವರ್ಣಭೇದದ ಅನಿಷ್ಠವನ್ನು ದೂರ ಮಾಡಲು ಪ್ರಯತ್ನಿಸಿದರು. ಲಿಂಗವಿದ್ದ ಮನೆಯೇ ಕೈಲಾಸವೆಂದು ಹೇಳಿದರು. ಹುಟ್ಟಿನಿಂದ ಕುಲವನಳಿಯದೇ ಆಚರಣೆಯಿಂದ ನಿರ್ಧರಿಸಬೇಕು ಎಂದರು. ‘ಸಕಲ ಜೀವಾತ್ಮರಿಗೆ ಲೇಸ ಬಯಸುವವನೇ ಶರಣ’ ಎಂದು ಹೇಳಿದರು. ಬಸವಣ್ಣನವರು ಸಾಧಕರು, ಸುಧಾರಕರು, ಬರೀ ಬೋಧಕರಲ್ಲ. ಸರ್ವ ಸಮ ಭಾವನೆ ಅವರಲ್ಲಿತ್ತು. ಬಸವಣ್ಣನವರು ನಿಷ್ಠುರವಾದಿಗಳು, ವಜ್ರಕ್ಕಿಂತಲೂ ಕಠಿಣರಾಗಿ ಹೂವಿಗಿಂತಲೂ ಮೃದುವಾಗಿದ್ದವರು. ಭಕ್ತಿ ಭಂಡಾರಿ ಆದಂತೆ ವಿನಯದಲೂ ಅದ್ವಿತೀಯರು.

‘ಎನ್ನವರೊಲಿದು ಹೊಗಳಿ ಹೊಗಳಿ ಹೊನ್ನ ಶೂಲದಲ್ಲಿಕ್ಕಿದರು’ ಎಂದು ಹೊಗಳಿಕೆಯ ಬಗ್ಗೆ ನುಡಿದಿದ್ದಾರೆ. ಬಸವಣ್ಣನವರು ಒಳ್ಳೆಯ ಸಂಘಟನಾ ಶಕ್ತಿಯುಳ್ಳವರಾಗಿದ್ದರು. ದಾಸೋಹದ ಮಹತ್ವ, ಆತ್ಮಸಾಕ್ಷಿಯಂತೆ ಬದುಕುವುದು. ಶಿವಾನುಭಾವಮಂಟಪ ಸ್ಥಾಪಿಸಿ ಶಿವಶರಣರನ್ನು ಸೇರಿಸುವುದು ಬಸವಣ್ಣನವರ ಅಸಾಧಾರಣ ಕಾರ್ಯಗಳಾಗಿದ್ದವು.

ಅಕ್ಕ ಮಾಹಾದೇವಿಯು ಐವತ್ತೆರಡು ರೀತಿಯಲ್ಲಿ ಬಸವಣ್ಣನವರ ಗುಣಗಳನ್ನು ವಿವರಿಸಿ ನಮೋ ಎಂದಿದ್ದಾಳೆ. ಕೇವಲ ಮಹಾದೇವಿಯಕ್ಕ ಮಾತ್ರವಲ್ಲ ಇಡೀ ವಿಶ್ವವೇ ಅವರ ಅದ್ಬುತವಾದ ಜೀವನ, ಸಾಧನೆ, ಸಮಾಜ ಸೇವೆಗಳಿಗೆ ತಲೆಬಾಗಿ ಶರಣಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.