ADVERTISEMENT

ವಿಜಯಪುರ | ಚುನಾವಣೆಯಲ್ಲಿ ಪಾಠ ಕಲಿಸಿ: ಬಾರಿಕಾಯಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 13:34 IST
Last Updated 3 ಡಿಸೆಂಬರ್ 2021, 13:34 IST
ಶ್ರೀಮಂತ ಬಾರಿಕಾಯಿ
ಶ್ರೀಮಂತ ಬಾರಿಕಾಯಿ   

ವಿಜಯಪುರ: ವಿಜಯಪುರ–ಬಾಗಲಕೋಟೆ ವಿಧಾನ ಪರಿಷತ್‌ ಕ್ಷೇತ್ರದ ಚುನಾವಣೆ ಪೂರ್ವದಲ್ಲೇ ಕಾಂಗ್ರೆಸ್‌, ಬಿಜೆಪಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಅವಿರೋಧ ಆಯ್ಕೆಗೆ ಯತ್ನ ನಡೆಸಿದ್ದವು. ಸ್ಥಳೀಯ ಸಂಸ್ಥೆಗಳ ಮತದಾರರಿಗೆ ಬೆಲೆ ಇಲ್ಲದಂತೆ ಮಾಡಲು ಯತ್ನಿಸಿದ್ದ ಎರಡೂ ರಾಜಕೀಯ ಪಕ್ಷಗಳಿಗೆ ಮತದಾರರು ಪಾಠ ಕಲಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಶ್ರೀಮಂತ ಬಾರಿಕಾಯಿ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ರಾಜಕೀಯ ಪಕ್ಷಗಳು ಸಂವಿಧಾನ ಮತ್ತು ಪ್ರಜಾಪ‍್ರಭುತ್ವ ವಿರೋಧಿ ನಿಲುವು ತಾಳಿದ್ದವು. ಆದರೆ, ಐವರು ಪಕ್ಷೇತರರ ಸ್ಪರ್ಧೆಯಿಂದ ಸ್ಥಳೀಯ ಸಂಸ್ಥೆಗಳ ಮತದಾರರ ಹಕ್ಕು ಉಳಿಯಿತು ಎಂದರು.

ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ, ಪುರಸಭೆ, ಪಟ್ಟಣ ಪಂಚಾಯ್ತಿ ಸದಸ್ಯರ ಹಕ್ಕುಗಳ ಪರ ಹಾಗೂ ಅವಳಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ADVERTISEMENT

ಸ್ವಾಭಿಮಾನ ಇರುವುದು ಕೇವಲ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಅವರಿಗೆ ಮಾತ್ರವಲ್ಲ. ಉಳಿದ ಐವರು ಪಕ್ಷೇತರ ಅಭ್ಯರ್ಥಿಗಳಿಗೂ ಸ್ವಾಭಿಮಾನ ಇದೆ. ಯಾವುದೇ ಆಸೆ, ಆಮಿಷಗಳಿಗೆ ಐವರೂ ಒಳಗಾಗದೇ ಸ್ಪರ್ಧಿಸಿದ್ದೇವೆ ಎಂದರು.

ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಅವರ ಸಹಕಾರದಿಂದ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಮುಖಂಡರಾದ ಸಿದ್ರಾಮಪ್ಪ ಜಿಗಜಿಣಗಿ, ಯಮನಾಜಿ ಸಾಳುಂಕೆ, ಜಿತೇಂದ್ರ ಕಾಂಬಳೆ, ಪ್ರಕಾಶ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ಬಿಜೆಪಿ ನನ್ನ ಕಡು ವೈರಿ: ಜಿಗಜಿಣಗಿ

ವಿಜಯಪುರ: ಬಿಜೆಪಿ ನನ್ನ ಕಡು ವೈರಿ. ಸಂಸದ ರಮೇಶ ನನ್ನ ತಮ್ಮನಾದರೂ ಅವನಿಗೆ ನಾನೇ ವೋಟ್‌ ಹಾಕಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ, ನನಗೆ ಹಕ್ಕಿದೆ. ಅಣ್ಣ, ತಮ್ಮ ಮನೆಗೆಷ್ಟೇ ಸೀಮಿತ ಎಂದುಹಿರಿಯ ಮುಖಂಡ ಸಿದ್ರಾಮಪ್ಪ ಜಿಗಜಿಣಗಿ ಹೇಳಿದರು.

ಬಿಜೆಪಿಯಲ್ಲಿ ಸದ್ಯ ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ಒಳ್ಳೆಯವರು. ಬೇರೆ ಯಾರೊಬ್ಬರೂ ಸರಿಯಿಲ್ಲ ಎಂದರು.

ನಾನು ಜತನಾ ಪರಿವಾರದಿಂದ ಬಂದವನು. ಸದ್ಯ ಯಾವ ಪಕ್ಷದಲ್ಲೂ ಇಲ್ಲ. ಮುಂದೆ ಕಾಂಗ್ರೆಸ್‌ ಸೇರುವ ಇಚ್ಛೆ ಇದೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀಮಂತ ಬಾರಿಕಾಯಿಗೆ ನನ್ನ ಬೆಂಬಲ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.