ADVERTISEMENT

ವಿಜಯಪುರ | ಅಪಘಾತ: ವರ್ಷಕ್ಕೆ 500ಕ್ಕೂ ಅಧಿಕ ಸಾವು: ಎಸ್‌ಪಿ ಋಷಿಕೇಶ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 13:17 IST
Last Updated 6 ಸೆಪ್ಟೆಂಬರ್ 2024, 13:17 IST
ಎಸ್.ಪಿ ಋಷಿಕೇಶ ಸೋನಾವಣೆ
ಎಸ್.ಪಿ ಋಷಿಕೇಶ ಸೋನಾವಣೆ    

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯಲ್ಲಿ 2023ರಲ್ಲಿ 443 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಸುಮಾರು 500ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕುಂಟೋಜಿ ಜಾತ್ರೆಗೆ ಬಂದಿದ್ದ ಯುವಕರು ರಸ್ತೆ ಬದಿ ಇಳಿದಿದ್ದಾಗ ವೇಗವಾಗಿ ಬಂದಿರುವ ಬೈಕ್ ಅವರಿಗೆ ಡಿಕ್ಕಿಹೊಡೆದು ದುರ್ಘಟನೆ ಸಂಭವಿಸಿದೆ. ರಾಜ್ಯ ಹೆದ್ದಾರಿಗಳ ಮೇಲೆ ಸಂಚರಿಸುವ ವೇಳೆ ಬೈಕ್ ಸವಾರರು ಕನಿಷ್ಠ ಹೆಲ್ಮೆಟ್ ಧರಿಸಿ ಪ್ರಯಾಣ ಮಾಡಬೇಕು. ಇಲ್ಲದಿದ್ದಲ್ಲಿ ಅಪಘಾತಗಳಿಂದ ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ADVERTISEMENT

18 ವರ್ಷ ವಯಸ್ಸಿನ ಒಳಗಿನವರಿಗೆ ಬೈಕ್ ಓಡಿಸಲು ಕೊಟ್ಟರೆ ಅವರ ತಂದೆ ತಾಯಿ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಟಂಟಂ, ಗೂಡ್ಸ್ ವಾಹನಗಳ ವಾಹನ ಚಾಲಕರಿಗೂ ರಸ್ತೆ ನಿಯಮಗಳ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಹಾಗೂ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಾಗಿ ಸೂಚನೆಗಳನ್ನು ನೀಡಿರುತ್ತೇವೆ. ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು. ಗೂಡ್ಸ್ ಚಾಲಕರು ಸಾರಿಗೆ ನಿಯಮಗಳಂತೆ ವಾಹನಗಳನ್ನು ಓಡಿಸಬೇಕು. ಅಪಘಾತಗಳಾಗದಂತೆ ಮುನ್ನೆಚ್ಚರಿಕೆ ವಹಿಸಿ ಅಮಾಯಕರ ಜೀವ ಹಾನಿ ತಪ್ಪಿಸಬೇಕು ಎಂದು ಎಸ್ಪಿ ತಿಳಿಸಿದರು. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ,ಪಿಎಸ್‌ಐ ಸಂಜಯ ತಿಪರೆಡ್ಡಿ ಇದ್ದರು.

ಅಪಘಾತದ ಸ್ಥಳಕ್ಕೆ ಎಸ್ಪಿ ಭೇಟಿ: ಕುಂಟೋಜಿ ಸಮೀಪದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದ ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನಾವಣೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.