ADVERTISEMENT

ತಾಂಬಾ | ಗವಿಸಿದ್ಧೇಶ್ವರ ಮುಕ್ತಿ ಮಂದಿರಕ್ಕೆ ₹25 ಲಕ್ಷ: ಶಾಸಕ ಅಶೋಕ ಮನಗೂಳಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 14:08 IST
Last Updated 31 ಅಕ್ಟೋಬರ್ 2024, 14:08 IST
ತಾಂಬಾ ಗ್ರಾಮದ ಗವಿಸಿದ್ಧೇಶ್ವರ ಮುಕ್ತಿ ಮಂದಿರದಲ್ಲಿ ಉಪವಾಸ ವ್ರತಾಚರಣೆಯ ಮುಕ್ತಾಯ ಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು
ತಾಂಬಾ ಗ್ರಾಮದ ಗವಿಸಿದ್ಧೇಶ್ವರ ಮುಕ್ತಿ ಮಂದಿರದಲ್ಲಿ ಉಪವಾಸ ವ್ರತಾಚರಣೆಯ ಮುಕ್ತಾಯ ಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು   

ತಾಂಬಾ: ಗ್ರಾಮದ ಗವಿಸಿದ್ಧೇಶ್ವರ ಮುಕ್ತಿ ಮಂದಿರಕ್ಕೆ ಶಾಸಕರ ನಿಧಿಯಿಂದ ₹25 ಲಕ್ಷ ನೀಡುವುದಾಗಿ ಸಿಂದಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.

ಗವಿಸಿದ್ಧೇಶ್ವರ ಜಾತ್ರಾ ನಿಮಿತ್ತ ದೀಪಾವಳಿ ಅಮಾವಾಸ್ಯೆ ದಿನ ಹಿಂದೂ ಮುಸ್ಲಿಂ ಸರ್ವ ಜನರ ಕಲ್ಯಾಣಕಾಗಿ ಗವಿಸಿದ್ಧೇಶ್ವರ ಮುಕ್ತಿ ಮಂದಿರದಲ್ಲಿ ಗುರುವಾರ ನಡೆದ ಉಪವಾಸ ವ್ರತದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಗವಿಸಿದ್ಧೇಶ್ವರ ದೇವರು ಭಕ್ತರ ಇಷ್ಟಾರ್ಥಗಳನ್ನು ಅವರವರ ಭಾವಕ್ಕೆ ತಕ್ಕಂತೆ ನೇರವೇರಿಸುತ್ತ ಸುತ್ತ-ಮುತ್ತಲಿನ ಹತ್ತಾರು ಗ್ರಾಮಗಳಲ್ಲದೇ ನೆರೆಯ ಮಹಾರಾಷ್ಟ್ರದಲೂ ಅಪಾರ ಭಕ್ತಸ್ತೋಮ ಹೊಂದಿದೆ. ಹಾಲುಮತ ಸಮಾಜದ ಜನ ನನ್ನ ಮೇಲಿಟ್ಟಿರುವ ಪ್ರೀತಿಗೆ ಬೆರಗಾಗಿದ್ದೇನೆ. ಅವರ ಋಣ ಎಂದಿಗೂ ಮರೆಯಲ್ಲ. ನನ್ನ ಕೈಲಾದಮಟ್ಟಿಗೆ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ಸಿಂದಗಿ ಮತ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ನನ್ನ ಕನಸಿಗೆ ಹಾಲುಮತ ಸಮಾಜದ ಜನತೆ ಕೈ ಜೋಡಿಸಬೇಕು. ಹಾಲುಮತದ ಕಂಬಳಿ ಹಾರಾಡಲಿ ಎಂಬ ಉದ್ದೇಶದಿಂದ ಅವರನ್ನು ಸ್ಮರಿಸುತ್ತಿರುವೆ’ ಎಂದರು.

ADVERTISEMENT

‘ಭಂಡಾರ (ಪ್ರಸಾದ) ಕೇವಲ ಹಳದಿಯ ಸಂಕೇತ ಅಷ್ಟೇ ಅಲ್ಲ. ಅದು ಹಳದಿಯ ಬಂಗಾರದಂತಿರುವ ಸತ್ಯದ ಸಂಕೇತ. ಹಾಲಿನಂತೆ ಪರಿಶುದ್ಧವಾಗಿರುವ ಹಾಲುಮತ ಸಮಾಜಕ್ಕೆ ನಮ್ಮ ತಂದೆ ಎಂ.ಸಿ.ಮನಗೂಳಿ ಅವರು ಸಾಕಷ್ಟು ಸ್ಥಾನಮಾನ ನೀಡಿದ್ದಾರೆ. ಹಬ್ಬ ಹರಿದಿನಗಳಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಕೋಮು ಸೌಹಾರ್ದತೆ ಮೂಡಿ ಜನರು ಕೂಡಿಬಾಳುವಂತೆ ಮಾಡುತ್ತದೆ’ ಎಂದರು.

ಗವಿಸಿದ್ಧೇಶ್ವರ ದೇವರ ಮತ್ತು ಮಹಾಲಕ್ಷ್ಮೀಯ ದೇವಿಯ ಪಲ್ಲಕ್ಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಅಪಾರ ಭಕ್ತರ ಉಪವಾಸ ವ್ರತಾಚರಣೆ ಮಾಡಿದ ಭಕ್ತರಿಗೆ ಬಾಳೆಹಣ್ಣು, ಸಜ್ಜೆಗಡುಬು, ಅಂಬಲಿ, ಸಜ್ಜಕವನ್ನು ವಿತರಿಸಲಾಯಿತು.

ಜೆ.ಆರ್.ಪೂಜಾರಿ, ಎಂ.ಬಿ.ಪೂಜಾರಿ, ಎಸ್.ಎಸ್.ಹಿರೇಕುರಬರ, ಅಪ್ಪಣ್ಣ ಕಲ್ಲೂರ, ಪರಸು ಬಿಸನಾಳ, ರಾಯಗೊಂಡ ಪೂಜಾರಿ, ಅಮರ್ ವಸ್ತ್ರದ, ಜಕ್ಕಪ್ಪ ತ.ಹತ್ತಳ್ಳಿ, ಎಮ್.ಎಸ್.ಕನ್ನುರ, ಬಸವರಾಜ ರೊಟ್ಟಿ, ಚಂದ್ರಮ ಮೂಲಿಮನಿ, ಪುಟುಗೌಡ ಪಾಟೀಲ, ಭೂಸಪ್ಪ ಪೂಜಾರಿ, ರೇವಣಸಿದ್ದ ಶಿವಣಗಿ ಮತ್ತಿತರರು ಭಾಗವಹಿಸಿದ್ದರು.

ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇವರ ಮುಕ್ತಿ ಮಂದಿರದಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ ವಿಶೇಷ ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.