
ವಿಜಯಪುರ: 'ಶರಣ ರಕ್ಷಕ ವೀರ ಗಣಾಚಾರಿ ಮಡಿವಾಳ ಮಾಚಿದೇವ 12ನೇ ಶತಮಾನದ ತೀವ್ರಾವಾದಿಯಾಗಿದ್ದರು. ಸಾತ್ವಿಕ ಮನೋಭಾವದ ಅವರು ಬಸವಣ್ಣನವರ ವಿಶ್ವಾಸ ಗಳಿಸಿದ್ದರು’ ಎಂದು ಪ್ರೊ. ಎಂ.ನಾಗರಾಜ ಹೇಳಿದರು.
ವೀರಶೈವ ಮಹಾಸಭೆಯ ಲಿಂಗಾಯತ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು ಅವರು.
‘ಮಾಚಿದೇವರು ಶರಣರ ಬಟ್ಟೆ ಶುಚಿಗೊಳಿಸುವ ಕಾಯಕದ ಜೊತೆಗೆ, ಶರಣ ತತ್ವಗಳಿಂದ ಶರಣರ ಮನಸ್ಸುಗಳನ್ನು ಶುದ್ಧಗೊಳಿಸುತ್ತಿದ್ದರು. ಶರಣರಿಗೆ ಅವಹೇಳನ, ಟೀಕೆ, ಅವಮಾನ, ವ್ರತಹೀನ ಕಾರ್ಯ ಮಾಡಿದವರಿಗೆ ಶಿಕ್ಷೆ ನೀಡುತ್ತಿದ್ದರು’ ಎಂದರು.
ಸಾಹಿತಿ ಜಂಬುನಾಥ್ ಕಂಚಾಣಿ ಮಾತನಾಡಿ, ‘ಒಂದು ಧರ್ಮ ಸಮಾಜ, ಉಳಿದು ಬೆಳೆಯಬೇಕಾದರೆ ಪ್ರೀತಿ, ದಯೆ, ತ್ಯಾಗ ಸಹನೆಗಳೊಡನೆ ಕೆಲವು ರಕ್ಷಣಾತ್ಮಕ ತಂತ್ರಗಳನ್ನು ಬಳಸಿಕೊಳ್ಳಬೇಕು. ಧರ್ಮನಿಂದನೆ, ಟೀಕೆ ಮಾಡುವ ವಿರೋಧಿಗಳನ್ನು ಶಿಕ್ಷಿಸುವ ಕಾರ್ಯವಾದಾಗ ಮಾತ್ರ ಒಂದು ಸಮುದಾಯ ರಕ್ಷಣೆ ಹೊಂದುತ್ತದೆ. ಅಂತವರನ್ನು 12ನೇ ಶತಮಾನದಲ್ಲಿ ಗಣಾಚಾರಿಗಳೆಂದು ಕರೆಯುತ್ತಿದ್ದರು. ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ವೀರಗಣಾಚಾರಿಗಳಾಗಿದ್ದರು ಹಾಗೂ ತಾತ್ವಿಕ ಸಿದ್ಧಾಂತವಾದಿಗಳಾಗಿದ್ದರು’ ಎಂದು ಹೇಳಿದರು.
ಎಂಜಿನಿಯರಿಂಗ್ ಓದುತ್ತಿರುವ ಬಡ ವಿದ್ಯಾರ್ಥಿನಿಯರಾದ ನೇತ್ರಾವತಿ ಪಾಟೀಲ್ ಮತ್ತು ಅನುಶ್ರೀ ಹೂಗಾರ ಅವರಿಗೆ ವೀರಶೈವ ಲಿಂಗಾಯತ ಮಹಾಸಭೆಯ ಪರವಾಗಿ ₹50,000 ಸಹಾಯಧನ ನೀಡಲಾಯಿತು.
ಬಸವಲಿಂಗ ಸ್ವಾಮಿಗಳು, ಹಂಡೆವಜೀರ್ ಸಮಾಜದ ರಾಜ್ಯ ಅಧ್ಯಕ್ಷರಾದ ಎಸ್.ಎಸ್. ಪಾಟೀಲ, ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ವಿ.ಸಿ. ನಾಗಠಾಣ, ಸಿದ್ದನಗೌಡ ಬೀದಗೊಂಡ, ವಸಂತಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.