ADVERTISEMENT

ಅದ್ಧೂರಿ ವೀರಭದ್ರೇಶ್ವರ ಜಾತ್ರೆ

400 ಪುರವಂತರರು ಭಾಗಿ; ಗಮನ ಸೆಳೆದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 15:53 IST
Last Updated 3 ಡಿಸೆಂಬರ್ 2019, 15:53 IST
ಬಬಲೇಶ್ವರ ಪಟ್ಟಣದಲ್ಲಿ ಮಂಗಳವಾರ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಪುರವಂತರು ಶಸ್ತ್ರಗಳನ್ನು ಚುಚ್ಚಿಕೊಂಡರು
ಬಬಲೇಶ್ವರ ಪಟ್ಟಣದಲ್ಲಿ ಮಂಗಳವಾರ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಪುರವಂತರು ಶಸ್ತ್ರಗಳನ್ನು ಚುಚ್ಚಿಕೊಂಡರು   

ತಿಕೋಟಾ (ವಿಜಯಪುರ ಜಿಲ್ಲೆ): ಬಬಲೇಶ್ವರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ 61ನೇ ಜಾತ್ರಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ ಜರುಗಿತು.

ಡಾ.ಮಹಾದೇವ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಜಾತ್ರೆಯಲ್ಲಿ ಬೆಳಿಗ್ಗೆ ಅಗ್ನಿ ಕುಂಡಕ್ಕೆ ಪುಟು ಹಚ್ಚಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರನ ಪಲ್ಲಕಿಯ ಮೆರವಣಗೆ, ಸುಮಂಗಲೆಯರ ಆರತಿ, ವಿವಿಧ ಕಲಾ ತಂಡಗಳು, ಕರಡಿ ಮಜಲು ಕುಣಿತ, ವಿವಿಧ ವಾದ್ಯಗಳೊಂದಿಗೆ ಸಾಗಿತು.

ಜಾತ್ರೆಯಲ್ಲಿ 400 ಪುರವಂತರು ಭಾಗವಹಿಸಿದ್ದರು. ಕಾವಿ ಧೋತರ, ಕಾವಿ ಪೇಟ, ತೋಳಿಗೆ ಬೆಳ್ಳಿಯ ನಾಗರ, ಕಿವಿಗೆ ರುದ್ರಾಕ್ಷಿ, ಹಣೆಗೆ ವಿಭೂತಿ, ಸೊಂಟಕ್ಕೆ ಗಂಟೆ, ಕತ್ತಿಗೆ ರುದ್ರಾಕ್ಷಿ ಮಾಲೆ, ಎದೆಯ ಮೇಲೆ ನರಸಿಂಹನ ಮುಖ, ಕೈಗೆ ರುದ್ರಾಕ್ಷಿ, ಸೊಂಟಕ್ಕೆ ಬಣ್ಣದ ಬಟ್ಟೆ ಧರಿಸಿ ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ನಿಂಬೆ ಹಣ್ಣಿನ ಶಸ್ತ್ರ ಹಿಡಿದ ಪುರವಂತರು ಮೆರವಣಿಗೆಯಲ್ಲಿ ಸಾಗಿದರು.

ADVERTISEMENT

1,050 ಅಡಿ ಉದ್ದದ ತಂತಿಯನ್ನು ಹಿಟ್ನಳ್ಳಿ ಗ್ರಾಮದ ಶಿವಾನಂದ ಬಗಲಿ, ಬಬಲೇಶ್ವರದ ಬಸಪ್ಪ ಸುಕಾಲಿ ಎಂಬ ಪುರವಂತರು ತಮ್ಮ ಗಲ್ಲದಲ್ಲಿ ಚುಚ್ಚಿಕೊಂಡು ಎಳೆದರು. ಈ ದೃಷ್ಯ ನೋಡುಗರನ್ನು ಒಂದು ಕ್ಷಣ ಮಂತ್ರಮುಗ್ಧರನ್ನಾಗಿಸಿತು. ಭಕ್ತಾದಿಗಳು ದಾರಿಯುದ್ದಕ್ಕೂ ನಿಂಬೆ ಹಣ್ಣನ್ನು ಸಿಡಿಸುತ್ತಾ ಸಾಗಿದರು.

ಎರಡೂ ಕೈ, ನಾಲಿಗೆ, ಹುಬ್ಬಿಗೆ ಏಕಕಾಲದಲ್ಲಿ ಶಸ್ತ್ರಗಳನ್ನು ಚುಚ್ಚಿಕೊಂಡು, ಇದೇ ಶಸ್ತ್ರವನ್ನು ಇನ್ನೊಬ್ಬ ಪುರವಂತ ಇದೇ ಮಾದರಿಯಲ್ಲಿ ಏಕಕಾಲದಲ್ಲಿ ಚುಚ್ಚಿಕೊಂಡು ಸಾಕ್ಷಾತ ವೀರಭದ್ರೇಶ್ವರನ ಪವಾಡ ಪ್ರದರ್ಶಿಸಿದರು.

ಕಲ್ಲಪ್ಪ ಮನಗೊಂಡ, ಚನ್ನಪ್ಪ ಭದ್ರನವರ, ಈರಯ್ಯ ಹಿರೇಮಠ, ಈರಪ್ಪ ಸುಕಾಲಿ, ದುಂಡಪ್ಪ ಮೇಡೆಗಾರ, ಹಣಮಂತ ತಾಯಿಗೊಂಡ ಎಂಬ ಪುರವಂತರು ಬೆಂಕಿ ಕಡ್ಡಿ ಇಲ್ಲದೆಯೇ ಕರ್ಪೂರವನ್ನು ಹೊತ್ತಿಸಿದರು.

ವಿವಿಧ ಪವಾಡಗಳನ್ನು ಮಾಡುತ್ತ ಪುರವಂತರು ಖಾಲಿ ಕೊಡದಲ್ಲಿ ಅಕ್ಕಿಯನ್ನು ತುಂಬಿ, ಆ ಅಕ್ಕಿಯಲ್ಲಿ ಕತ್ತಿ (ಶಸ್ತ್ರ)ಯಿಂದ ಚುಚ್ಚಿ ಕೊಡವನ್ನು ಮೇಲಕ್ಕೆತ್ತಿದರು. ಜಿಟಿಜಿಟಿ ಮಳೆ ಬರುತ್ತಿದ್ದರೂ ಪುರವಂತರ ಹಾಗೂ ಭಕ್ತರ ಕಾಯಕ ಹಾಗೆಯೇ ಸಾಗಿತು.

ಸುಮಾರು 4 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಸೇರಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲದೇ ಮಹಾರಾಷ್ಟ್ರದಿಂದ ಕೂಡ ಬಂದಿದ್ದರು.

ಹರಕೆ ಹೊತ್ತ ಭಕ್ತಾದಿಗಳು ಮಡಿಯಿಂದ ಅಗ್ನಿ ಕುಂಡಕ್ಕೆ ಹಾಯ್ದರು. ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.