ADVERTISEMENT

ಮತ್ತೆ ಕಂಪಿಸಿದ ಭೂಮಿ: ಬೆಚ್ಚಿದ ವಿಜಯಪುರ ಜನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 10:39 IST
Last Updated 11 ಸೆಪ್ಟೆಂಬರ್ 2021, 10:39 IST
ವಿಜಯಪುರ ಗಾಂಧಿ ಚೌಕಿ ದೃಶ್ಯ  (ಪ್ರಾತಿನಿಧಿ ಚಿತ್ರ)
ವಿಜಯಪುರ ಗಾಂಧಿ ಚೌಕಿ ದೃಶ್ಯ  (ಪ್ರಾತಿನಿಧಿ ಚಿತ್ರ)   

ವಿಜಯಪುರ: ಇಲ್ಲಿನ ಜಲನಗರ, ಕೀರ್ತಿನಗರ ಸೇರಿದಂತೆ ಅಲ್ಲಲ್ಲಿ ಶನಿವಾರ ಬೆಳಿಗ್ಗೆ 8.18ರಿಂದ 8.20ರ ವೇಳೆಯಲ್ಲಿ ಭೂಮಿ ಕಂಪಿಸಿದ ಅನುಭವ ಹಾಗೂ ಭೂಮಿ ಒಳಗಿನಿಂದ ಭಾರೀ ಶಬ್ಧ ಕೇಳಿಬಂದಿದೆ.

ಒಂದು ವಾರದಲ್ಲೇ ಎರಡನೇ ಬಾರಿ ಭೂಕಂಪದ ಅನುಭವವಾಗಿರುವುದರಿಂದಜನರು ಬೆಚ್ಚಿದ್ದಾರೆ.

‘ಶನಿವಾರ ಭೂಕಂಪವಾದ ಬಗ್ಗೆ ಮಾಧ್ಯಮಗಳು, ಜನರಿಂದ ಮಾಹಿತಿ ಬಂದ ಬಳಿಕ ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆಯನ್ನು ಸಂಪರ್ಕಿಸಲಾಗಿತ್ತು. ಆದರೆ, ಭೂಕಂಪ ಆಗಿರುವ ಬಗ್ಗೆ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿಲ್ಲ ಎಂದು ಖಚಿತಪಡಿಸಿದೆ. ಜನರು ಭಯಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ಸೆಪ್ಟೆಂಬರ್ 4ರಂದು ರಾತ್ರಿ 11.47ರಿಂದ 11.49ರ ನಡುವೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 3.9 ಭೂಕಂಪದ ತೀವ್ರತೆ ದಾಖಲಾಗಿತ್ತು. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಭೂಕಂಪನದ ಕೇಂದ್ರ ಬಿಂದುವಾಗಿತ್ತು. ವಿಜಯಪುರ ಜಿಲ್ಲೆಯಲ್ಲಿ ಭೂಮಿಯೊಳಗೆ ಶಿಲಾ ಪದರ ದುರ್ಬಲವಾಗಿರುವುದೇ ಭೂಕಂಪಕ್ಕೆ ಕಾರಣ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆ ವಿಜ್ಞಾನಿಗಳು ವರದಿ ನೀಡಿದ್ದಾರೆ. ಅಲ್ಲದೇ, ವಿಜಯಪುರ ಜಿಲ್ಲೆಯಲ್ಲಿ ಆಗಾಗ ಭೂಕಂಪದ ಅನುಭವವಾಗುತ್ತಿರುವುದರಿಂದ ಸಮಗ್ರ ಅಧ್ಯಯನದ ಅಗತ್ಯವಿದೆ ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಸೆ.4ರಂದು ರಾತ್ರಿ ಭೂಕಂಪವಾಗಿದ್ದರಿಂದ ಜನರಿಗೆ ಹೆಚ್ಚಿನ ಅನುಭವವಾಗಿತ್ತು. ಆದರೆ, ಈ ಶನಿವಾರ ಬೆಳಿಗ್ಗೆ ಆಗಿರುವುದರಿಂದ ಇತರೆ ಬಾಹ್ಯ ಶಬ್ದಗಳಿಂದಾಗಿ ಜನರಿಗೆ ಭೂಕಂಪದ ಅನುಭವ ಅಲ್ಪಮಟ್ಟಿಗೆ ಆಗಿದೆ. ಅಲ್ಲದೇ, ಮನೆ, ಕಟ್ಟಡಗಳ ಒಳಗೆ ಇದ್ದವರಿಗೆ ಹೆಚ್ಚು ಅನುಭವಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.