ADVERTISEMENT

ವಿಕಸಿತ ಭಾರತಕ್ಕೆ ‘ಜಿ ರಾಮ್ ಜಿ’ ಅಡಿಪಾಯ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:12 IST
Last Updated 29 ಜನವರಿ 2026, 6:12 IST
ವಿಜಯಪುರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘ವಿಬಿ–ಜಿ ರಾಮ್ ಜಿ’ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು
ವಿಜಯಪುರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘ವಿಬಿ–ಜಿ ರಾಮ್ ಜಿ’ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು   

ವಿಜಯಪುರ: ‘ಯುಪಿಎ ಆಡಳಿತಾವಧಿಯ ಮನರೇಗಾ ಯೋಜನೆಯು ಭ್ರಷ್ಟಾಚಾರ, ಅಸಮರ್ಪಕ ಅನುಷ್ಠಾನ ಮತ್ತು ಸುಳ್ಳು ಆಸ್ತಿ ಸೃಷ್ಟಿಯ ಕೇಂದ್ರವಾಗಿತ್ತು. ಈ ವೈಫಲ್ಯಗಳನ್ನು ಸರಿಪಡಿಸಿ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಎನ್‌ಡಿಎ ಸರ್ಕಾರವು ಕ್ರಾಂತಿಕಾರಿ ‘ವಿಬಿ-ಜಿ ರಾಮ್ ಜಿ’ ಕಾಯ್ದೆಯನ್ನು ಜಾರಿಗೆ ತಂದಿದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘ವಿಬಿ-ಜಿ ರಾಮ್ ಜಿ’ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ ಶೇ 17.6 ರಷ್ಟು ವೈಯಕ್ತಿಕ ಆಸ್ತಿ ಸೃಷ್ಟಿಯಾಗಿದ್ದರೆ, ಎನ್‌ಡಿಎ ಅವಧಿಯಲ್ಲಿ ಶೇ 62.95ಕ್ಕೆ ಏರಿಕೆಯಾಗಿದೆ. ಹಳೆಯ ಯೋಜನೆಯಲ್ಲಿ ₹290 ಕೋಟಿಗೂ ಹೆಚ್ಚು ಅಕ್ರಮಗಳು ಪತ್ತೆಯಾಗಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ₹6.44 ಕೋಟಿಗೂ ಹೆಚ್ಚು ಆಸ್ತಿಗಳನ್ನು ಜಿಯೋ-ಟ್ಯಾಗ್ ಮಾಡುವ ಮೂಲಕ ಪಾರದರ್ಶಕತೆ ತಂದಿದೆ’ ಎಂದರು.

ADVERTISEMENT

‘ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಬಿತ್ತನೆ ಮತ್ತು ಕಟಾವು ಸಂದರ್ಭದಲ್ಲಿ ರೈತರಿಗೆ ಕೃಷಿ ಕಾರ್ಮಿಕರ ಕೊರತೆಯಾಗದಂತೆ ಯೋಜನೆಯ ಕೆಲಸಗಳನ್ನು 60 ದಿನಗಳ ಕಾಲ ಸ್ಥಗಿತಗೊಳಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ. ನಕಲಿ ಉದ್ಯೋಗ ಸೃಷ್ಟಿ ತಡೆಯಲು ಬಯೊಮೆಟ್ರಿಕ್ ಹಾಜರಾತಿ ಮತ್ತು ಎಐ ತಂತ್ರಜ್ಞಾನ ಅಳವಡಿಸಲಾಗಿದೆ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ ಮಾತನಾಡಿದರು.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ, ಪಕ್ಷದ ಮುಖಂಡರಾದ ಉಮೇಶ ಕಾರಜೋಳ, ವಿಜುಗೌಡ ಪಾಟೀಲ, ಕಾಸುಗೌಡ ಪಾಟೀಲ ಭಾಗವಹಿಸಿದ್ದರು.

ಕಾಂಗ್ರೆಸ್ ದೇಶಾದ್ಯಂತ ಸುಮಾರು 365 ಸಂಸ್ಥೆಗಳಿಗೆ ಇಂದಿರಾ ಗಾಂಧಿ ರಾಜೀವ್‌ ಗಾಂಧಿ ನೆಹರೂ ಪರಿವಾರದ ಹೆಸರನ್ನು ಇಟ್ಟಿದೆ. ಆಗ ಗಾಂಧೀಜಿ ನೆನಪಾಗಲಿಲ್ಲವೇ
ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯ

‘ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ವಿರೋಧ’

‘ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವಾಗಿ 136 ಸ್ಥಾನಗಳನ್ನು ಗೆದ್ದಿದ್ದರೂ ಕುರ್ಚಿಯ ಅಭದ್ರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಮರೆಮಾಚಲು ಕೇಂದ್ರ ಸರ್ಕಾರ ಜಾರಿಗೆ ತಂದ ವಿಬಿ ಜಿ ರಾಮ್ ಜಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ’ ಎಂದು ಈರಣ್ಣ ಕಡಾಡಿ ಆರೋಪಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಇಂದಿರಾ ಕ್ಯಾಂಟಿನ್ ಅನ್ನಭಾಗ್ಯ ಇಂದಿರಾ ಕಿಟ್ ಸೇರಿದಂತೆ ಅನೇಕ ಯೋಜನೆಗಳಿಗೆ ಗಾಂಧೀಜಿ ಹೆಸರು ಏಕೆ ಇಡಲಿಲ್ಲ’ ಎಂದು ಪ್ರಶ್ನಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ ‘ಎಂತಹ ದರಿದ್ರ ಸರ್ಕಾರ ಕರ್ನಾಟಕದಲ್ಲಿ ಬಂದಿದೆ ಎನ್ನುವಂತಹ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಅಬಕಾರಿ ಇಲಾಖೆಯ ಡಿ.ಸಿ ಮಟ್ಟದ ಅಧಿಕಾರಿ ಲೋಕಾಯುಕ್ತರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿರುವುದು ಸರ್ಕಾರದ ವೈಖರಿಯನ್ನು ಬಹಿರಂಗಪಡಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.