ADVERTISEMENT

ವಿಜಯಪುರ ಮಹಾನಗರ ಪಾಲಿಕೆ: ಮೇಯರ್‌, ಉಪ ಮೇಯರ್ ಕುರ್ಚಿಗೆ ಕಸರತ್ತು

ವಿಜಯಪುರ ಮಹಾನಗರ ಪಾಲಿಕೆ; ಮೊದಲ ಅವಧಿ ಜ.9ಕ್ಕೆ ಮುಕ್ತಾಯ

ಬಸವರಾಜ ಸಂಪಳ್ಳಿ
Published 17 ಡಿಸೆಂಬರ್ 2024, 4:51 IST
Last Updated 17 ಡಿಸೆಂಬರ್ 2024, 4:51 IST
<div class="paragraphs"><p>ಚುನಾವಣೆ </p></div>

ಚುನಾವಣೆ

   

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಹಾಲಿ ಮೇಯರ್‌ ಮತ್ತು ಉಪಮೇಯರ್‌ ಅಧಿಕಾರವಧಿ 2025ರ ಜನವರಿ 9ಕ್ಕೆ ಮುಕ್ತಾಯವಾಗಲಿದ್ದು, ಮುಂದಿನ ಅವಧಿಗೆ ಈ ಸ್ಥಾನಗಳು ಯಾರ ಪಾಲಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಎರಡನೇ ಅವಧಿಗೆ ಮೇಯರ್‌ ಸ್ಥಾನವು ಹಿಂದುಳಿದ ವರ್ಗ 2ಎ ಹಾಗೂ ಉಪ ಮೇಯರ್‌ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 

ADVERTISEMENT

ಹಾಲಿ ಮೇಯರ್‌ ಮೆಹಜಬಿನ್‌ ಹೊರ್ತಿ ಅವರೇ ಎರಡನೇ ಅವಧಿಗೆ ಮೇಯರ್‌ ಆಗಿ ಮುಂದುವರಿಯಲು ಅವರ ಪತಿ ಅಬ್ದುಲ್‌ ರಜಾಕ್‌ ಹೊರ್ತಿ ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಬೆಂಗಳೂರಿಗೆ ತೆರಳಿ ಸಚಿವರು, ಪಕ್ಷದ ವರಿಷ್ಠರನ್ನು ಭೇಟಿಯಾಗಿ ಲಾಭಿ ನಡೆಸಿದ್ದಾರೆ. ಆದರೆ, ಇನ್ನುಳಿದ ಆಕಾಂಕ್ಷಿಗಳು ಸೇರಿದಂತೆ ಕಾಂಗ್ರೆಸ್‌ ವಲಯದಲ್ಲಿ ಹೊರ್ತಿ ಎರಡನೇ ಅವಧಿಗೆ ಮುಂದುವರಿಸಲು ವಿರೋಧ ವ್ಯಕ್ತವಾಗಿದೆ. 

‘ಹೊರ್ತಿ ಅವರು ಮೇಯರ್‌ ಆಗಿ ಅಭಿವೃದ್ಧಿ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ. ಇತರೆ ಸದಸ್ಯರನ್ನು ಕಡೆಗಣಿಸಿದ್ದಾರೆ’ ಎಂದು ಆರೋಪಿಸಿ, ಅವರನ್ನು ಎರಡನೇ ಅವಧಿಗೆ ಮುಂದುವರಿಸಲು ಪಕ್ಷದಲ್ಲೇ ತಡೆ ಎದುರಾಗಿದೆ.

2ಎ ಪ್ರವರ್ಗದಲ್ಲಿ ಹಾಲಿ ಮೇಯರ್‌ ಮೆಹಜಬಿನ್‌ ಹೊರ್ತಿ ಸೇರಿದಂತೆ ಕಾಂಗ್ರೆಸ್‌ನಲ್ಲಿ ಶಫೀಕ್‌ ಮನಗೂಳಿ, ಆಸೀಫ್‌ ಶಾನವಾಲೆ, ಅಶೋಕ ನ್ಯಾಮಗೊಂಡ, ಸದ್ಧಾಂ ನಾಡೆವಾಲೆ ಕೂಡ ಇದ್ದು, ಇವರು ಸಹ ಮೇಯರ್ ಹುದ್ದೆ ಮೇಲೆ ಕಣ್ಣಿಟ್ಟಿದ್ದು, ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಪರದೆಯ ಹಿಂದೆ ಬಿಜೆಪಿ ಯತ್ನ:

‘ಮೇಯರ್‌, ಉಪ ಮೇಯರ್‌ ಮುಂದಿನ ಬಾರಿ ಬಿಜೆಪಿಯವರೇ ಆಗಲಿದ್ದಾರೆ’ ಎಂದು ಈಗಾಗಲೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪಾಲಿಕೆ ಉಪ ಚುನಾವಣೆ ಪ್ರಚಾರದ ವೇಳೆ ಹೇಳಿದ್ದಾರೆ. ಪಾಲಿಕೆ ಅಧಿಕಾರದ ಗದ್ದುಗೆ ಮೇಲೆ ಬಿಜೆಪಿ ಸದಸ್ಯರನ್ನು ಕೂರಿಸುವ ನಿಟ್ಟಿನಲ್ಲಿ ಶಾಸಕರು ಜಯದ ತಂತ್ರ ಹೆಣೆಯಲಿದ್ದಾರೋ ಅಥವಾ ಕಳೆದ ಬಾರಿಯಂತೆ ಕೈಚೆಲ್ಲಿ ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡುತ್ತಾರೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.  

ಮಹಾನಗರ ಪಾಲಿಕೆಯಲ್ಲಿ ಅಧಿಕ ಸ್ಥಾನಗಳನ್ನು ಬಿಜೆಪಿ ಹೊಂದಿದ್ದರೂ ಮೊದಲ ಅವಧಿಯಲ್ಲಿ ಮೇಯರ್‌, ಉಪ ಮೇಯರ್‌ ಚುನಾವಣೆಯಲ್ಲಿ ಈ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲಾಗದೇ ಕಾಂಗ್ರೆಸ್‌ ಎದುರು ಸೋತು ವಿರೋಧ ಪಕ್ಷದ ಸ್ಥಾನವನ್ನು ಆಲಂಕರಿಸಿತ್ತು. ಈ ಬಾರಿಯಾದರೂ ಶಾಸಕರು ಅಧಿಕಾರ ಕೊಡಿಸುವರೇ ಎಂದು ಬಿಜೆಪಿ ಸದಸ್ಯರು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. 

ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಎಂ.ಎಸ್.ಕರಡಿ, ರಾಧಾ ಮೋಹನ್‌ ದೇವಗಿರಿ, ಕುಮಾರ ಗಡಗಿ, ರಾಜಶೇಖರ ಕುರಿ, ಶ್ರೀಮತಿ ಕುಂಸಿ ಹಾಗೂ ಉಪಮೇಯರ್‌ ಸ್ಥಾನಕ್ಕೆ ಸ್ವಪ್ನಾ ಕಣಮುಚನಾಳ ಮತ್ತು ರಶ್ಮಿ ಕೋರಿ ಅರ್ಹರಿದ್ದಾರೆ. ಯಾರಿಗೆ ಯತ್ನಾಳ ಹಸಿರು ನಿಶಾನೆ ತೋರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.